ನವದೆಹಲಿ: ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರ ಆರ್ಥಿಕ ಚೇತರಿಕೆಗೆ ಹಂತ, ಹಂತವಾಗಿ ತೆಗೆದುಕೊಂಡ ಕ್ರಮದಿಂದಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ಯ 2020ರ ಡಿಸೆಂಬರ್ ತಿಂಗಳ ಸಂಗ್ರಹದಲ್ಲಿ ದಾಖಲೆಯ 1.15 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿರುವುದಾಗಿ ವಿತ್ತ ಸಚಿವಾಲಯ ಶುಕ್ರವಾರ(2021ರ ಜನವರಿ 01) ತಿಳಿಸಿದೆ.
ಜಿಎಸ್ ಟಿ ಆದಾಯ ಸಂಗ್ರಹದಲ್ಲಿ 2020ರ ಡಿಸೆಂಬರ್ ತಿಂಗಳಿನಲ್ಲಿ 1.15 ಲಕ್ಷ ಕೋಟಿ ಬೃಹತ್ ಮೊತ್ತದ ಸಂಗ್ರಹವಾಗಿದೆ. 2019ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಜಿಎಸ್ ಟಿ ಆದಾಯದಲ್ಲಿ ಶೇ.12ರಷ್ಟು ಹೆಚ್ಚು ಸಂಗ್ರಹವಾಗಿದೆ. 2020ರ ನವೆಂಬರ್ ತಿಂಗಳಿನಲ್ಲಿ ಒಂದು ಕೋಟಿ ಜಿಎಸ್ ಟಿ ಆದಾಯ ಸಂಗ್ರಹವಾಗಿತ್ತು ಎಂದು ತಿಳಿಸಿದೆ.
ಅತೀ ಹೆಚ್ಚು ಜಿಎಸ್ ಟಿ ಸಂಗ್ರಹಕ್ಕೆ ದಾದ್ರ ಮತ್ತು ನಗರ್ ಹವೇಲಿ ಸಾಕ್ಷಿಯಾಗಿದ್ದು, ಶೇ.68ರಷ್ಟು ಹೆಚ್ಚಳ ಸಾಧಿಸಿದೆ. 2019ರ ಡಿಸೆಂಬರ್ ನಲ್ಲಿ 154 ಕೋಟಿ ಜಿಎಸ್ ಟಿ ಸಂಗ್ರಹವಾಗಿದ್ದರೆ, 2020ರ ಡಿಸೆಂಬರ್ ನಲ್ಲಿ 259 ಕೋಟಿ ಜಿಎಸ್ ಟಿ ಸಂಗ್ರಹಿಸಿರುವುದಾಗಿ ವಿವರಿಸಿದೆ.
ಆರ್ಥಿಕ ಬೆಳವಣಿಗೆಗೆ ಕೇಂದ್ರ ಸರಕಾರ ಹಲವು ಘೋಷಣೆಗಳನ್ನು ಮಾಡಿದ ಬಳಿಕವೂ ಅಕ್ಟೋಬರ್ ತಿಂಗಳ ಜಿಎಸ್ ಟಿ ತೆರಿಗೆ ಸಂಗ್ರಹದಲ್ಲಿ ಇಳಿಕೆ ಕಂಡಿತ್ತು. ಇದು ಸರಕಾರಕ್ಕೆ ಕಠಿಣ ಪರಿಸ್ಥಿತಿಯನ್ನು ತಂದೊಡ್ಡಲಿದೆ ಎಂದು ವರದಿ ವಿಶ್ಲೇಷಿಸಿತ್ತು. ಈ ಹಿನ್ನೆಲೆಯಲ್ಲಿ ಆದಾಯ ಸಂಗ್ರಹದ ಕುರಿತು ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯತೆ ಇದೆ ಎಂದು ವರದಿ ಹೇಳಿತ್ತು.
ಇದನ್ನೂ ಓದಿ:2021ರ ಜನವರಿ 1ರಂದು ಜಗತ್ತಿನಾದ್ಯಂತ 3.7 ಲಕ್ಷ ನವಜಾತ ಶಿಶುಗಳ ಜನನ: ಯೂನಿಸೆಫ್
ಸೆಪ್ಟಂಬರ್ ತಿಂಗಳ ಜಿಎಸ್ ಟಿ ಸಂಗ್ರಹದಲ್ಲಿಯೂ ಕುಸಿತ ಕಂಡಿದ್ದು, 91,916 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಇದು ಸರಕು ಮತ್ತು ಸೇವಾ ತೆರಿಗೆ ಸಂಗ್ರವು 19 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು.