ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ)ಯ ಅಕ್ಟೋಬರ್ ತಿಂಗಳ ಸಂಗ್ರಹದಲ್ಲಿ ಶೇ.5.59ರಷ್ಟು ಇಳಿಕೆ ಕಂಡಿದ್ದು, 95,380 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದರಿಂದ ಕೇಂದ್ರ ಸರಕಾರಕ್ಕೆ ಮತ್ತಷ್ಟು ಆರ್ಥಿಕ ಹೊಡೆತದ ಚಿಂತೆಯನ್ನು ಹೆಚ್ಚಿಸಿದೆ ಎಂದು ವರದಿ ತಿಳಿಸಿದೆ.
ಜಿಎಸ್ ಟಿ ತೆರಿಗೆ ಸಂಗ್ರಹ ಅಕ್ಟೋಬರ್ ತಿಂಗಳ ಲೆಕ್ಕಚಾರದ ಪ್ರಕಾರ, ಸೆಂಟ್ರಲ್ (ಸಿಜಿಎಸ್ ಟಿ) ಜಿಎಸ್ ಟಿ 17,582 ಕೋಟಿ ರೂಪಾಯಿ ಹಾಗೂ ರಾಜ್ಯದ ಜಿಎಸ್ ಟಿ(ಎಸ್ ಜಿಎಸ್ ಟಿ) 23,674 ಕೋಟಿ ರೂಪಾಯಿ, ಸಂಘಟಿತ ಜಿಎಸ್ ಟಿ(ಐಜಿಎಸ್ ಟಿ) 46,517 (ಆಮದು ತೆರಿಗೆ 21,446ಕೋಟಿ ಸೇರಿ) ಕೋಟಿ ರೂಪಾಯಿ, ಸೆಸ್ (ಮೇಲ್ ತೆರಿಗೆ) 7,607 ಕೋಟಿ ರೂಪಾಯಿ ಸಂಗ್ರಹವಾಗಿರುವುದಾಗಿ ಕೇಂದ್ರ ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಕೇಂದ್ರದ (ಸಿಜಿಎಸ್ ಟಿ) ತೆರಿಗೆ ಒಟ್ಟು 20,642 ಕೋಟಿ ಸಂಗ್ರಹವಾಗಿದ್ದರೆ, ರಾಜ್ಯದ ಸಂಘಟಿತ(ಐಜಿಎಸ್ ಟಿ) ತೆರಿಗೆ ಒಟ್ಟು 13,971 ಕೋಟಿ ರೂಪಾಯಿ ನಿಯಮಾನುಸಾರ ಸಂಗ್ರಹವಾಗಿತ್ತು. ಕೇಂದ್ರ ಮತ್ತು ರಾಜ್ಯ ಸರಕಾರದಿಂದ 2019ರ ಅಕ್ಟೋಬರ್ ತಿಂಗಳಿನಲ್ಲಿ ಸಿಜಿಎಸ್ ಟಿ ಮೂಲಕ 38,224 ಕೋಟಿ ಹಾಗೂ ರಾಜ್ಯದಿಂದ 37, 645 ಕೋಟಿ ಸಂಗ್ರಹವಾಗಿರುವುದಾಗಿ ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಆರ್ಥಿಕ ಬೆಳವಣಿಗೆಗೆ ಕೇಂದ್ರ ಸರಕಾರ ಹಲವು ಘೋಷಣೆಗಳನ್ನು ಮಾಡಿದ ಬಳಿಕವೂ ಅಕ್ಟೋಬರ್ ತಿಂಗಳ ಜಿಎಸ್ ಟಿ ತೆರಿಗೆ ಸಂಗ್ರಹದಲ್ಲಿ ಇಳಿಕೆ ಕಂಡಿದೆ. ಇದು ಸರಕಾರಕ್ಕೆ ಕಠಿಣ ಪರಿಸ್ಥಿತಿಯನ್ನು ತಂದೊಡ್ಡಲಿದೆ ಎಂದು ವರದಿ ವಿಶ್ಲೇಷಿಸಿದೆ. ಈ ಹಿನ್ನೆಲೆಯಲ್ಲಿ ಆದಾಯ ಸಂಗ್ರಹದ ಕುರಿತು ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯತೆ ಇದೆ ಎಂದು ವರದಿ ಹೇಳಿದೆ.
ಸೆಪ್ಟಂಬರ್ ತಿಂಗಳ ಜಿಎಸ್ ಟಿ ಸಂಗ್ರಹದಲ್ಲಿಯೂ ಕುಸಿತ ಕಂಡಿದ್ದು, 91,916 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಇದು ಸರಕು ಮತ್ತು ಸೇವಾ ತೆರಿಗೆ ಸಂಗ್ರವು 19 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು.