Advertisement

ಜಿಎಸ್‌ಟಿ ಲಾಭ ಜನರಿಗೆ ಸಿಗಲಿ: ಗೊಂದಲ ನಿವಾರಣೆ ಅಗತ್ಯ

08:17 AM Jul 10, 2017 | |

ಇಡೀ ದೇಶವನ್ನೇ ಒಂದು ಮಾರುಕಟ್ಟೆಯಾಗಿ ಪರಿವರ್ತಿಸುವ ಸಾಮರ್ಥ್ಯ ಜಿಎಸ್‌ಟಿಗಿದೆ. ಹೀಗಾಗಬೇಕಾದರೆ ತೆರಿಗೆ ಕಳ್ಳತನ ಮಾಡಲು ರಂಗೋಲಿ ಕೆಳಗೆ ತೂರುವ ವರ್ತಕರಿಗೆ ಲಗಾಮು ಹಾಕಿದರೆ ಮಾತ್ರ ಇದು ಸಾಧ್ಯ. 

Advertisement

ಸರಕು ಮತ್ತು ಸೇವಾ ತೆರಿಗೆಗೆ ಚಾಲನೆ ನೀಡುವಾಗ ಪ್ರಧಾನಿ ಮೋದಿ ಜಿಎಸ್‌ಟಿಗೆ “ಗುಡ್‌ ಆ್ಯಂಡ್‌ ಸಿಂಪಲ್‌ ಟ್ಯಾಕ್ಸ್‌’ ಎಂಬ ಹೊಸ ವ್ಯಾಖ್ಯಾನ ನೀಡಿದ್ದರು. ಜಿಎಸ್‌ಟಿ ಆಚರಣೆಗೆ ಬಂದು ಹತ್ತು ದಿನಗಳಾಗಿವೆ. ಈ ಹೊಸ ತೆರಿಗೆ ಪದ್ಧತಿಗೆ ಒಬ್ಬೊಬ್ಬರು ಒಂದೊಂದು ರೀತಿ ವಿವರಣೆ ನೀಡುತ್ತಿದ್ದಾರೆ. ಒಟ್ಟಾರೆ ಯಾರಿಗೂ ಇದು ಏನೆಂದು ಪೂರ್ತಿಯಾಗಿ ಅರ್ಥವಾಗಿಲ್ಲ. ವ್ಯಾಪಾರಿಗಳು, ಉದ್ಯಮಿಗಳು, ಅಧಿಕಾರಿಗಳು ತಮಗೆ ದಕ್ಕಿದಷ್ಟನ್ನು ಮಾತ್ರ ವಿವರಿಸಿ ಗೊಂದಲಗಳನ್ನು ಇನ್ನಷ್ಟು ಹೆಚ್ಚಿಸುತ್ತಿದ್ದಾರೆ.    

ಇಷ್ಟು ದೊಡ್ಡ ಆರ್ಥಿಕ ಸುಧಾರಣೆಯನ್ನು ಬರೀ ಹತ್ತು ದಿನಗಳಲ್ಲಿ ಲೋಪವಿಲ್ಲದಂತೆ ಜಾರಿಗೆ ತರಲು ಯಾವುದೇ ಸರಕಾರಕ್ಕೆ ಸಾಧ್ಯವಿಲ್ಲ ನಿಜ. ಆದರೆ ಜನರಿಗೆ ಕನಿಷ್ಠ ಗೊಂದಲ ಆಗದಂತೆ ಮಾಡುವುದು ಸಾಧ್ಯವಿತ್ತು. ಇದಕ್ಕಾಗಿ ಪೂರ್ವತಯಾರಿ ಮಾಡ ಬೇಕಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಜಿಎಸ್‌ಟಿ ಹೇಳಿದಷ್ಟು ಸರಳವೂ ಅಲ್ಲ ಉತ್ತಮವೂ ಅಲ್ಲ ಎಂಬ ಭಾವನೆ ಬಂದಿದ್ದರೆ ಅದು ಜನರ ತಪ್ಪಲ್ಲ. 

ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಕಡಿವಾಣ ಬೀಳಬಹುದು ಎಂದು ಜನರು ನಿರೀಕ್ಷಿಸಿದ್ದರು. ಆದರೆ ಜಿಎಸ್‌ಟಿ ಬಳಿಕ ಆಹಾರ ಪದಾರ್ಥಗಳ ಬೆಲೆ ಹೆಚ್ಚುತ್ತಾ ಹೋಗುತ್ತಿದೆ. ಆಹಾರ ವಸ್ತುಗಳಿಗೆ ಜಿಎಸ್‌ಟಿಯಲ್ಲಿ ಶೂನ್ಯ ತೆರಿಗೆ ವಿಧಿಸಲಾಗಿದೆ. ಆದರೆ ಕೆಲವು ವ್ಯಾಪಾರಿಗಳು ಯಾವ್ಯಾವುದೋ ಲೆಕ್ಕ ತೋರಿಸಿ ಜನರಿಂದ ಹೆಚ್ಚಿನ ಹಣ ವಸೂಲು ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಬೆಲೆ ಹೆಚ್ಚಾಗುವುದು ಸಾಮಾನ್ಯವಾಗಿದ್ದರೂ ಜನರು ಇದು ಜಿಎಸ್‌ಟಿಯಿಂದಲೇ ಆಗಿದೆ ಎಂದು ಭಾವಿಸುತ್ತಿದ್ದಾರೆ. ಹೊಟೇಲು, ಅಂಗಡಿ, ಮಾಲ್‌ಗ‌ಳಲ್ಲಿ ಜಿಎಸ್‌ಟಿ ಹೆಸರಲ್ಲಿ ಬಹಿರಂಗ ಸುಲಿಗೆಯಾಗುತ್ತಿದೆ. ಅದರಲ್ಲೂ ಹೊಟೇಲುಗಳಲ್ಲಿ ಜು.1ರಿಂದಲೇ ಎಲ್ಲ ಬೆಲೆಯನ್ನು ದಿಢೀರ್‌ ಹೆಚ್ಚಿಸಿರುವುದು ಯಾವ ಆಧಾರದಲ್ಲಿ ಎನ್ನುವುದು ಸ್ಪಷ್ಟವಾಗಿಲ್ಲ. ಎಸಿ ಹೊಟೇಲ್‌ಗ‌ಳಿಗೆ ಶೇ. 18 ಮತ್ತು ಎಸಿ ಇಲ್ಲದ ಹೊಟೇಲಿಗೆ ಶೇ. 12 ತೆರಿಗೆ ನಿಗದಿ ಮಾಡಲಾಗಿದೆ. ಹೊಟೇಲುಗಳಲ್ಲಿ ಇದನ್ನು ಹೊರತುಪಡಿಸಿ ಇನ್ನಿತರ ಶುಲ್ಕಗಳನ್ನು ವಸೂಲು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಜಿಎಸ್‌ಟಿ ಜಾರಿಯಾಗುವುದಕ್ಕಿಂತ ಮೊದಲೇ ತಯಾರಾಗಿರುವ ವಸ್ತುಗಳಿಗೆ ಯಾವ ಬೆಲೆ ಅನ್ವಯಿಸಬೇಕೆಂಬ ಗೊಂದಲವಿತ್ತು. ಅದನ್ನು  ಸರಕಾರ ಬಗೆಹರಿಸಿದೆ. ಇದರ ಹೊರತಾಗಿಯೂ ಅಧಿಕ ಬೆಲೆ ವಸೂಲು ಮಾಡುತ್ತಿರುವುದು ಸರಿಯಲ್ಲ.  

 ಈ ಸುಲಿಗೆಯನ್ನು ತಡೆಯುವ ಸಲುವಾಗಿ ಕೇಂದ್ರ 200 ಮಂದಿ ಐಎಎಸ್‌. ಐಆರ್‌ಎಸ್‌ ಅಧಿಕಾರಿಗಳನ್ನು ನಿಯೋಜಿಸಿರುವುದು ಸ್ವಾಗತಾರ್ಹ ನಿರ್ಧಾರ. ಈ ಅಧಿಕಾರಿಗಳು ಪ್ರಮುಖ ನಗರ, ಪಟ್ಟಣಗಳಿಗೆ ಭೇಟಿಯಿತ್ತು ಸರಕಾರ ನಿಗದಿ ಮಾಡಿದ ದರವನ್ನು ಅನುಸರಿಸಲಾಗುತ್ತಿದೆಯೇ ಎಂದು ಪರಿಶೀಲಿಸಲಿದ್ದಾರೆ. ಆದರೆ ಇಷ್ಟು ದೊಡ್ಡ ದೇಶಕ್ಕೆ  ಬರೀ 200 ಅಧಿಕಾರಿಗಳು ಸಾಕೇ? ಅವರು ಒಂದೊಂದೇ ನಗರ, ಪಟ್ಟಣಕ್ಕೆ ಬರುವಷ್ಟರಲ್ಲಿ ಸಾಕಷ್ಟು ಸುಲಿಗೆಯಾಗಿರುತ್ತದೆ.  ಹಾಗೆಂದು ಜಿಎಸ್‌ಟಿ ಬಂದ ಬಳಿಕ ಎಲ್ಲವೂ ದುಬಾರಿಯಾಗಿದೆ ಎಂದಲ್ಲ. ವಾಹನಗಳು, ಪೆಟ್ರೋಲು, ಡೀಸಿಲ್‌, ಗೃಹೋಪಕರಣಗಳು, ಮೊಬೈಲ್‌, ಎಲೆಕ್ಟ್ರಾನಿಕ್‌ ವಸ್ತುಗಳೆಲ್ಲ ತುಸು ಅಗ್ಗವಾಗಿವೆ. ಆದರೆ ಉಳಿದ ವಸ್ತುಗಳು ಬೆಲೆ ಹೆಚ್ಚಳವಾದ ಕಾರಣ ಈ ಬೆಲೆ ಇಳಿಕೆ ಜನರ ಅನುಭವಕ್ಕೆ ಬಂದಿಲ್ಲ. ಅಲ್ಲದೆ ಮೂಲದಲ್ಲಿಯೇ ಜಿಎಸ್‌ಟಿಯಲ್ಲೂ ಕೆಲವೊಂದು ವೈರುಧಗಳಿವೆ. ಉದಾ: ವಿಮಾನದ ಟಿಕೇಟಿಗೆ ಶೇ. 5 ತೆರಿಗೆ, ರೈಲಿನ ಟಿಕೇಟಿಗೆ ಶೇ 12 ತೆರಿಗೆ ನಿಗದಿಪಡಿಸಲಾಗಿದೆ. ಶ್ರೀಮಂತರು ಪ್ರಯಾಣಿಸುವ ವಿಮಾನಕ್ಕೆ ಕಡಿಮೆ, ಬಡವರು ಮತ್ತು ಮಧ್ಯಮ ವರ್ಗದವರು ಪ್ರಯಾಣಿಸುವ ರೈಲಿಗೆ ಹೆಚ್ಚು ತೆರಿಗೆ ಏಕೆ?  ಒಂದು ದೇಶ ಒಂದು ತೆರಿಗೆ ಎಂಬ ಆಶಯದೊಂದಿಗೆ ಜಾರಿಯಾಗಿರುವ ಜಿಎಸ್‌ಟಿಯ ಪ್ರಯೋಜನ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಕ್ಕಿದಾಗಲೇ ಅದು ಸಾರ್ಥಕವಾಗುತ್ತದೆ. ಇಡೀ ದೇಶವನ್ನೇ ಒಂದು ಮಾರುಕಟ್ಟೆಯಾಗಿ ಪರಿವರ್ತಿಸುವ ಸಾಮರ್ಥ್ಯ ಜಿಎಸ್‌ಟಿಗಿದೆ. ಹೀಗಾಗಬೇಕಾದರೆ ಅದನ್ನು ಲೋಪವಿಲ್ಲದಂತೆ ಪರಿಣಾಮಕಾರಿಯಾಗಿ ಅನುಷ್ಠಾನಿಸಬೇಕು. ತೆರಿಗೆ ಕಳ್ಳತನ ಮಾಡಲು ರಂಗೋಲಿ ಕೆಳಗೆ ತೂರುವ ವರ್ತಕರಿಗೆ ಲಗಾಮು ಹಾಕಿದರೆ ಮಾತ್ರ ಇದು ಸಾಧ್ಯ. ಇದಕ್ಕಾಗಿ ಜಿಎಸ್‌ಟಿ ಕುರಿತು ಜನಸಾಮಾನ್ಯರಿಗೆ ಇನ್ನಷ್ಟು ತಿಳುವಳಿಕೆ ನೀಡುವ ಅಗತ್ಯವಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next