Advertisement

ಜಿಎಸ್‌ಎಸ್‌ ಹೆಸರಲ್ಲಿ ಕೇಂದ್ರ

06:43 AM Jan 01, 2019 | |

ಬೆಂಗಳೂರು: ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಪ್ರತಿಷ್ಠಾನವು ಜಿ.ಎಸ್‌.ಶಿವರುದ್ರಪ್ಪ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ನಿರ್ಮಾಣಕ್ಕೆ ಮುಂದಾಗಿದೆ.

Advertisement

ರಾಷ್ಟ್ರಕವಿ ಜಿಎಸ್‌ಎಸ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ನಿರ್ಮಾಣಕ್ಕಾಗಿ 2017ರಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ವಿ.ಶಂಕರ್‌, ಕೊತ್ತನೂರು ಜಂಬೂಸವಾರಿ ದಿಣ್ಣೆಯಲ್ಲಿ 35 ಗುಂಟೆ ಸರ್ಕಾರಿ ಜಮೀನನ್ನು ಶಾಶ್ವತ ಕ್ರಯಕ್ಕೆ ಮಂಜೂರು ಮಾಡಿದ್ದರು. ಈಗ ಆದೇ ಜಾಗದಲ್ಲಿ ಜಿಎಸ್‌ಎಸ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ನಿರ್ಮಿಸಲು ಪ್ರತಿಷ್ಠಾನ ಮುಂದಾಗಿದೆ.

ಜಿಎಸ್‌ಎಸ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ಪೂರಕವಾಗುವಂತಹ ಪರಿಕರಗಳು, ಆಡಳಿತ ಕಚೇರಿ, ಗ್ರಂಥಾಲಯ ಹಾಗೂ ಸಭಾಂಗಣ ನಿರ್ಮಿಸಲಾಗುವುದು. ಗ್ರಂಥಾಲಯದಲ್ಲಿ ಜಿಎಸ್‌ಎಸ್‌ ರಚನೆಯ ಎಲ್ಲ ಕೃತಿಗಳು ಜತೆಗೆ ಅವರ ಆಸಕ್ತಿಯ ಕೃತಿಗಳನ್ನು ಇರಿಸಲು ಪ್ರತಿಷ್ಠಾನ ಚಿಂತನೆ ನಡೆಸಿದೆ.

ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ಕಟ್ಟಡ ನಿರ್ಮಾಣ ಸಂಬಂಧ ಲೋಕೋಪಯೋಗಿ ಇಲಾಖೆಗೆ ನೀಲನಕ್ಷೆ ಹಾಗೂ ಯೋಜನಾ ವೆಚ್ಚ ತಿಳಿಸುವಂತೆ ಪ್ರತಿಷ್ಠಾನದ ಸಮಿತಿ ಸದ್ಯದಲ್ಲಿಯೇ ಪ್ರಸ್ತಾವನೆ ಸಲ್ಲಿಸಲಿದೆ. ಪ್ರತಿಷ್ಠಾನದ ಕಾರ್ಯಗಳಿಗಾಗಿ 2016-17ರಲ್ಲಿ 12 ಲಕ್ಷ ರೂ., 2017-18ರಲ್ಲಿ 15 ಲಕ್ಷ ರೂ. ಹಾಗೂ 2018-19ರಲ್ಲಿ 12 ಲಕ್ಷ ರೂ.ಗಳನ್ನು ಮೀಸಲಿಟ್ಟಿತ್ತು. ಈ ಹಣವನ್ನು ಪ್ರತಿಷ್ಠಾನ ಕಾಯ್ದಿರಿಸಿಕೊಂಡು ಜಿಎಸ್‌ಎಸ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.

ಜಿಎಸ್‌ಎಸ್‌ ಕುರಿತು ಎಲ್ಲ ಜಿಲ್ಲೆಗಳಲ್ಲೂ ವಿಚಾರ ಸಂಕಿರಣ, ಸಂವಾದ ಮತ್ತು ಕಮ್ಮಟ ಹಾಗೂ ಅವರ ಸಾಹಿತ್ಯವನ್ನು ಮರು ಓದಿಗೆ ಒಳಪಡಿಸುವ ಕಾರ್ಯಕ್ರಮ ರೂಪಿಸಲು ಪ್ರತಿಷ್ಠಾನ ಆಲೋಚಿಸಿದೆ. ಜಿಎಸ್‌ಎಸ್‌ ಸಮಗ್ರ ಕೃತಿಗಳನ್ನು ಸಂಪುಟ ರೂಪದಲ್ಲಿ ಹಾಗೂ ಜಿಎಸ್‌ಎಸ್‌ ಕಾಲದಲ್ಲಿ ಬರುತ್ತಿದ್ದ “ಸಾಧನೆ’ ಪತ್ರಿಕೆಯನ್ನು ಮತ್ತೆ ಹೊರತರುವ ಉದ್ದೇಶ ಪ್ರತಿಷ್ಠಾನಕ್ಕಿದೆ.

Advertisement

ವಿಜ್ಞಾನದ ವಿಷಯಗಳನ್ನು ಮಕ್ಕಳಿಗೆ ಮುಟ್ಟಿಸಲು ಕುವೆಂಪು ಅವರು ಪ್ರಕಟಿಸಿದ್ದ ಅಂಗೈಅಗಲದ ಪುಸ್ತಕಗಳ ಮಾದರಿಯಲ್ಲಿಯೇ ಜಿಎಸ್‌ಎಸ್‌ ಪ್ರತಿಷ್ಠಾನದಿಂದ ಸಣ್ಣ ಸಣ್ಣ ಪುಸ್ತಕಗಳನ್ನು ಪ್ರಕಟಿಸಲು ಚಿಂತನೆ ನಡೆಸಿದೆ. ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಪ್ರತಿಷ್ಠಾನ ಸ್ಥಾಪನೆಗೆ 2016 ಡಿ.29ರಂದು ಸರ್ಕಾರ ಆದೇಶಿಸಿತ್ತು. ಜತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಕಾರ್ಯಾಕಾರಿ ಸಮಿತಿ ರಚಿಸಿತ್ತು.

ಕೆ.ವೈ.ನಾರಾಯಣಸ್ವಾಮಿ, ಪುತ್ತೂರು ನರಸಿಂಹ ನಾಯಕ್‌, ನಟರಾಜ್‌ ಬೂದಾಳ್‌, ಎಚ್‌.ಎಸ್‌.ರಾಘವೇಂದ್ರರಾವ್‌, ಚಂದ್ರಶೇಖರ ನಂಗಲಿ, ಡಾ.ಎಂ.ಎಸ್‌.ಆಶಾದೇವಿ, ತಾರಿಣಿ ಶುಭದಾಯಿನಿ ಹಾಗೂ ಜಿಎಸ್‌ಎಸ್‌ ಪುತ್ರ ಜಿ.ಎಸ್‌.ಜಯದೇವ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಿತ್ತು. ಕಾರ್ಯಾಕಾರಿ ಸಮಿತಿ 2017 ಜೂ.14ರಂದು ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಪ್ರತಿಷ್ಠಾನ ನೋಂದಣಿ ಮಾಡಿಸಿತ್ತು.

ಜಿಎಸ್‌ಎಸ್‌ ಆಶಯದಂತೆ ಕಾವ್ಯ ಮೀಮಾಂಸೆ, ಕಾವ್ಯ ವಿಮರ್ಶೆ, ಸಂಸ್ಕೃತಿ ಚಿಂತನೆ ಹಾಗೂ ವೈಚಾರಿಕ ಚಿಂತನೆ ಬೆಳೆಸುವ ರೀತಿಯಲ್ಲಿ ಜಿಎಸ್‌ಎಸ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಕಾರ್ಯ ನಿರ್ವಹಿಸಲಿದೆ. ಜಿಎಸ್‌ಎಸ್‌ರ ಸಾಹಿತ್ಯವನ್ನು ಜನರೆಡೆಗೆ ಕೊಂಡೊಯ್ಯುವ ಕಾರ್ಯವನ್ನು ಪ್ರತಿಷ್ಠಾನ ಮಾಡಲಿದೆ.
-ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಜಿಎಸ್‌ಎಸ್‌ ಪ್ರತಿಷ್ಠಾನದ ಅಧ್ಯಕ್ಷ

* ಶ್ರುತಿ ಮಲೆನಾಡತಿ 

Advertisement

Udayavani is now on Telegram. Click here to join our channel and stay updated with the latest news.

Next