ಬೆಂಗಳೂರು: ದೇಶದ ಜಿಡಿಪಿಗಿಂತ ರಾಜ್ಯದ ಜಿಎಸ್‌ಡಿಪಿ ಉತ್ತಮವಾಗಿದೆ ಎಂದು 2018-22 ರ ಮಧ್ಯಮಾವಧಿ ವಿತ್ತೀಯ ಯೋಜನೆ ವರದಿಯಲ್ಲಿ ತಿಳಿಸಲಾಗಿದೆ. ಗುರುವಾರ ವಿಧಾನಸಭೆಯಲ್ಲಿ ಮಂಡಿಸಿರುವ ವರದಿಯಲ್ಲಿ 2017-18 ನೇ ಸಾಲಿಗೆ ದೇಶದ ಜಿಡಿಪಿ 6.7 ಇದ್ದು, ರಾಜ್ಯದ ಜಿಎಸ್‌ಡಿಪಿ 8.5 ರಷ್ಟಿದ್ದು, ದೇಶದ ಆರ್ಥಿಕ ಬೆಳವಣಿಗೆಗಿಂತ ಉತ್ತಮವಾಗಿದೆ ಎಂದು ಹೇಳಿದೆ.
ವಿತ್ತೀಯ ಮಾನದಂಡಗಳ ಪ್ರಕಾರ ರಾಜ್ಯದ ಆರ್ಥಿಕ ನಿರ್ವಹಣೆಯು ಪರಿಷ್ಕೃತ ಅಂದಾಜುಗಳಲ್ಲಿ ಕಂಡು ಬರುವಂತೆ ರಾಜಸ್ವ ಹೆಚ್ಚವರಿ ಮತ್ತು ವಿತ್ತೀಯ ಕೊರತೆ ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಮಿತಿಯೊಳಗೆ ಇರಲಿದೆ ಎಂದು ವರದಿ ತಿಳಿಸಿದೆ.
ರಾಜ್ಯದ ಆರ್ಥಿಕ ಹೊಣೆಗಾರಿಕೆ ಅಧೀನಿಯಮದ ಅಗತ್ಯತೆಗೆ ಅನುಗುಣವಾಗಿ ಮುಖ್ಯ ಕಾರ್ಯದರ್ಶಿ ನೇತೃತ್ವದ ವಿತ್ತೀಯ ನಿರ್ವಹಣೆ ಮತ್ತು ಪರಿಶೀಲನಾ ಸಮಿತಿ ಆರ್ಥಿಕ ಹೊಣೆಗಾರಿಕೆಯ ಮಾನದಂಡಗಳಿಗೆ ಅನುಸಾರವಾಗಿ ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಸಲಹೆ ನೀಡಿದ್ದು, 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ, ರೈತರ ಸಾಲ ಮನ್ನಾದಿಂದ ಆರ್ಥಿಕ ಹೊರೆ ಹೆಚ್ಚಾಗಲಿದ್ದು, ಸಂಪನ್ಮೂಲ ಕ್ರೋಢಿಕರಣಕ್ಕೆ ಆದ್ಯತೆ ನೀಡುವಂತೆ ಸಲಹೆ ನೀಡಿದೆ.
ಅಲ್ಲದೇ ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನ ಕಡಿಮೆಯಾಗಿದೆ. ಆರ್‌ಕೆಆರ್‌ವೈ, ನರೇಗಾ ಮತ್ತು ಆರ್‌ಎಂಎಸ್‌ಎ ಯೋಜನೆಗಳಿಂದ ರಾಜ್ಯಕ್ಕೆ ಅರ್ಧಕ್ಕಿಂತ ಕಡಿಮೆ ಹಣ ಬಂದಿದ್ದು, ಅದನ್ನು ಭರಿಸಲು ರಾಜ್ಯ ಸರ್ಕಾರ ಸ್ವಂತ ಸಂಪನ್ಮೂಲಗಳಿಂದ ಹೆಚ್ಚುವರಿ ಖರ್ಚು ಮಾಡುವಂತಾಗಿದೆ. ರಾಜ್ಯ ಸರ್ಕಾರದ ಇಲಾಖೆಗಳು ಕೇಂದ್ರ ಸರ್ಕಾರದ ಅನುದಾನ ಪಡೆಯುವಲ್ಲಿ ಮುತುವರ್ಜಿ ವಹಿಸಿಬೇಕೆಂದು ಸಲಹೆ ನೀಡಿದೆ.
ಜಿಎಸ್‌ಟಿ ಸಂಗ್ರಹದ ಅನಿಶ್ಚಿತತೆಯಿಂದಾಗಿ 2018-19 ನೇ ಸಾಲಿನ 2ನೇ ತ್ತೈಮಾಸಿಕದಲ್ಲಿಯೂ ಮುಕ್ತ ಮಾರುಕಟ್ಟೆಯಲ್ಲಿ ಸಾಲ ಪಡೆಯಲು ಸಮಿತಿ ಶಿಫಾರಸ್ಸು ಮಾಡಿದೆ. ರಾಜಸ್ವ ಹೆಚ್ಚಳಕ್ಕೆ ಗಣಿ ಮತ್ತು ಖನಿಜಗಳ ಆದಾಯವನ್ನು ಹರಾಜಿನ ಮೂಲಕ ಹೆಚ್ಚಿಸಿಕೊಳ್ಳಬೇಕೆಂದು ಸಲಹೆ ನೀಡಿದೆ.
ಸರ್ಕಾರ ನೀಡುವ ಸಹಾಯಧನವನ್ನು ಫಲಾನುಭವಿಗಳ ಆಧಾರ್‌ನೊಂದಿಗೆ ಜೋಡಿಸುವುದರಿಂದ ಸೋರಿಕೆ ತಡೆಗಟ್ಟಲು ಸಾಧ್ಯವಾಗುತ್ತದೆ. ಅಲ್ಲದೇ ಬ್ಯಾಂಕುಗಳಲ್ಲಿನ ಸರ್ಕಾರದ ಠೇವಣಿ ಹಣವನ್ನು ಸರಿಯಾಗಿ ನಿರ್ವಹಣೆ ಮಾಡುವಂತೆ ಸಮಿತಿ ಸಲಹೆ ನೀಡಿದೆ.