Advertisement
ರಾಜ್ಯ ಸರಕಾರದಿಂದ 2023-24ನೇ ಸಾಲಿನಲ್ಲಿ ಕುಟುಂಬದಲ್ಲಿ ಯಜಮಾನಿಗೆ ಪ್ರತೀ ತಿಂಗಳು 2 ಸಾವಿರ ರೂ. ಗಳನ್ನು ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿ ಆದೇಶಿಸಿದ್ದು, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಮೇ 20ರಂದು ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. ಅನಂತರ ಸರಕಾರ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಕುಟುಂಬದ ಯಜಮಾನಿಗೆ 2 ಸಾವಿರ ರೂ. ನೀಡುವಂತೆ ಮಾರ್ಗಸೂಚಿ ಹೊರಡಿಸಿತ್ತು.
ಯಜಮಾನಿಯರು
ಜೂ. 15ರಿಂದ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುವುದಾಗಿ, ಆಗಸ್ಟ್ 15ರಂದು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವುದಾಗಿ ಸರಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು. ಆದರೆ ಅರ್ಜಿ ಸಲ್ಲಿಕೆ ಇನ್ನೂ ಆರಂಭಗೊಂಡಿಲ್ಲ. ಈ ಮಾಹಿತಿ ಇಲ್ಲದೆ ಯಜಮಾನಿಯರು ನಗರ, ಪೇಟೆಗಳಲ್ಲಿರುವ ಸೈಬರ್ ಸೆಂಟರ್, ಸೇವಾ ಸಿಂಧು, ಗ್ರಾಮ ವನ್ ಕೇಂದ್ರಗಳಿಗೆ ಆಗಮಿಸಿ ಹಿಂದಿರುಗುತ್ತಿದ್ದಾರೆ. ಗೃಹಲಕ್ಷ್ಮೀ ಯೋಜನೆ ಸಂಬಂಧಿಸಿ ತಾಲೂಕು ಶಿಶು ಯೋಜನಾಧಿಕಾರಿಗಳನ್ನು ಹಣ ಮಂಜೂರಾತಿ ಪ್ರಾಧಿಕಾರವಾಗಿಸಿ ಸರಕಾರ ಆದೇಶ ಮಾಡಿದೆ. ಜಿಲ್ಲೆಯಲ್ಲಿ ಉಡುಪಿ, ಕುಂದಾಪುರ, ಬ್ರಹ್ಮಾವರ, ಕಾರ್ಕಳದಲ್ಲಿ ನಾಲ್ವರು, ದ.ಕ. ಜಿಲ್ಲೆಯ ಏಳು ತಾಲೂಕಿನಲ್ಲಿ 7 ಮಂದಿ ಸಿಡಿಪಿಯು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇನ್ನೂ ಆರಂಭಗೊಂಡಿಲ್ಲ. ಯೋಜನೆ ಸಂಬಂಧಿಸಿ ಅರ್ಜಿ ಸಲ್ಲಿಕೆ ವೆಬ್‌ಸೈಟ್ ಅಭಿವೃದ್ಧಿ ಕೆಲಸ ಇನ್ನೂ ನಡೆಯುತ್ತಿದೆ. ಶೀಘ್ರ ಅರ್ಜಿ ಸಲ್ಲಿಕೆ ಆರಂಭಗೊಳ್ಳಲಿದ್ದು, ಸರಕಾರ ಈ ಬಗ್ಗೆ ಮಾಹಿತಿ ನೀಡಲಿದೆ.
– ಕೃಷ್ಣಪ್ಪ ಬೆಳಗೋಡು, ಉಪ ನಿರ್ದೇಶಕರು (ಉಡುಪಿ),
– ಪಾಪ ಭೋವಿ, ಉಪ ನಿರ್ದೇಶಕರು (ದ.ಕ. ಜಿಲ್ಲೆ),
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ