Advertisement

Gruha Lakshmi Scheme ಶೇ.95 ಯಶಸ್ವಿ: ದೀಪಾವಳಿ ವೇಳೆಗೆ ಎಲ್ಲ ಅರ್ಹರಿಗೂ ಹಣ

09:30 PM Nov 08, 2023 | Team Udayavani |

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಪ್ರತಿದಿನ ಮೂರು ಜಿಲ್ಲೆಗಳ ಸಿಡಿಪಿಗಳಿಗೆ ತರಬೇತಿ ನೀಡಲಾಗುತ್ತಿದೆ. ದೀಪಾವಳಿ ವೇಳೆಗೆ ಎಲ್ಲ ಫ‌ಲಾನುಭವಿಗಳಿಗೂ ಹಣ ತಲುಪಲಿದೆ.

Advertisement

ಆ.15ರೊಳಗೆ ನೋಂದಣಿ ಮಾಡಿಕೊಂಡಿದ್ದೂ ದುಡ್ಡು ಬಾರದಿದ್ದರೆ, 3 ತಿಂಗಳ ಬಾಕಿ ಸೇರಿಸಿ ಕೊಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಭರವಸೆ ನೀಡಿದರು.

ಬಿಡಬ್ಲ್ಯುಎಸ್‌ಎಸ್‌ಬಿ ಕಚೇರಿಯಲ್ಲಿರುವ ಬೆಂಗಳೂರು ಒನ್‌ ಕೇಂದ್ರದಲ್ಲಿ ನಡೆಯುತ್ತಿರುವ ಗೃಹಲಕ್ಷ್ಮಿ ಯೋಜನೆಯಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ತರಬೇತಿ ಕುರಿತು ಸಚಿವರು ಮಾಹಿತಿ ಪಡೆದುಕೊಂಡರು. ಗೃಹಲಕ್ಷ್ಮಿ ಯೋಜನೆ ಕುರಿತು ಆಗಿರುವ ತಾಂತ್ರಿಕ ದೋಷಗಳನ್ನು ಶೀಘ್ರವೇ ಬಗೆಹರಿಸಬೇಕೆಂದು ಸಿಡಿಪಿಒಗಳಿಗೆ ಸೂಚನೆ ನೀಡಿದರು. ತಾಂತ್ರಿಕ ದೋಷ, ಸಿಬಂದಿಯ ತೊಡಕಿನ ಕುರಿತು ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಇದುವರೆಗೆ ಗೃಹಲಕ್ಷ್ಮಿ ಯೋಜನೆ ಶೇ. 95ರಷ್ಟು ಯಶಸ್ವಿಯಾಗಿದ್ದು, ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಪ್ರತಿದಿನ ಮೂರು ಜಿಲ್ಲೆ ಗಳ ಸಿಡಿಪಿಒಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ನೋಂದಾಯಿತ ಮಹಿಳೆಯರಿಗೆ ಹಣ ಜಮೆ
ಇದುವರೆಗೆ ಯೋಜನೆಗೆ 1.16 ಕೋಟಿ ಮಹಿಳೆಯರು ನೋಂದಣಿ ಮಾಡಿಸಿದ್ದು, ಈ ಪೈಕಿ ಆಗಸ್ಟ್ ನಲ್ಲಿ ಗೃಹಲಕ್ಷ್ಮಿಯರ ಖಾತೆಗೆ 2,199 ಕೋಟಿ ರೂ. ಜಮೆ ಆಗಿದೆ. ಈ ಮೂಲಕ ಶೇ.97ರಷ್ಟು ಡಿಬಿಟಿ ಮುಖಾಂತರ ಹಣ ಹಾಕಲಾಗಿದೆ. ಆಗಸ್ಟ್‌ನಲ್ಲಿ 5 ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷದಿಂದ ಹಣ ಹೋಗಿಲ್ಲ. ಸೆಪ್ಟಂಬರ್‌ನಲ್ಲಿ ಶೇ.82ರಷ್ಟು ಕುಟುಂಬಗಳಿಗೆ ಹಣ ಹಾಕಲಾಗಿದ್ದು, 12 ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷ ಅಥವಾ ಕೆವೈಸಿ ಸಮಸ್ಯೆಯಿಂದ ಹಣ ಬ್ಯಾಂಕ್‌ ಖಾತೆಯಲ್ಲೇ ಉಳಿದಿದೆ. ಅಕ್ಟೋಬರ್‌ನಲ್ಲಿ 2400 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

Advertisement

ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ ಎಂ.ಎಸ್‌.ಅರ್ಚನಾ, ಇ-ಗವರ್ನೆನ್ಸ್ ಇಲಾಖೆ ನಿರ್ದೇಶಕ ದಿಲೀಶ್‌ ಉಪಸ್ಥಿತರಿದ್ದರು.

10 ದಿನಗಳಲ್ಲಿ ಬಗೆಹರಿಯಲಿದೆ ಗೊಂದಲ
ಆ.15ರೊಳಗೆ ನೋಂದಣಿ ಮಾಡಿಕೊಂಡವರಿಗೆ ಇದುವರೆಗೆ ದುಡ್ಡು ಬಾರದೆ ಇದ್ದರೆ, ಒಟ್ಟಿಗೆ ಮೂರು ತಿಂಗಳ ಹಣ ಹಾಕಲಾಗುತ್ತದೆ. ದೀಪಾವಳಿ ಹಬ್ಬದ ವೇಳೆಗೆ ಎಲ್ಲ ಫ‌ಲಾನುಭವಿಗಳಿಗೆ ಹಣ ತಲುಪುವಂತೆ ನೋಡಿಕೊಳ್ಳಲಾಗುವುದು. ಇದಕ್ಕೆ ಪೂರಕವಾಗಿ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಇನ್ನು 10 ದಿನಗಳಲ್ಲಿ ಯೋಜನೆಯ ಗೊಂದಲಗಳು ಬಗೆಹರಿಯಲಿವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ ಕಾಂಗ್ರೆಸ್‌ನಲ್ಲಿ ಸಮಸ್ಯೆ ಇಲ್ಲ
ಬೆಳಗಾವಿ ರಾಜಕೀಯ ಸಮಸ್ಯೆಗಳು ಮುಗಿಯದು ಎಂಬ ಸತೀಶ್‌ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವೆ, ಜಾರಕಿಹೊಳಿ ಅವರು ಹಾಗೆ ಹೇಳಲು ಸಾಧ್ಯವೇ ಇಲ್ಲ. ಕಥೆಯೇ ಇಲ್ಲ, ಮುಗಿಯೋದು ಏನಿದೆ? ಸಚಿವ ಸತೀಶ್‌ ಜಾರಕಿಹೊಳಿ ಅವರ ಹೇಳಿಕೆಯನ್ನು ನಾನು ಗಮನಿಸಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯವಾಗಿ ಯಾವುದೇ ಸಮಸ್ಯೆಯೂ ಇಲ್ಲ. ನನ್ನೊಂದಿಗೂ ಯಾವುದೇ ಸಮಸ್ಯೆ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಸತೀಶ್‌ ಸಿಎಂ ಆಸೆ ಪಡುವುದು ತಪ್ಪಲ್ಲ: ಡಿಕೆಶಿ
ಬೆಂಗಳೂರು: 2028ಕ್ಕೆ ನಾನು ಸಿಎಂ ಹುದ್ದೆ ಆಕಾಂಕ್ಷಿ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದರಲ್ಲಿ ಏನೂ ತಪ್ಪಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಇಲ್ಲಿನ ಕರ್ನಾಟಕ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸಿಎಂ ಹುದ್ದೆ ಬಗ್ಗೆ ಸತೀಶ್‌ ಜಾರಕಿ ಹೊಳಿ ಆಸೆ ಪಡುವುದರಲ್ಲಿ ತಪ್ಪೇನಿದೆ? ಈಗ ಕೊಟ್ಟಿರುವ ಅಧಿಕಾರವನ್ನು 5 ವರ್ಷ ಯಶಸ್ವಿಯಾಗಿ ನಡೆಸಿ, ಮುಂದಿನ ಬಾರಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎನ್ನುವ ಆತ್ಮವಿಶ್ವಾಸಕ್ಕಿಂತ ಬೇರೇನಿದೆ ಎಂದು ಪ್ರಶ್ನಿಸಿದರು.

ಸತೀಶ್‌ ಜಾರಕಿಹೊಳಿ ಭೇಟಿ ಬಗ್ಗೆ ಪ್ರಶ್ನಿಸಿದ್ದಕ್ಕೆ, ನಾನು ಕಾಂಗ್ರೆಸ್‌ ಪಕ್ಷ ಎನ್ನುವ ಕುಟುಂಬದ ಮುಖ್ಯಸ್ಥ. ಪಕ್ಷದ ಸಾಕಷ್ಟು ಕೆಲಸಗಳು ಇರುತ್ತವೆ. ಅದಕ್ಕೆ ನಾನೇ ಒಂದಷ್ಟು ಜನ ನಾಯಕರ ಮನೆಗೆ ಹೋಗುತ್ತೇನೆ ಅಥವಾ ನನ್ನ ಮನೆಗೆ ಕರೆಯುತ್ತೇನೆ. ಅದೇ ರೀತಿ ಸತೀಶ್‌ ಜಾರಕಿಹೊಳಿ ಅವರೇ ಮನೆಗೆ ಬರುತ್ತೇನೆ ಎಂದಿದ್ದರು. ಅದಕ್ಕೆ ಬೇಡ, ನಾನೇ ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳಿ ಹೋದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next