Advertisement

Gruha Jyothi: ಬಡ ಗ್ರಾಹಕರ ಬೇಡಿಕೆಗೆ ಸ್ಪಂದಿಸಿದ ಸರಕಾರ

01:04 AM Jan 20, 2024 | Team Udayavani |

ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯಡಿ ಮಾಸಿಕ ಸರಾಸರಿ 48 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸುವವರಿಗೆ ಈವರೆಗಿನ ಶೇ.10ರಷ್ಟು ಹೆಚ್ಚುವರಿ ವಿದ್ಯುತ್‌ನ ಬದಲಾಗಿ 10 ಯುನಿಟ್‌ ವಿದ್ಯುತ್‌ ಅನ್ನು ಹೆಚ್ಚುವರಿಯಾಗಿ ನೀಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಈ ಮೂಲಕ ಗೃಹಜ್ಯೋತಿ ಯೋಜನೆಯಡಿ ಪೂರೈಸಲಾಗುವ ಹೆಚ್ಚುವರಿ ಉಚಿತ ವಿದ್ಯುತ್‌ ಪ್ರಮಾಣವನ್ನು 10 ಯುನಿಟ್‌ಗೆ ನಿಗದಿಪಡಿಸುವ ಮೂಲಕ ಏಕರೂಪತೆ ಕಾಯ್ದುಕೊಳ್ಳಲು ಮುಂದಾಗಿದೆ.

Advertisement

ಯೋಜನೆಯ ಫ‌ಲಾನುಭವಿಗಳಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಸರಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.ಗೃಹಜ್ಯೋತಿ ಯೋಜನೆಯಂತೆ ಗೃಹಬಳಕೆದಾರರಿಗೆ ವಿವಿಧ ಷರತ್ತುಗಳೊಂದಿಗೆ ಉಚಿತ ವಿದ್ಯುತ್‌ ಯೋಜನೆಯನ್ನು ಜಾರಿಗೊಳಿಸಿ 2023ರ ಜೂ. 5ರಂದು ಸರ ಕಾರ ಆದೇಶ ಹೊರಡಿಸಿತ್ತು. ಅದರಂತೆ ಗೃಹಜ್ಯೋತಿ ಯೋಜನೆಯಡಿ ಮಾಸಿಕ 48 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸುವ ಎಲ್‌ಟಿ-2 ಗ್ರಾಹಕರಿಗೆ ಸರಾಸರಿ ಬಳಕೆಯ ಶೇ.10ರಷ್ಟು ಹೆಚ್ಚುವರಿ ವಿದ್ಯುತ್‌ ಅನ್ನು ಉಚಿತವಾಗಿ ಒದಗಿಸುತ್ತಾ ಬರಲಾಗಿದೆ. ಇದರಿಂದಾಗಿ ಕಡಿಮೆ ವಿದ್ಯುತ್‌ ಬಳಕೆ ಮಾಡುತ್ತಿರುವ ಬಡ ಕುಟುಂಬಗಳಿಗೆ ಸರಕಾರದ ಈ ಹೆಚ್ಚುವರಿ ಉಚಿತ ವಿದ್ಯುತ್‌ನ ಪ್ರಯೋಜನ ಲಭಿಸುತ್ತಿರಲಿಲ್ಲ. ಈ ಸಂಬಂಧ ರಾಜ್ಯದೆಲ್ಲೆಡೆಯಿಂದ ವ್ಯಾಪಕವಾಗಿ ದೂರುಗಳು ಕೇಳಿಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ಈಗ ಈ ಹಿಂದಿನ ಆದೇಶದಲ್ಲಿ ಮಾರ್ಪಾಡು ತಂದು ಹೆಚ್ಚುವರಿ ವಿದ್ಯುತ್‌ನ ಅರ್ಹತಾ ಮಿತಿಯನ್ನು ವಾರ್ಷಿಕ ಸರಾಸರಿಯ ಶೇ.10ರ ಬದಲಿಗೆ 10 ಯುನಿಟ್‌ ಎಂದು ನಿಗದಿ ಪಡಿಸಲು ನಿರ್ಧರಿಸಿದೆ. ಇದರಿಂದಾಗಿ ಕಡಿಮೆ ವಿದ್ಯುತ್‌ ಬಳಸುವ ಕುಟುಂ ಬಗಳಿಗೂ ಈ ಹೆಚ್ಚುವರಿ ಉಚಿತ ವಿದ್ಯುತ್‌ನ ಪ್ರಯೋಜನ ಲಭಿಸುವಂತಾಗಿದೆ.

ಗೃಹಬಳಕೆಯ ಬಡ ಫ‌ಲಾನುಭವಿಗಳಿಗೆ ರಾಜ್ಯ ಸರಕಾರದ ಈ ತೀರ್ಮಾನ ಸಂತಸವನ್ನುಂಟು ಮಾಡಿದ್ದು ಉಚಿತ ವಿದ್ಯುತ್‌ನ ಪ್ರಯೋಜನವನ್ನು ಇನ್ನು ವಿದ್ಯುತ್‌ ಮಿತವ್ಯಯಿಗಳು ಕೂಡ ಪಡೆಯಲಿದ್ದಾರೆ. ಉಚಿತ ವಿದ್ಯುತ್‌ ಯೋಜನೆ ಯಲ್ಲಿನ ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೈಗೊಂಡ ಮಹತ್ವದ ನಿರ್ಧಾರ ಇದಾಗಿದೆ. ಈ ಯೋಜನೆಗೆ ಚಾಲನೆ ನೀಡಿದಾಗಿನಿಂದಲೂ ಇಂತಹುದೇ ಹಲವಾರು ಗೊಂದಲಗಳು ಯೋಜನೆಯ ಅನುಷ್ಠಾನದಲ್ಲಾಗಿದ್ದು ಇವೆಲ್ಲವನ್ನು ಹೋಗಲಾಡಿಸಿ, ಬಡ ವಿದ್ಯುತ್‌ ಗ್ರಾಹಕರಿಗೆ ಸಮರ್ಪಕ ವಿದ್ಯುತ್‌ ಪೂರೈಸಲು ಸರಕಾರ ಮುಂದಾಗಬೇಕು. ಅಷ್ಟು ಮಾತ್ರವಲ್ಲದೆ ಉಚಿತ ವಿದ್ಯುತ್‌ನ ಕೊಡುಗೆ ಸರಕಾರ ನಿಗದಿಪಡಿಸಿದ ಮಾನದಂಡಗಳಿಗನುಸಾರವಾಗಿಯೇ ಅರ್ಹ ಫ‌ಲಾನುಭವಿಗಳನ್ನು ತಲುಪುತ್ತಿದೆಯೇ ಮತ್ತು ಅದು ಅನ್ಯ ಕಾರಣಗಳಿಗೆ ಬಳಕೆಯಾಗುತ್ತಿದೆಯೇ ಎಂಬುದನ್ನು ಕೂಡ ಸರಕಾರ ಖಾತರಿಪಡಿಸಿಕೊಳ್ಳಬೇಕು. ಗೃಹಜ್ಯೋತಿ ನೆಪದಲ್ಲಿ ವಿದ್ಯುತ್‌ ಅಕ್ರಮವಾಗಿ ಬಳಸಲ್ಪಡುತ್ತಿದ್ದರೆ ಅಥವಾ ಸೋರಿಕೆಯಾಗುತ್ತಿದ್ದರೆ ಇದಕ್ಕೆ ಕಡಿವಾಣ ಹಾಕಲು ವಿದ್ಯುತ್‌ ಪೂರೈಕೆ ಕಂಪೆನಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಈ ಬಾರಿ ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದ ಅಲ್ಲಲ್ಲಿ ಈಗಾಗಲೇ ವಿದ್ಯುತ್‌ ಅಭಾವದ ಬಿಸಿ ತಟ್ಟಲಾರಂಭಿಸಿದೆ. ಬೇಡಿಕೆಗೆ ತಕ್ಕಷ್ಟು ವಿದ್ಯುತ್‌ ಪೂರೈಕೆಗೆ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ವರ್ಷವಿಡೀ ಗೃಹ ಬಳಕೆದಾರರಿಗೆ ನಿಗದಿಪಡಿಸಿದ ಯುನಿಟ್‌ಗಳಷ್ಟು ವಿದ್ಯುತ್‌ ಪೂರೈಕೆಯನ್ನು ಸರಕಾರ ಖಾತರಿಪಡಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next