ಜೇವರ್ಗಿ: ಧರ್ಮದ ಹೆಸರಿನಲ್ಲಿ ನಡೆಯುವ ಜಾತ್ರೆ, ವಿಶೇಷ ಪೂಜೆ, ಆಚರಣೆಗಳು ಮತ್ತು ಸಂಪ್ರದಾಯಗಳು ಜನರಲ್ಲಿ ಭಕ್ತಿಭಾವ ಮತ್ತು ಸ್ನೇಹ ಸಂಬಂಧ ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶಖಾಪುರ ತಪೋವನಮಠದ ಪೀಠಾಧಿಪತಿ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಸುಕ್ಷೇತ್ರ ಶಖಾಪುರ ತಪೋವನಮಠದಲ್ಲಿ ಸದ್ಗುರು ವಿಶ್ವರಾಧ್ಯರ ಮತ್ತು ಮಾತೋಶ್ರೀ ಬಸವಾಂಬೆ ತಾಯಿ ಅವರ 66ನೇ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕೋಳಕೂರದ ಪವಾಡಪುರುಷ ಸಿದ್ದಬಸವೇಶ್ವರ ಮಹಾಪುರಾಣಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.
ದೇವರು, ಧರ್ಮದ ಬಗ್ಗೆ ಇಲ್ಲಸಲ್ಲದ ಮಾತುಗಳು ಕೇಳಿ ಬರುತ್ತಿವೆ. ಇವರಿಗೆ ದೇವರ ಬಗ್ಗೆ ನಂಬಿಕೆ ಇಲ್ಲದಿದ್ದರೇಪರವಾಗಿಲ್ಲ. ಆದರೆ ಇನ್ನೊಬ್ಬರ ಭಾವನೆಗೆ ಧಕ್ಕೆ ತರುವುದು ತರವಲ್ಲ. ಯಾವುದೇ ವಿಚಾರಗಳನ್ನು ಒತ್ತಾಯ ಇಲ್ಲವೆ ಒತ್ತಡದಿಂದ ಅವರ ಮೇಲೆ ಹೇರುವುದು ಸೂಕ್ತವಲ್ಲ.
ಪ್ರತಿಯೊಬ್ಬ ಮನುಷ್ಯನ ಸಂಸಾರದಲ್ಲಿ ಯಾವುದೇ ರೀತಿಯ ಸಮಸ್ಯೆಯಾದರೆ ಮಠ-ಮಂದಿರಗಳಿಗೆ ಹೋಗಿ ಶಾಂತಿ ಪಡೆಯುತ್ತಾರೆ. ಅಲ್ಲದೇ ಹಿರಿಯ ದಾರ್ಶನಿಕರು, ಸಂತರು, ಶರಣರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರೂ ನಡೆಯಬೇಕು.
ಆದರ್ಶಗಳನ್ನು ತಮ್ಮ ಜೀವನದಲ್ಲಿ ಆಚರಣೆಗೆ ತಂದುಕೊಂಡರೆ ಸಹಜವಾಗಿಯೇ ಶಾಂತಿ ನೆಮ್ಮದಿಯಿಂದ ಬಾಳಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಜೆಡಿಎಸ್ ಮುಖಂಡ ಚನ್ನಮಲ್ಲಯ್ಯ ಹಿರೇಮಠ ಪುರಾಣ ಕಾರ್ಯಕ್ರಮ ಉದ್ಘಾಟಿಸಿದರು. ಡಾ| ಪಿ.ಎಂ. ಮಠ, ಚನ್ನಬಸಯ್ಯ ಸ್ವಾಮಿ ದಂಡೋತಿ, ಆದಪ್ಪ ಸಾಹು ಸಿಕ್ಕೆದ್, ಗಂಗಾಧರ ಮೈಲಾರ,
ಸಿದ್ರಾಮಪ್ಪಗೌಡ ಪೊಲೀಸ್ ಪಾಟೀಲ, ಬಸವಂತ್ರಾಯಗೌಡ ಮಾಲಿಪಾಟೀಲ, ಅರ್ಜುನ ಕ್ರಾಂತಿ ರಾಯಕೋಡ, ಪ್ರಭುಲಿಂಗರೆಡ್ಡಿ, ರಾಜಶೇಖರಗೌಡ ಜೈನಾಪುರ, ಪ್ರವೀಣಕುಮಾರ ಕುಂಟೋಜಿಮಠ, ಡಾ| ಮಹಾಂತಗೌಡ ಪಾಟೀಲ, ಶಿವಶರಣಪ್ಪಗೌಡ ಮಾಲಿಪಾಟೀಲ, ಹಣಮಂತ್ರಾಯಗೌಡ ಪೊಲೀಸ್ ಪಾಟೀಲ, ಬಸವಂತ್ರಾಯ ದಳಪತಿ ಇದ್ದರು.