Advertisement

ಗೋಸಂರಕ್ಷಣೆ-ಸೌಲಭ್ಯ ಸಮಾನತೆಗೆ ಸಾಧುಸಂತರ ಉದ್ಗಾರ

09:41 AM Nov 27, 2017 | Team Udayavani |

ಉಡುಪಿ: ದೇಶದಲ್ಲಿ ಅಲ್ಪಸಂಖ್ಯಾಕರಿಗೆ ದೊರಕುವ ಸರಕಾರಿ ಸೌಲಭ್ಯಗಳು ಧಾರ್ಮಿಕ ಬಹುಸಂಖ್ಯಾಕರಿಗೂ ಲಭಿಸಬೇಕು. ಸಮಾನತೆ ತರುವಂತೆ ಸಂವಿಧಾನದ ತಿದ್ದುಪಡಿಯಾಗಬೇಕು. ಈ ಕುರಿತು ಸಂಶೋಧನೆ ನಡೆಯಬೇಕು. ಸರಕಾರಿ ಸೌಲಭ್ಯಗಳಲ್ಲಿ ಪಕ್ಷಪಾತ ಮಾಡಿದರೆ ಹಿಂದೂ ಧರ್ಮಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಸಮಾನತೆ ಅತ್ಯಗತ್ಯ ಎಂದು ಪರ್ಯಾಯ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

Advertisement

ರವಿವಾರ ಧರ್ಮಸಂಸದ್‌ನ ಅಂತಿಮ ಗೋಷ್ಠಿಯಲ್ಲಿ ಅಲ್ಪಸಂಖ್ಯಾಕರು ಮತ್ತು ಬಹುಸಂಖ್ಯಾಕರಿಗೆ ಸರಕಾರದ ಸೌಲಭ್ಯ ಸಮಾನತೆ ಕಾಯ್ದುಕೊಳ್ಳಬೇಕು ಎನ್ನುವ ನಿರ್ಣಯದ ಕುರಿತು ಪ್ರಸ್ತಾವಿಸಿ ಅವರು ಮಾತನಾಡಿದರು. ದಲಿತ ವಿರೋಧವಲ್ಲ ಬಹುಸಂಖ್ಯಾಕರಿಗೂ ಸೌಲಭ್ಯಗಳು ದೊರೆಯ ಬೇಕು ಎನ್ನುವ ಮಾತ್ರಕ್ಕೆ ಅಲ್ಪಸಂಖ್ಯಾಕರಿಗೆ ಸೌಲಭ್ಯ ಸಿಗಬಾರದು ಎನ್ನುವ ಅರ್ಥ ಬರುವುದಿಲ್ಲ. ಇದರಲ್ಲಿ ಸಂವಿಧಾನವನ್ನು ಪ್ರಶ್ನಿಸುವಂತಹ ಪ್ರಶ್ನೆಯೂ ಇಲ್ಲ ಎಂದ ಪೇಜಾವರ ಶ್ರೀಗಳು ಹೀಗೆಂದ ಮಾತ್ರಕ್ಕೆ ದಲಿತ ವಿರೋಧಿ ಎನ್ನುತ್ತಾರೆ. ಸೌಲಭ್ಯ ಸಿಗಬೇಕೆಂಬುದೇ ಉದ್ದೇಶ ಎಂದರು. ಶ್ರೀ ಕೈವಲ್ಯಾನಂದ ಸ್ವಾಮೀಜಿ ನಿರ್ಣಯದ ಬಗ್ಗೆ ಸಹಮತ ವ್ಯಕ್ತಪಡಿಸಿ, ದೇಶದ ಸರ್ವರ ಹಿತದೃಷ್ಟಿ ಯಿಂದ ಸೌಲಭ್ಯ ದೊರೆಯಬೇಕು ಎಂದರು. ಇದಕ್ಕೆ ಸಂತರೂ ಸಹಮತ ವ್ಯಕ್ತಪಡಿಸಿದರು. 

ನೋಟ್‌ ಬ್ಯಾನ್‌ – ಗೋಹತ್ಯೆ ಬ್ಯಾನ್‌!
ಉಜ್ಜೆ„ನಿಯ ಶ್ರೀ ಮಹಾಮಂಡಲೇಶ್ವರ್‌ ಯೋಗಿರಾಜ್‌ ಶ್ರೀ ಮಹಂತ್‌ ರಾಮೇಶ್ವರದಾಸ್‌ ತನ್ನ ಅಭಿಪ್ರಾಯ ವ್ಯಕ್ತಪಡಿಸಿ, ಸನಾತನ ಧರ್ಮ, ಸಾಧು ಸಂತರು ಗೋಮಾತೆಯನ್ನು ಹೊಂದಿರುವ ಭರತ ಭೂಮಿ ನಮ್ಮದು. ಗೋವನ್ನು ರಾಷ್ಟ್ರ ಪ್ರಾಣಿಯನ್ನಾಗಿ ಘೋಷಣೆ ಮಾಡಬೇಕು ಎನ್ನುವ ಒತ್ತಾಯ ಡಾ| ರಾಜೇಂದ್ರ ಪ್ರಸಾದ್‌ ಅವರು ರಾಷ್ಟ್ರಪತಿಯಾಗಿದ್ದ ಕಾಲದಿಂದಲೂ ಇದೆ. ಆದರೆ ಅದು ಸಾಧ್ಯವಾಗಿಲ್ಲ. ಪ್ರಸ್ತುತ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ರಾತೋರಾತ್ರಿ ನೋಟು ಅಮಾನ್ಯದ ಕಠಿನ ನಿರ್ಧಾರ ಕೈಗೊಂಡಿದ್ದಾರೆ. ಅದೇ ರೀತಿಯಲ್ಲಿ ಕಾಮಧೇನುವನ್ನು  ರಾಷ್ಟ್ರ ಪ್ರಾಣಿಯಾಗಿ ಘೋಷಣೆ ಮಾಡಬೇಕು ಎಂದರು.

ಕಾನೂನು ಜಾರಿಯಾಗಲಿ
ಜೋಧ್‌ಪುರದ ಶ್ರೀ ಅಮೃತ್‌ ಮಹಾರಾಜ್‌ ಮಾತನಾಡಿ, ದೇಶದಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಜಾರಿಯಾಗಬೇಕು. ಪ್ರಸ್ತುತ ಕೆಲವು ರಾಜ್ಯಗಳಲ್ಲಿ ಕಾಯಿದೆ ಜಾರಿಯಾಗಿದ್ದು, ಮುಂದೆ ಇಡೀ ದೇಶಕ್ಕೆ ಅನ್ವಯವಾಗುವಂತೆ ಒಂದೇ ಕಾನೂನು ರೂಪುಗೊಳ್ಳಬೇಕು. ಗೋಹತ್ಯೆಯನ್ನು ಕಾನೂನು ಮೂಲಕವೇ ತಡೆದರೆ ಸಮಾಜದಲ್ಲಿ ಶಾಂತಿ ಕಾಪಾಡಲು ಸಾಧ್ಯವಾಗುತ್ತದೆ. ದೇಶದಲ್ಲಿ ಗೋಹತ್ಯೆ ನಡೆಯುತ್ತಿರುವುದು ಅದೆಷ್ಟೋ ಕೋಟಿ ಹಿಂದೂಗಳ ದುಃಖದ ವಿಚಾರ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಯೋಧ್ಯೆಯ ಶ್ರೀ ಕಮಲ ಮೋಹನ್‌ದಾಸ್‌ ಸ್ವಾಮೀಜಿ  ಮಾತನಾಡಿ, ಹಿಂದೂ ಧರ್ಮದ ಏಳಿಗೆ ಬಗ್ಗೆ ಸಮಾನತೆ ತರುವಂತಹ ಕಾಯಿದೆ ಜಾರಿಯಾಗಬೇಕು. ಆದರೆ ರಾಜಕೀಯ ಉದ್ದೇಶಗಳಿಂದ ಅಂತಹ ಕಾಯಿದೆ ಜಾರಿಗೆ ತರಲಾಗುತ್ತಿಲ್ಲ. ಇದರಿಂದಾಗಿ ಹಿಂದೂ ಸಮಾಜಕ್ಕ ತೊಂದರೆಯಾಗುತ್ತಿದೆ. ಧರ್ಮಸಂಸದ್‌ನ ಪ್ರತಿಯೊಂದು ನಿರ್ಣಯಗಳು ಅನುಷ್ಠಾನಗೊಳಿಸಲು ಎಲ್ಲರೂ ಪಣತೊಡಬೇಕು ಎಂದರು.

Advertisement

ಗೋ ರಕ್ಷಣೆಯಿಂದ ದೇಶ ಉಳಿವು
ದೇಶದಲ್ಲಿ ಗೋಸಂರಕ್ಷಣೆಯ ಕುರಿತ  ನಿರ್ಣಯದ ಪ್ರಸ್ತಾವಕ್ಕೂ ವಿವಿಧ ಸಾಧು  ಸಂತರಿಂದ ಒಕ್ಕೊರಲ ಆಗ್ರಹ ಕೇಳಿ ಬಂತು. ಒಡಿಶಾದ ಶ್ರೀ ಭಾಸ್ಕರತೀರ್ಥ ಸ್ವಾಮೀಜಿ ಮಾತನಾಡಿ, ಕೋಟಿ ದೇವತೆಗಳನ್ನು ತನ್ನಲ್ಲಿರಿಸಿ ಕೊಂಡಿರುವ ಗೋಮಾತೆಯ ರಕ್ಷಣೆಯಾಗ ಬೇಕು. ಸಂಸಾರ ನೆಮ್ಮದಿಯಿಂದ ಸಾಗಬೇಕಾದರೆ ಗೋಸಂರಕ್ಷಣೆಯಾಗಬೇಕು. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಗೋರಕ್ಷಣೆಯಾದರೆ ಮಾತ್ರ ದೇಶ ಉಳಿಯಬಹುದು. ಗೋವಿನ ರಕ್ಷಣೆಯೇ ನಮ್ಮ ಸಂಕಲ್ಪ ಎಂದು ಹೇಳಿದರು.

ಜಿವೇಂದ್ರ ಶೆಟ್ಟಿ ಗರ್ಡಾಡಿ 

Advertisement

Udayavani is now on Telegram. Click here to join our channel and stay updated with the latest news.

Next