ಬೆಳಗಾವಿ: ರಾಜ್ಯದಲ್ಲಿ ಸಿರಿಧಾನ್ಯ ಬೆಳೆಯುವ ಪ್ರದೇಶವನ್ನು ಈ ವರ್ಷ 1.80 ಲಕ್ಷ ಹೆಕ್ಟೆರ್‌ನಷ್ಟು ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಸುವರ್ಣಸೌಧದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಸ್ತುತ 18 ಲಕ್ಷ ಹೆಕ್ಟೇರ್‌ನಲ್ಲಿ ಪ್ರಮುಖ ಸಿರಿಧಾನ್ಯ ಬೆಳೆಯಲಾಗುತ್ತಿದ್ದು, ಈ ವರ್ಷ ಶೇ.10ರಷ್ಟು ಪ್ರದೇಶದಲ್ಲಿ ವಿಸ್ತರಿಸಲಾಗುವುದು ಎಂದ ತಿಳಿಸಿದರು.
ಜತೆಗೆ ಇತರೆ ಸಿರಿಧಾನ್ಯ (ಅರ್ಕ, ಊರು, ನವಣೆ, ಸಾಮೆ ಸೇರಿ) ಬೆಳೆಯುವ ಪ್ರದೇಶ 40,000 ಹೆಕ್ಟೇರ್‌ಗೆ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಇತರೆ ಸಿರಿಧಾನ್ಯ 20 ಸಾವಿರ ಹೆಕ್ಟೆರ್‌ನಲ್ಲಿ ಬೆಳೆಯಲಾಗುತ್ತಿದೆ ಎಂದರು.
ದೇಶದಲ್ಲಿ ಪಡಿತರ ಮೂಲಕ ಸಿರಿಧಾನ್ಯ ವಿತರಿಸುವ ಮೊದಲ ರಾಜ್ಯ ಕರ್ನಾಟಕ ಎನಿಸಿದೆ. ಕಟಾವಿಗೆ ಬಂದ ರಾಗಿ ಖರೀದಿಸಿ ಅಕ್ಕಿಗೆ ಬದಲಾಗಿ ರಾಗಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ರಾಗಿಗೆ ಪ್ರತಿ ಕ್ವಿಂಟಾಲ್‌ಗೆ 400 ರೂ. ಪ್ರೋತ್ಸಾಹ ಧನ ನೀಡಿ ಖರೀದಿಸಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಪಡಿತರ ಅಕ್ಕಿಯನ್ನು ಕೆ.ಜಿ.ಗೆ 32 ರೂ. ದರದಲ್ಲಿ ಪಂಜಾಬ್‌ನಿಂದ ಪೂರೈಸುತ್ತಿದೆ. ಪಡಿತರ ಮೂಲಕ ರಾಗಿ, ಜೋಳ ವಿತರಣೆಗೆ ಮುಂದಾದರೆ ಕೇಂದ್ರ ಸರ್ಕಾರಕ್ಕೆ ಪ್ರತಿ ಕೆ.ಜಿ.ಗೆ 5 ರೂ. ಉಳಿತಾಯವಾಗಲಿದ್ದು, ರಾಗಿಗೂ ಒಂದೆರಡು ರೂ. ಪ್ರೋತ್ಸಾಹ ಧನ ಹೆಚ್ಚಿಸಬಹುದಾಗಿದೆ. ಈ ಸಂಬಂಧ ಕೇಂದ್ರ ಆಹಾರ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಹಾಪ್‌ಕಾಮ್ಸ್‌ಗಳಲ್ಲಿ ಆಗ್ಯಾìನಿಕ್ ಕಾರ್ನರ್ ಆರಂಭಿಸಿ ಸಾವಯವ, ಸಿರಿಧಾನ್ಯ ಮಾರಾಟ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಾಗಿತ್ತು. ಆದರೆ, ವರ್ಗೀಕರಣ ಮತ್ತಿತರೆ ಸಮಸ್ಯೆ ತಲೆದೋರಿದ ಹಿನ್ನೆಲೆಯಲ್ಲಿ ಜೈವಿಕ್ ಸಂಸ್ಥೆಯ ಸಹಯೋಗದಲ್ಲಿ ಆರು ಸಿರಿಧಾನ್ಯ, ಸಾವಯವ ಮಳಿಗೆ ಆರಂಭಿಸಲಾಗಿದೆ. ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಸಾಧ್ಯವಿರುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.