ವಿಟ್ಲ : ಇಂದು ತರಕಾರಿ ಬೆಳೆಯುವವರು ಕಡಿಮೆ. ಮಾರುಕಟ್ಟೆಗೆ ತೆರಳಿ ಖರೀದಿಸುವವರೇ ಹೆಚ್ಚು. ಕಾರಣ ಕೀಟ ಬಾಧೆ, ತರಕಾರಿ ಬೆಳೆ ಕಡಿಮೆ ಇತ್ಯಾದಿ ಸಮಸ್ಯೆಗಳು. ಆದರೆ ಎಲ್ಲರೂ ಸಮಸ್ಯೆಗಳಿಗೆ ಹೆದರಿ ತರಕಾರಿ ಬೆಳೆಯದೇ ಇರುವುದು ಸರಿಯಲ್ಲ ಎಂದು ವಿಟ್ಲ ಪಿಂಗಾರ ಸಂಸ್ಥೆಯ ಅಧ್ಯಕ್ಷ ರಾಮ್‌ಕಿಶೋರ್ ಮಂಚಿ ಅಭಿಪ್ರಾಯಪಟ್ಟರು.
ಅವರು ಗುರುವಾರ ಬಂಟ್ವಾಳ ತಾ| ತೋಟಗಾರಿಕೆ ಇಲಾಖೆ, ದ.ಕ.ಜಿ.ಪಂ. ವತಿಯಿಂದ ವಿಟ್ಲ ಪ.ಪಂ.ಸಭಾಭವನದಲ್ಲಿ 2017-18ನೇ ಸಾಲಿನಲ್ಲಿ ತಾರಸಿ, ತೋಟ, ಕೈತೋಟ ಉತ್ತೇಜನ ಕಾರ್ಯಕ್ರಮದಡಿ ರೈತರಿಗೆ ಆಯೋಜಿ ಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದ್ದೇ ಇದೆ. ಆದುದರಿಂದ ಸಮಸ್ಯೆ ಎದುರಿಸಿ, ಪ್ರತಿ ಯೊಬ್ಬರೂ ತರಕಾರಿ ಬೆಳೆಯಬೇಕು ಎಂದವರು ತಿಳಿಸಿದರು.
ವಿಪಕ್ಷ ನಾಯಕ ಅಶೋಕ ಕುಮಾರ್ ಶೆಟ್ಟಿ ಮಾತನಾಡಿ ಸರಕಾರ ಮತ್ತು ತೋಟಗಾರಿಕೆ ಇಲಾಖೆಯ ಈ ಕಾರ್ಯಕ್ರಮವನ್ನು ಸರಿಯಾಗಿ ಪ್ರಚಾರ ಮಾಡಬೇಕು. ಕಾಟಾಚಾರಕ್ಕೆಕಾರ್ಯಕ್ರಮ ಎನಿಸಿಕೊಳ್ಳುವ ಬದಲಾಗಿ ಕೃಷಿಕರು ಇದರ ಉಪಯೋಗ ಪಡೆದು ಕೊಳ್ಳುವಂತಾಗಬೇಕು. ರೈತರಿಗೆ ಈ ಯೋಜನೆ ತಲುಪಬೇಕು. ಮುಂದಿನ ಕಾರ್ಯಕ್ರಮ ಆಯೋಜಿಸುವುದಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಸ್ಥಾಯೀ ಸಮಿತಿ ಅಧ್ಯಕ್ಷ ವಿ.ರಾಮದಾಸ ಶೆಣೈ ಅವರು ಮಾತನಾಡಿ 5, 10 ಸೆಂಟ್ಸ್ ಭೂಮಿ, ತಾರಸಿ ಮನೆ ಹೊಂದಿದವರು ತರಕಾರಿ ಬೆಳೆಯುವುದನ್ನು ಅರಿತುಕೊಳ್ಳಬೇಕು. ಆಗ ತುಟ್ಟಿಯಾದ ತರಕಾರಿಯನ್ನು ಕಡಿಮೆ ಬೆಲೆಯಲ್ಲಿ ನಾವೇ ಪಡೆಯುವಂತಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹಾರ್ಟಿ ಕ್ಲಿನಿಕ್ ವಿಷಯತಜ್ಞೆ ರಿಷಲ್ ಡಿ’ಸೋಜಾ ಮಾತನಾಡಿ ಗಿಡಗಳನ್ನು ಗಾಳಿ ಮತ್ತು ತೇವಾಂಶ ವಾತಾವರಣದಲ್ಲಿ ಮಣ್ಣಿಲ್ಲದೇ ಬೆಳೆಸುವ ವಿಧಾನ, ಕೃತಕಪೋಷಕಾಂಶ ನೀಡಿ ಗಿಡ ಬೆಳೆಸುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್ ಸ್ವಾಗತಿಸಿ, ವಂದಿಸಿದರು.
ಸಾವಯವ ತರಕಾರಿ ಬೆಳೆಯಿರಿ
ಇಂದು ನಾವೆಲ್ಲರೂ ತಿನ್ನುವ ವಿಷಯುಕ್ತ ತರಕಾರಿಗಳ ಬದಲಾಗಿ ಸಾವಯವ, ಆರೋಗ್ಯಯುಕ್ತ ತರಕಾರಿ ಬೆಳೆಯಬೇಕು. ತೋಟಗಾರಿಕೆ ಲಾಖೆಯವರು ಕನಿಷ್ಠ ಜಾಗದಲ್ಲಿ ತರಕಾರಿ ಬೆಳೆಯುವ ವಿಧಾನ ತಿಳಿಸಿಕೊಡುತ್ತಾರೆ. ಅದನ್ನು ಕೃಷಿಕರು ಸದುಪಯೋಗಪಡಿಸಬೇಕು.
–
ಅರುಣ್ ಎಂ.ವಿಟ್ಲ,
ವಿಟ್ಲ ಪ.ಪಂ.ಅಧ್ಯಕ್ಷ