ಮಂಡ್ಯ: ನಮಗೆ ಬೇಕಾದ ಸೊಪ್ಪು, ತರಕಾರಿ ಸಾವಯವ ಪದ್ಧತಿಯಲ್ಲಿ ಮನೆಗಳ ತಾರಸಿ ಮೇಲೆ ಬೆಳೆದು ಉಪಯೋಗಿಸಿದರೆ ಆರೋಗ್ಯ ಸುಧಾರಣೆ ಹಾಗೂ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದು ಬೆಂಗಳೂರಿನ ಲಾಲ್ಬಾಗ್ ನರ್ಸರಿ ತೋಟಗಾರಿಕೆ ಕಚೇರಿ ಹೆಚ್ಚವರಿ ನಿರ್ದೇಶಕ ಡಾ.ಪ್ರಕಾಶ್ ಎಂ. ಸಬರದ ಸಲಹೆ ನೀಡಿದರು.
ನಗರದ ತೋಟಗಾರಿಕೆ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ತೋಟಗಾರಿಕೆ ಇಲಾಖೆಯ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಹಮ್ಮಿಕೊಂಡಿದ್ದ ತಾರಸಿ ಕೈತೋಟಗಳ ಉತ್ತೇಜನ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿನಿತ್ಯ ನಾವು ಆಹಾರದಲ್ಲಿ ಸೊಪ್ಪು, ತರಕಾರಿ ಉಪಯೋಗಿಸುತ್ತೇವೆ. ಆದರೆ ಅವು ಎಲ್ಲಿ, ಯಾವ ಪೌಷ್ಟಿಕಾಂಶ ಹಾಕಿ ಬೆಳೆಸಲಾಗಿದೆ ಎಂಬ ಮಾಹಿತಿ ಇರುವುದಿಲ್ಲ. ಆದರೆ, ನಮ್ಮ ಆಹಾರಕ್ಕೆ ತರಕಾರಿ ನಾವೇ ಬೆಳೆಯುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಮನೆ ಮುಂದಿನ ಖಾಲಿ ಜಾಗ, ಮನೆ ತಾರಸಿ ಹಾಗೂ ಮಣ್ಣಿನ ಕುಂಡಗಳು, ಸಸಿ ಬೆಳೆಸುವ ಚೀಲಗಳಲ್ಲಿ ಸೊಪ್ಪು, ತರಕಾರಿ ಬೆಳೆಯಬಹುದು. ಇದರಿಂದ ಉತ್ತಮ ಆರೋಗ್ಯ, ನಾವೇ ಬೆಳೆದ ಖುಷಿ ಹಾಗೂ ಬಿಡುವಿನ ವೇಳೆ ಸದುಪಯೋಗ ಮಾಡಿದಂತಾಗುತ್ತದೆ ಎಂದು ಹೇಳಿದರು.
ಉಚಿತ ತರಬೇತಿ ಕಾರ್ಯಾಗಾರ: ಮನೆಯಲ್ಲಿನ ಅನುಪಯುಕ್ತ ತರಕಾರಿಗಳಿಂದ ಎರೆಹುಳು ಗೊಬ್ಬರ ತಯಾರಿಸಿ ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆಯಬಹುದು. ತರಕಾರಿ ಬೆಳೆಯಲು ಬೇಕಾದ ಸಾಮಗ್ರಿ ಉಚಿತವಾಗಿ ನೀಡಲಾಗುವುದು. ಜೊತೆಗೆ ತೋಟಗಾರಿಕೆ ಇಲಾಖೆಯಲ್ಲಿ ಉಚಿತ ತರಬೇತಿ ಕಾರ್ಯಾಗಾರ, ಪ್ರಾತ್ಯಕ್ಷಿಕೆ ಕೂಡ ಏರ್ಪಡಿಸಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ವಾಟ್ಸಾಪ್ ಗ್ರೂಪ್ ಮಾಡಿಕೊಳ್ಳಿ: ತರಕಾರಿ ಬೀಜಗಳ ಗಾತ್ರಕ್ಕೆ ಅನುಗುಣವಾಗಿ ಸಣ್ಣ ಬೀಜಗಳನ್ನು ಮಣ್ಣಿನ ಮೇಲ್ಪದರದ ಮಡಿಯಲ್ಲಿ ಹಾಕಿ 20 ದಿನಗಳ ನಂತರ ಸಸಿಗಳನ್ನು ಕಿತ್ತು ಬೇರೆಡೆ ನಾಟಿ ಮಾಡಬೇಕು. ತರಕಾರಿ ಬೀಜಗಳು ದೊಡ್ಡದಾಗಿದ್ದರೆ ಭೂಮಿಯ ಸ್ವಲ್ಪ ಆಳ ಹಾಗೂ ಅಂತರದಲ್ಲಿ ನೇರವಾಗಿ ಉಳುಮೆ ಮಾಡಿ ಬೆಳೆಯಬಹುದು. ಈ ಕುರಿತು ತಾರಸಿ ತೋಟ ಮಾಡುವವರು ವಾಟ್ಸಾಪ್ ಗ್ರೂಪ್ ಮಾಡಿಕೊಂಡು ತಮ್ಮ ಬೆಳೆಯ ಪ್ರಯೋಗ ಹಾಗೂ ಸಮಸ್ಯೆ ಕುರಿತು ಚರ್ಚೆ ಮಾಡಿ ಉತ್ತಮವಾಗಿ ತರಕಾರಿ ಬೆಳೆಯಬೇಕು ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಕೆ.ಎಂ.ರೇಖಾ ಮಾತನಾಡಿ, ತಾರಸಿ ತೋಟಗಳ ಕುರಿತು ನಮ್ಮ ಕಚೇರಿ ಆವರಣದಲ್ಲಿ ಕಿಚನ್ ಗಾರ್ಡನ್ ಬೆಳೆಸಿ ಪ್ರಾತ್ಯಕ್ಷಿಕೆ ನೀಡಲಾಗುವುದು. ಈ ಕುರಿತು ಯಾವುದೇ ಸಂದೇಹ ಹಾಗೂ ಸಮಸ್ಯೆಗಳಿದ್ದರೆ ಕಚೇರಿ ವೇಳೆಯಲ್ಲಿ ಬಂದು ಪರಿಹಾರ ಪಡೆದುಕೊಳ್ಳಬಹುದು ಎಂದು ಹೇಳಿದರು. ಈ ವೇಳೆ ಮದ್ದೂರು ತೋಟಗಾರಿಕಾ ಕ್ಷೇತ್ರದ ಯೋಜನಾ ಅಧಿಕಾರಿ ಡಾ.ಮಂಜುನಾಥ್ ಅಂಗಡಿ ಇತರರಿದ್ದರು.