ಯಳಂದೂರು: ರೇಷ್ಮೆ ಬೆಳೆ ಮೊದಲಿನಷ್ಟು ಜಟಿಲವಾಗಿಲ್ಲ. ಇದನ್ನು ಬೆಳೆಯುವುದು ಸುಲಭ. ಇದಕ್ಕೆ ಉತ್ತಮ ಬೆಲೆಯೂ ಇದೆ. ರೈತರು ಈ ಕೃಷಿಗೆ ವಾಲಿದರೆ ಆರ್ಥಿಕವಾಗಿ ಸಬಲರಾಗಬಹುದು ಎಂದು ಕುದೇರು ರೇಷ್ಮೆ ತರಬೇತಿ ಸಂಸ್ಥೆಯ ನಿರ್ದೇಶಕಿ ಹದೀಬಾ ತಸ್ಲಿಮ್ ಹೇಳಿದರು.
ತಾಲೂಕಿನ ಕೆಸ್ತೂರು ಗ್ರಾಮದ ಪರಶಿವಮೂರ್ತಿ ಅವರ ಜಮೀನಿನಲ್ಲಿ ಸೋಮವಾರ ರೇಷ್ಮೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕ್ಷೇತ್ರ ಮಟ್ಟದ ಒಂದು ದಿನದ ರೈತರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಪ್ಪು ನೇರಳೆಗೆ ಆದಷ್ಟು ಕಡಿಮೆ ರಸಾಯನಿಕ ಗೊಬ್ಬರಗಳನ್ನು ನೀಡಬೇಕು. ಸಾವಯವ ಗೊಬ್ಬರ ಹೆಚ್ಚಾಗಿ ನೀಡಿದ್ದಲ್ಲಿ ಉತ್ತಮ ಎಲೆ ಬರುತ್ತದೆ. ಇದನ್ನು ತಿನ್ನುವ ರೇಷ್ಮೆ ಹುಳು ಆರೋಗ್ಯವಾಗಿರುತ್ತದೆ ಎಂದು ಹೇಳಿದರು.
ವಾರ್ಷಿಕ ಆದಾಯ ಹೆಚ್ಚಳ: ಒಂದನೇ ಜ್ವರದಿಂದ 4ನೇ ಜ್ವರದ ವರೆಗಿನ ಹುಳು ಶೇ.20ರಷ್ಟು ಸೊಪ್ಪನ್ನು ಮಾತ್ರ ತಿನ್ನುತ್ತದೆ. 4ನೇ ಜ್ವರದ ನಂತರ ಇದರ ಪ್ರಮಾಣ ಶೇ.80ರಷ್ಟಾಗುತ್ತದೆ. ಈ ಸೊಪ್ಪಿನಲ್ಲಿರುವ 16 ಪೋಷಕಾಂಶಗಳು ಇವೆ. ರೇಷ್ಮೆ ಹುಳುಗಳ ಬೆಡ್‌ಗೆ ಸುಣ್ಣವನ್ನು ಹಾಕುವುದರಿಂದ ಇದರ ಹಿಕ್ಕೆಗಳನ್ನು ನಿಯಂತ್ರಿಸಬಹುದು. ಇದರಿಂದ ಹುಳುಗಳು ಸೊಂಪಾಗಿ ಬೆಳೆಯುತ್ತವೆ. ವಾರ್ಷಿಕವಾಗಿ 1 ಎಕರೆಗೆ 4ರಿಂದ 6 ಲಕ್ಷ ರೂ. ಆದಾಯ ಗಳಿಸಬಹುದು. ರೇಷ್ಮೆ ಒಂದು ಉದ್ಯಮವಾಗಿ, ವ್ಯಾಪಾರವಾಗಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೇಷ್ಮೆ ಬೆಳೆಗೆ ಅತ್ಯುತ್ತಮ ಬೆಲೆ: ರೇಷ್ಮೆ ತರಬೇತಿ ಸಂಸ್ಥೆಯ ಪ್ರಾಚಾರ್ಯ ಆರ್.ಲೋಕೇಶ್ ಮಾತನಾಡಿ, ರೇಷ್ಮೆ ಗೂಡಿಗ ಮಾರುಕಟ್ಟೆ ನಿಯಮಗಳು ಬದಲಾಗಿವೆ. ರೈತರು ತಾವು ಬೆಳೆದ ರೇಷ್ಮೆ ಗೂಡನ್ನು ನೇರವಾಗಿ ರೀಲರ್‌ಗಳಿಗೆ ಮಾರಾಟ ಮಾಡಲು ಅವಕಾಶವಿದೆ. ಅಲ್ಲದೆ, ನಮ್ಮಲ್ಲಿ ಬೆಳೆಯುವ ರೇಷ್ಮೆ ಸಾಲುತ್ತಿಲ್ಲ. ಹೀಗಾಗಿ ಚೀನಾದಿಂದ ರೇಷ್ಮೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ರೇಷ್ಮೆ ಬೆಳೆಗೆ ಅತ್ಯುತ್ತಮ ಬೆಲೆಯಿದೆ.
ಕಿಲೋಗೆ 300 ರೂ. ಬೆಲೆ ಸಿಕ್ಕರೂ ಉತ್ತಮವಾಗಿ ನಿರ್ವಹಣೆ ಮಾಡಬಹುದು ಎಂದರು. ಹಿಪ್ಪು ನೇರಳೆ ಬೆಳೆಯಲು ಹನಿ ನೀರಾವರಿಗೆ ಸರ್ಕಾರದಿಂದ ಸಬ್ಸಿಡಿ ಸೌಲಭ್ಯವಿದೆ. ಅಲ್ಲದೆ, ಹುಳು ಮೇಯಿಸಲು ಮನೆ ನಿರ್ಮಾಣಕ್ಕೂ ಸಬ್ಸಿಡಿ ಸೌಲಭ್ಯಗಳಿವೆ. ಸರ್ಕಾರ ಈ ಬೆಳೆಗೆ ಪುನರುಜ್ಜೀವಗೊಳಿಸಲು ಅನೇಕ ಕ್ರಮಗಳನ್ನು ಕೈಗೊಂಡಿದೆ.
ತಮ್ಮ ಜಮೀನಿನ ಸತ್ವವನ್ನು ಕಾಪಾಡಿಕೊಂಡು 1 ಎಕೆರೆ ಜಮೀನಿನಲ್ಲಿ ಹಿಪ್ಪು ನೇರಳೆ ಬೆಳೆದುಕೊಂಡು ಹುಳು ಸಾಕಾಣಿಕೆ ಮಾಡಿದರೆ ಆರ್ಥಿಕ ಸಬಲತೆ ಸಾಧಿಸಬಹುದು ಎಂದು ಹೇಳಿದರು. ಈ ವೇಳೆ ಕೊಳ್ಳೇಗಾಲ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಸರಿತಾ ಕುಮಾರಿ, ಯಳಂದೂರಿನ ನಿರ್ದೇಶಕ ಎನ್.ಕನಕರಾಜು, ನಾಗರಾಜು, ಅಶೋಕ್, ಸತ್ಯಪಾಲ್, ನಾಗೇಶ್ ಹಾಜರಿದ್ದರು.