ಬೆಳ್ಮಣ್: ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಕ್ಕಳು ಸಾಹಿತ್ಯದ ಒಲವನ್ನು ಬೆಳೆಸಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಕನ್ನಡ ನಾಡು ನುಡಿಯ ಪರಂಪರೆ ಉಳಿಯಲು ಸಾಧ್ಯ ಎಂದು ಖ್ಯಾತ ಜಾನಪದ ಕಲಾವಿದ ಗಣೇಶ್ ಗಂಗೊಳ್ಳಿ ಹೇಳಿದರು.ಅವರು ಮಂಗಳವಾರ ಬೆಳ್ಮಣ್ ಸಂತ ಜೋಸೆಫ್ ಹಿ.ಪ್ರಾ.ಶಾಲಾ ಕನ್ನಡ ಸಾಹಿತ್ಯ ಸಂಘದ 2017 18ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು.
ಪತ್ರಕರ್ತ, ಕ.ಸಾ.ಪ. ಅಜೆಕಾರು ಹೋಬಳಿ ಅಧ್ಯಕ್ಷ ಶೇಖರ ಅಜೆಕಾರು ಮಾತನಾಡಿ, ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಯುವ ಮಕ್ಕಳು ಪುಣ್ಯಾತ್ಮರು. ಮಾತೃ ಭಾಷಾ ಕಲ್ಪನೆಯೇ ಇತರ ಎಲ್ಲಾ ಭಾಷೆಗಳ ಮೇಲೆ ಪ್ರಭುತ್ವ ಸಾ ಧಿಸುವ ಸಾಧನವಾಗಿದೆ. ಮಕ್ಕಳ ಪ್ರತಿಭಾ ವಿಕಸನಕ್ಕೆ ಶಾಲಾ ಕನ್ನಡ ಸಾಹಿತ್ಯ ಸಂಘಗಳು ಉತ್ತಮ ವೇದಿಕೆಗಳಾಗಿವೆ ಎಂದರು.
ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಹಿರಿಯ ಶಿಕ್ಷಕ ವಿನ್ಸೆಂಟ್ ಪಿಂಟೊ, ಶಿಕ್ಷಕಿ ದಿವ್ಯಾ ಸಂಘದ ಉಪಾಧ್ಯಕ್ಷೆ ಸಿಂಚನಾ ಶರ್ಮಾ, ದಿಶಾ ಯು.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ನೂತನ ಅಧ್ಯಕ್ಷೆ ಸುದೀಕ್ಷಾ ಕನ್ನಡ ಸಾಹಿತ್ಯ ಸಂಘದ ಚಟುವಟಿಕೆಗಳಲ್ಲಿ ಎಲ್ಲರೂ ಭಾಗವಹಿಸುವಂತೆ ಕರೆಯಿತ್ತರು.
ನಿಕಟಪೂರ್ವ ಕಾರ್ಯದರ್ಶಿ ನೀತಾ ನಾಯಕ್ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಸೃಷ್ಟಿ ಶೆಟ್ಟಿ ವಂದಿಸಿದರು.ಸಂಘದ ಸಂಚಾಲಕ ಬಿ. ಪುಂಡಲೀಕ ಮರಾಠೆ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು.