ಬೆಳ್ತಂಗಡಿ: ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂದ ಗೇರು ನಿರ್ಲಕ್ಷಿತ ಬೆಳೆಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೇಡಿಕೆ ಹಾಗೂ ಮಾರುಕಟ್ಟೆ ಇರುವುದರಿಂದ ಹೆಚ್ಚಿನ ರೈತರು ಇದರತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಖಾನಾಪುರ ತಾಲೂಕಿನ ಕಾರಲಗಾ ಗ್ರಾಮದ ಸರಕಾರಿ ಮರಾಠಿ ಪ್ರಾಥಮಿಕ ಶಾಲೆ ಆವರಣ ಬಳಿ ಖಾಸಗಿ ಜಮೀನಿನಲ್ಲಿ ಹಾಗೂ ಗಂಗವಾಳಿ ಗ್ರಾಮದಲ್ಲಿ ಕಸಿ ಗೇರು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಸಂಸ್ಥೆಯಿಂದ ಗೇರು ಸಸಿಗಳನ್ನು ಒದಗಿಸಲಾಗುತ್ತದೆ. ಅವುಗಳನ್ನು ತಮ್ಮ ಗದ್ದೆಗಳಲ್ಲಿ ನೆಟ್ಟು ಪೋಷಿಸಿ ಸಂರಕ್ಷಿಸಿ ಹಾಗೂ ಆದಾಯ ಪಡೆಯಬೇಕೆಂದು ಹೇಳಿದರು.
ಸಣ್ಣ ಹಿಡುವಳಿದಾರರು ಕಡಿಮೆ ಬಂಡವಾಳ, ಅಲ್ಪ ನೀರು ಹಾಗೂ ಶ್ರಮ ಬಳಸಿ ಗೇರುಬೆಳೆಸಿದರೆ ಹೆಚ್ಚು ಆದಾಯ ತರುವ ಬೆಳೆಯಾಗಿದೆ ಎಂದ ಅವರು, ಖಾನಾಪುರ ತಾಲೂಕಿನಲ್ಲಿ ಒಟ್ಟು 15 ಸಾವಿರ ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ. ರಾಜ್ಯ ಸರಕಾರ ರೈತರೊಂದಿಗೆ ಸೇರಿ ದೇಶದಲ್ಲಿ ಗೇರು ಬೆಳೆ ಉತ್ಪಾದನೆಯಲ್ಲಿ ಮಂಚೂಣಿಯಲ್ಲಿ ಇರಬೇಕೆಂಬ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ಕೈಗೊಂಡಿದೆ ಎಂದರು. ಡಿ. ವೀರೇಂದ್ರ ಹೆಗ್ಗಡೆ, ಶಾಸಕ ಅರವಿಂದ ಪಾಟೀಲ ಹಾಗೂ ಗಣ್ಯರು ಸೇರಿ ಕಾರಲಗಾ ಗ್ರಾಮದ ಅನುರಾಧಾ ಘಾಡಿ ಹಾಗೂ ಗಂಗವಾಳಿ ಗ್ರಾಮದ ಪರಶುರಾಮ ಗೊದೋಳ್ಳಕರ ಇವರ ಜಮೀನಿನಲ್ಲಿ ಗೇರು ಸಸಿ ನೆಟ್ಟು ಯೋಜನೆಗೆ ಚಾಲನೆ ನೀಡಿದರು.
ಶಾಸಕ ಅರವಿಂದ ಪಾಟೀಲ ಮಾತನಾಡಿ, ಗೇರು ಸಸಿ ನಾಟಿ ಮಾಡಿ ಉತ್ಪನ್ನದ ಲಾಭ ಪಡೆದುಕೊಳ್ಳಬೇಕು. ಧರ್ಮಸ್ಥಳ ಯೋಜನೆ ಹಮ್ಮಿಕೊಳ್ಳುತ್ತಿರುವ ರೈತಪರ ಕಾರ್ಯ ಕ್ರಮಗಳು ಶ್ಲಾಘನೀಯವಾಗಿದೆ ಎಂದರು. ವಿಜಯಲಕ್ಷ್ಮೀ ಪ್ರತಿಷ್ಠಾನದ ಅನಂತ ಕೃಷ್ಣರಾವ್ ಮಾತನಾಡಿ, ರಾಜ್ಯದಲ್ಲಿ 400 ಗೇರು ಉದ್ಯಮಗಳು ಇದ್ದು ಶೆ.25ರಷ್ಟು ಕಚ್ಚಾ ವಸ್ತು ಲಭ್ಯವಿದೆ. ಶೇ. 75ರಷ್ಟು ಹೊರದೇಶದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ ಎಂದರು.
ವಾಸುದೇವ ಭಟ್ಟ, ಅನಂತ ಕೃಷ್ಣರಾವ, ಶಿನಪ್ಪ ಎಂ, ಪ್ರಹ್ಲಾದ ರೇಮಾಣಿ, ಪ್ರಮೋದ ಕೋಚೆರಿ, ವಿಠಲ ಹಲಗೇಕರ, ಗ್ರೇಡ್ 2 ತಹಶೀಲ್ದಾರ ಮುದ್ನಾಳ, ಕೃಷಿ ಅಧಿಕಾರಿ ಸತೀಶ ಹಾದಿಮನಿ, ಧರ್ಮಸ್ಥಳ ಯೋಜನೆಯ ಪ್ರಾದೇಶಿಕ ನಿರ್ದೇಶಕ ಎನ್.ಜಯಶಂಕರ ಶರ್ಮ ಮತ್ತು ಇತರರು ಉಪಸ್ಥಿತರಿದ್ದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವೃಕ್ಷ ರಕ್ಷಾ ವಿಶ್ವ ರಕ್ಷಾ ಅಭಿಯಾನ, ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠ ಉಡುಪಿ, ಕರ್ನಾಟಕ ಗೇರು ಉತ್ಪಾದಕರ ಸಂಘ ಮತ್ತು ವಿಜಯಲಕ್ಷ್ಮೀ ಪ್ರತಿಷ್ಠಾನ ಮೂಡಬಿದರೆ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.