Advertisement

ಸಿರಿಧಾನ್ಯ ಬೆಳೆಯಿರಿ-ತಿನ್ನಿರಿ: ಡಾ|ಖಾದರ್‌

10:37 AM Feb 01, 2018 | |

ಕಲಬುರಗಿ: ಹೆಚ್ಚಿನ ಇಳುವರಿ ಪಡೆಯಬೇಕೆಂಬ ಉದ್ದೇಶ ಹಾಗೂ ಕಂಪನಿಗಳ ಗೊಬ್ಬರ, ಕೀಟನಾಶಕ ಹಾಗೂ ಇನ್ನಿತರ ವಿಷಕಾರಿ ರಾಸಾಯನಿಕಗಳನ್ನು ಕೃಷಿ ಬೆಳೆಗಳಿಗೆ ಬಳಕೆ ಮಾಡುತ್ತಿರುವುದರಿಂದ ಸತ್ವಹೀನ ಕೃಷಿ ಉತ್ಪನ್ನಗಳು ಮನುಷ್ಯನ ಅನೇಕ ರೋಗಗಳಿಗೆ ಕಾರಣವಾಗುತ್ತಿವೆ. ಆದ್ದರಿಂದ ಸಿರಿಧಾನ್ಯ ಬೆಳೆದು ತಿನ್ನುವುದರ ಮುಖಾಂತರ ಆರೋಗ್ಯವಂತ ಸಮಾಜ ನಿರ್ಮಿಸಿ ಎಂದು ಮೈಸೂರಿನ ಹೋಮಿಯೋಪತಿ ವೈದ್ಯ ಡಾ| ಖಾದರ್‌ ಹೇಳಿದರು.

Advertisement

ನೂತನ ಮಹಾವಿದ್ಯಾಲಯ ಮೈದಾನದಲ್ಲಿ ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ
ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳ ಪ್ರವಚನದ ಬದಲು ಸಿರಿಧಾನ್ಯಗಳ ಬಳಕೆ ಹಾಗೂ ಉಪಯೋಗ ಕುರಿತು ಅವರು ಮಾತನಾಡಿದರು.
 
ಕೃಷಿ ಉತ್ಪನ್ನ ಹಾಗೂ ಆಹಾರ ಪದಾರ್ಥಗಳಲ್ಲಿ ವಿಷಕಾರಿ ಅಂಶ ಸೇರ್ಪಡೆ ಆಗಿದ್ದರಿಂದ ಮನುಷ್ಯ ಸಂಕುಲ ಮುಂದಿನ ದಿನಗಳಲ್ಲಿ ಆರೋಗ್ಯವಂತಾಗಿ  ಬಾಳಿ ಬದುಕಲು ಸಾವಯವ ಕೃಷಿಯೊಂದೇ ಪರಿಹಾರ ಹಾಗೂ ಮದ್ದಾಗಿದೆ. ಸಿರಿಧಾನ್ಯಗಳ ಬಳಕೆಯಿಂದ ನಾವು ಯಾವುದೇ ರೋಗಗಳಿಗೆ ಒಳಗಾಗದೇ ಆರೋಗ್ಯವಾಗಿ ಇರಬಹುದಾಗಿದೆ. ಹೀಗಾಗಿ ನವಣೆ, ಸಾಮೆ, ಆರ್ಕ್‌, ಊದಲು ಹಾಗೂ ಕೋರ್ಲೆಗಳನ್ನು ಆಹಾರವನ್ನಾಗಿ ಬಳಸುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು. 

ಅಮೆರಿಕಾದಲ್ಲಿ 40 ವರ್ಷಗಳ ಹಿಂದೆಯೇ ಆರೇಳು ವರ್ಷಕ್ಕೆ ಬಾಲಕಿಯರು ಋತುಸ್ರಾವಕ್ಕೆ ಒಳಗಾಗುತ್ತಿರುವುದು ಕಂಡುಬಂದಿತ್ತು. ಈ ಕುರಿತು ವಿಚಾರಿಸಿದಾಗ ಬಾಟಲಿ ಹಾಲು ಕುಡಿಸಿದ್ದೇ ಕಾರಣ ಎನ್ನುವುದು ಪತ್ತೆಯಾಯಿತು ಎಂದರು. 

ನಮ್ಮ ಜೀವನವೇ ಇಂದು ಪ್ಲಾಸ್ಟಿಕ್‌ ಮಯವಾಗಿದೆ. ಮಗುವಿಗೆ ತಾಯಿ ಹಾಲೇ ಶ್ರೇಷ್ಠವಾಗಿದೆ. ಆದರೆ ಹಾಲು ಕುಡಿಸದೇ ಇರುವುದರಿಂದ ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ. ವೈದ್ಯರು ರೋಗ ಇಲ್ಲದಿದ್ದರೂ ವಿನಾಕಾರಣ ಔಷಧಿಗಳನ್ನು ನೀಡಿ ದಾಸ್ಯನನ್ನಾಗಿ ಮಾಡುತ್ತಿದ್ದಾರೆ. ವೈದ್ಯರು ಹಾಗೂ ಔಷಧಿ ಕಂಪನಿಗಳು ಜನರ ರಕ್ತ ಹೀರಿ ತಮ್ಮ ವ್ಯಾಪಾರ ಬೆಳೆಸಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಮುತ್ಯಾನ ಬಬಲಾದ ಮಠದ ಗುರುಪಾದಲಿಂಗ ಮಹಾಸ್ವಾಮೀಜಿ, ಸೇಡಂನ ಸದಾಶಿವ ಮಹಾಸ್ವಾಮೀಜಿ ಹಾಜರಿದ್ದರು. ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿಯ ಮಲ್ಲಿಕಾರ್ಜುನ ಆರ್‌. ಗರೂರ್‌, ಅಪ್ಪು ಕಣಕಿ, ಸುರೇಶ ಪಾಟೀಲ ಜೋಗುರ ಉಪನ್ಯಾಸಕರು ಹಾಗೂ ಸ್ವಾಮೀಜಿ ಅವರನ್ನು ಸತ್ಕರಿಸಿದರು.

Advertisement

ಆಲದ ಮರಗಳನ್ನು ಬೆಳೆಯಿರಿ: ಸತ್ವಹೀನ, ವಿಷಕಾರಿ ಕೃಷಿ ಉತ್ಪನ್ನ ಹಾಗೂ ಕೃತಕ ಆಹಾರ ಪದಾರ್ಥಗಳನ್ನು ತಿಂದು ಅನಾರೋಗ್ಯಕ್ಕೆ ಈಡಾಗುತ್ತಿದೆ. ಇದರ ಹಿಂದೆ ವಾಣಿಜ್ಯ ಕಂಪನಿಗಳು ವ್ಯವಸ್ಥಿತ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಕೃತಕವಾಗಿ ರೂಪಿಸಿರುವ ತತ್ತಿ ಹಾಗೂ ಮಾಂಸವನ್ನು ತಿಂದು ಕೊಲೆಸ್ಟ್ರಾಲ್‌ ಹೆಚ್ಚಿಗೆ ಮಾಡಿಕೊಳ್ಳುತ್ತಿದ್ದೇವೆ. ಒಂದು ಕೆಜಿ ಮಾಂಸಕ್ಕಾಗಿ 50 ಲೀಟರ್‌ ನೀರು ಹಾಳು ಮಾಡುತ್ತಿದ್ದೇವೆ. ಅದೇ ರೀತಿ ಪರ್ವತ ಶ್ರೇಣಿಗಳಲ್ಲಿ ಪರಿಸರಕ್ಕೆ ಸಹಕಾರಿಯಾಗಿದ್ದ ಮರಗಳನ್ನು ಕಡಿದು ಕಾಫಿ, ಟೀ ಎಸ್ಟೇಟ್‌ಗಳನ್ನು ಮಾಡಲಾಗಿದೆ. ಇದರಿಂದ ನದಿ ಕೊಳ್ಳಗಳು ಬತ್ತಿ ಹೋಗುತ್ತಿವೆ. ಮಂದಿನ ದಿನಗಳಲ್ಲಿ ನೀರಿಗಾಗಿ ರಾಜ್ಯ-ರಾಜ್ಯಗಳ ನಡುವೆ ಸಂಘರ್ಷ ನಡೆಯುವ ಕಾಲ ದೂರ ಇಲ್ಲ ಎನಿಸುತ್ತದೆ. ಆದ್ದರಿಂದ ಹಿಂದಿನಂತೆ ದೊಡ್ಡ ಆಲದ ಮರ ಸೇರಿದಂತೆ ಅಪರೂಪದ ಗಿಡ ಮರಗಳನ್ನು ಬೆಳೆಯುವುದು ಅಗತ್ಯವಾಗಿದೆ. 

ನೀರನ್ನು ಬಿಟ್ಟರೆ ಏನನ್ನು ಕುಡಿಯಬೇಡಿ: ನೀರನ್ನು ಬಿಟ್ಟರೆ ನಾವು ಏನನ್ನು ಕುಡಿಯಬಾರದು. ಆದರೆ ನಾವಿಂದು ಟೀ, ಕಾಫಿ ಚಟಕ್ಕೆ ಒಳಗಾಗಿ ದೈಹಿಕ ಹಾಗೂ ಜೀರ್ಣ ಶಕ್ತಿಯನ್ನು ಕುಂದಿಸುತ್ತಿದ್ದೇವೆ. ದೇಹದಲ್ಲಿನ ದೌರ್ಬಲ್ಯ ಕಡಿಮೆಯಾಗಿ ಶಕ್ತಿ ಹೆಚ್ಚಳವಾಗಲು ಸಿರಿ ಧಾನ್ಯಗಳಾದ ನವಣೆ, ಸಾಮೆ, ಆರ್ಕ್‌, ಊದಲು ಹಾಗೂ ಕೋರ್ಲೆಗಳನ್ನು ತಿಂದರೆ ಮಾತ್ರ ಪರಿಹಾರ ದೊರಕುತ್ತದೆ.  

Advertisement

Udayavani is now on Telegram. Click here to join our channel and stay updated with the latest news.

Next