Advertisement
ಹೀಗೆ ನಗರದಲ್ಲಿರುವ ಹತ್ತಾರು ಪ್ರಕಾರದ ಮನೆ ಗಳ ತಾರಸಿ ಅಥವಾ ಬಾಲ್ಕನಿಗೆ ಹೊಂದುವ ವಿವಿಧ ಪ್ರಕಾರದ ತೋಟಗಾರಿಕೆ ಮಾದರಿಗಳನ್ನು ಇಲ್ಲಿನ ಹೆಸರಘಟ್ಟದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಕಾಣಬಹುದು. ಭಾರ ತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆ (ಐಐಎಚ್ ಆರ್) ಈ ಮಾದರಿಗಳನ್ನು ಅಭಿವೃದ್ಧಿಪಡಿಸಿದ್ದು, ಬೆಂಗಳೂರಿಗರ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುಗಳಾಗಿವೆ.
Related Articles
Advertisement
ಸೊಪ್ಪುಗಳೆಲ್ಲವೂ ತಿಂಗಳಲ್ಲಿ ಹಾಗೂ ಇತರೆ ತರಕಾರಿಗಳನ್ನು ಒಂದೂವರೆ ತಿಂಗಳಲ್ಲಿ ಇಳುವರಿ ಪಡೆಯಬಹುದು. ಆದರೆ, ಈ ಎರಡೂ ವಿನ್ಯಾಸಗಳಲ್ಲಿ ಬೆಳೆಯುವ ಬೆಳೆಗಳಿಗೆ ಸೂರ್ಯನ ಬೆಳಕು ಕಡ್ಡಾಯವಾಗಿದ್ದು, ಈ ಹಿನ್ನೆಲೆಯಲ್ಲಿ ಪೂರ್ವ ಅಥವಾ ಪಶ್ಚಿಮ ಮುಖವಾಗಿ ಇವುಗಳನ್ನು ಇಡಬೇಕಾಗುತ್ತದೆ. ಚಿಕ್ಕ ಚಕ್ರಗಳನ್ನು ಅಳವಡಿಸಿದ್ದರಿಂದ, ಸುಲಭವಾಗಿ ಒಂದು ಕಡೆಯಿಂದ ಮತ್ತೂಂದು ಕಡೆಗೆ ಕೊಂಡೊಯ್ಯಬಹುದು ಎಂದು ಹೇಳಿದರು.
ತಾರಸಿ ತೋಟಗಾರಿಕೆ; ಮನೆಗೂ ತಂಪು : ತಾರಸಿಯಲ್ಲಿ 20×30 ಅಡಿ ಜಾಗ ಇದ್ದರೆ, ನಾಲ್ಕು ಜನರಿರುವ ಒಂದು ಕುಟುಂಬಕ್ಕೆ ಸಾಕಾಗುವಷ್ಟು ತರಕಾರಿಯನ್ನು ಅನಾಯಾಸವಾಗಿ ಬೆಳೆಯಬಹುದು. ಆದರೆ, ನೆರಳು ಪರದೆ ಇದ್ದರೆ ಉತ್ತಮ ಎಂದು ಡಾ.ಸಿ. ಅಶ್ವಥ್ ಸ್ಪಷ್ಟಪಡಿಸಿದರು. ನೆರಳು ಪರದೆಯಿಂದ ತರಕಾರಿಗಳಿಗೆ ಮಂಗಗಳ ಕಾಟ ಇರುವುದಿಲ್ಲ. ನೀರಿನ ಉಳಿತಾಯ ಆಗುತ್ತದೆ. ಶೇ. 20ರಷ್ಟು ಆವಿಯಾಗುವುದನ್ನು ತಪ್ಪಿಸಬಹುದು. ಚದರ ಮೀಟರ್‌ಗೆ ಎಲ್ಲ ಖರ್ಚು ಸೇರಿ 100 ರೂ. ಆಗುತ್ತದೆ. 50-60 ಸಾವಿರ ರೂ.ಗಳಲ್ಲಿ ಇದನ್ನು ನಿರ್ಮಿಸಬಹುದು. ಹೀಗೆ ತಾರಸಿ ತೋಟಗಾರಿಕೆಯಿಂದ ಮನೆಯೂ ತಂಪಾಗಿರುತ್ತದೆ. ತಾರಸಿ ನೆಲಕ್ಕೆ ಟೈಲ್ಸ್ ಕಲ್ಲುಗಳು ಇದ್ದರೆ ಒಳ್ಳೆಯದು. ಏಕೆಂದರೆ, ಗಿಡಗಳಿಗೆ ಪೂರೈಸುವ ನೀರು ಸೋರಿಕೆಯಾಗಿ, ತಾರಸಿಯಲ್ಲಿ ನಿಲ್ಲುವುದು ತಪ್ಪುತ್ತದೆ ಎಂದೂ ಮಾಹಿತಿ ನೀಡಿದರು.
ನಿರೀಕ್ಷೆ ಮೀರಿ ನೋಂದಣಿ! : ನಗರ ತೋಟಗಾರಿಕೆ ಕಾರ್ಯಾಗಾರಕ್ಕೆ ನಿರೀಕ್ಷೆ ಮೀರಿ ಸ್ಪಂದನೆ ದೊರಕಿದ್ದು, ಕಳೆದೆರಡು ದಿನಗಳಲ್ಲಿ 120 ಜನ ಈ ಕಾರ್ಯಾಗಾರಕ್ಕೆ ಹಾಜರಾಗಿ ಮಾಹಿತಿ ಪಡೆದಿದ್ದಾರೆ. ನಾವು ನಿತ್ಯ ತಲಾ 50 ಜನ ಬರಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ, 60 ಜನ ಬಂದಿದ್ದಾರೆ. ಬಹುತೇಕ ಎಲ್ಲರೂ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಂಡವರಾಗಿದ್ದಾರೆ. ಹೀಗೆ ತರಬೇತಿ ಪಡೆದವರಿಗೆ 800 ಪುಟಗಳ ಮಾಹಿತಿವುಳ್ಳ ಪೆನ್‌ಡ್ರೈವ್ ನೀಡಲಾಗಿದ್ದು, ಕೊಕೊಪೀಟ್ ಚೀಲ ಮತ್ತು ಕಿಟ್ ವಿತರಿಸಲಾಗಿದೆ ಎಂದು ಪ್ರಧಾನ ವಿಜ್ಞಾನಿ ಡಾ.ಅಶ್ವಥ್ ತಿಳಿಸಿದರು.
ಆರ್ಕಿಡ್‌ಗೆ ಎಸಿ ಕೋಣೆ : ಇನ್ನು ಆರ್ಕಿಡ್ ಮತ್ತು ಔಷಧೀಯ ಸಸ್ಯಗಳನ್ನು ಬೆಳೆಯಲಿಕ್ಕೂ ಸೌರಶಕ್ತಿ ಸಂಯೋಜಿತ ಮಾದರಿ ಬೆಳವಣಿಗೆ ಕೋಣೆ ರೂಪಿಸಲಾಗಿದೆ. ಇದರ ಕೆಳಭಾಗದಲ್ಲಿ ನೀರಿನ ಟ್ಯಾಂಕರ್ ಇರುತ್ತದೆ. ಮೇಲ್ಭಾಗದಲ್ಲಿ ಕೊಳವೆಗಳನ್ನು ಅಳವಡಿಸಿದ್ದು, ಅದರಿಂದ ಮಂಜಿನ ರೂಪದಲ್ಲಿ ನೀರಿನ ಪೂರೈಕೆ ಆಗುತ್ತದೆ. ಆರ್ಕಿಡ್‌ಗಳಿಗೆ ಶೇ. 80ರಷ್ಟು ಆದ್ರìತೆ ಇರಬೇಕಾಗುತ್ತದೆ. ಹಾಗಾಗಿ, ಈ ವ್ಯವಸ್ಥೆ ಮಾಡಲಾಗಿದೆ. ಇದರ ಬೆಲೆ ಎಲ್ಲವೂ ಸೇರಿ 25 ಸಾವಿರ ರೂ. ಆಗುತ್ತದೆ ಎಂದು ಡಾ.ಅಶ್ವಥ್ ವಿವರಿಸಿದರು.
ಪೋಷಕಾಂಶಗಳನ್ನು ಒದಗಿಸುವ ಫಿಲ್ಮ್ ತಂತ್ರಜ್ಞಾನ ಆಧಾರಿತ (ಎನ್‌ಟಿಎಫ್-ನ್ಯೂಟ್ರಿಯಂಟ್ ಫಿಲ್ಮ್ ಟೆಕ್ನಾಲಜಿ) ಮಾದರಿಯಲ್ಲೇ ಲಂಬ ಮತ್ತು ಅಗಲ ಮಾದರಿಗಳನ್ನೂ ಪರಿಚಯಿಸಲಾಗಿದೆ. ಇದು ಮಣ್ಣುರಹಿತವಾಗಿದ್ದು, ತೆಳುವಾದ ಫಿಲ್ಮ್ನಿಂದ ನೀರು ಮತ್ತು ಪೋಷಕಾಂಶಗಳ ಪೂರೈಕೆ ಆಗುತ್ತದೆ. ಇತರೆ ಬೆಳೆಗಳಿಗೆ ಹೋಲಿಸಿದರೆ, ಈ ತಂತ್ರಜ್ಞಾನದಲ್ಲಿ ಶೇ. 50ರಷ್ಟು ಹೆಚ್ಚು ಇಳುವರಿ ಬರುತ್ತದೆ. ಸೊಪ್ಪಿನ ತರಕಾರಿ ಇದರಲ್ಲಿ ಬೆಳೆಯಬಹುದು ಎಂದರು.
-ವಿಜಯಕುಮಾರ್ ಚಂದರಗಿ