Advertisement
ಗುಂಪು ಕೃಷಿ ಅಥವಾ ಕ್ಲಸ್ಟರ್ ಫಾರ್ಮಿಂಗ್ ಹಲವು ದೇಶಗಳಲ್ಲಿ ಈಗಾಗಲೇ ಯಶಸ್ವಿಯಾಗಿರುವ ಪ್ರಯೋಗ. ವಿದೇಶಗಳಲ್ಲಿ ಕೃಷಿ ಉತ್ಪನ್ನವನ್ನು ಹೆಚ್ಚಿಸುವ ಉದ್ದೇಶದಿಂದ ಗುಂಪು ಕೃಷಿಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಇಸ್ರೇಲ್‌ನಂತಹ ದೇಶಗಳು ಬಹಳ ವರ್ಷಗಳ ಹಿಂದೆಯೇ ಈ ಪದ್ಧತಿಯನ್ನು ಅಳವಡಿಸಿಕೊಂಡಿವೆ. ಅಲ್ಲೆಲ್ಲ ಕೃಷಿಯೆಂದರೆ ಬರೀ ರೈತರ ಕಾಯಕ ಮಾತ್ರವಲ್ಲ ಅದರಲ್ಲಿ ಸರಕಾರದ ಸಕ್ರಿಯ ಭಾಗೀದಾರಿಕೆಯೂ ಇರುತ್ತದೆ. ನಾವು ಈ ನಿಟ್ಟಿನಲ್ಲಿ ಇನ್ನೂ ಬಹಳ ಹಿಂದೆ ಇದ್ದರೂ ಕನಿಷ್ಠ ಈಗಲಾದರೂ ಹೊಸ ಅನ್ವೇಷಣೆಯತ್ತ ಸರಕಾರಗಳು ಮುಂದಾಗುತ್ತಿವೆ ಎನ್ನುವುದು ಸ್ವಾಗತಾರ್ಹ ಅಂಶ.
Related Articles
Advertisement
ಹೀಗಾಗಿ ಭಾರೀ ಪ್ರಮಾಣದಲ್ಲಿ ಕೃಷಿ ಭೂಮಿ ಪಾಳು ಬೀಳುತ್ತಿದೆ ಇಲ್ಲವೇ ಸೈಟುಗಳಾಗಿ, ಬಡಾವಣೆಗಳಾಗಿ ಬದಲಾಗುತ್ತಿವೆ. ಈ ಸಮಸ್ಯೆಗೆ ಗುಂಪು ಕೃಷಿ ಉತ್ತಮ ಪರಿಹಾರವಾಗಬಲ್ಲುದು. ಕೃಷಿಯಿಂದ ವಿಮುಖವಾಗಿರುವ ಯುವ ಸಮುದಾಯವನ್ನು ಕೃಷಿಯಲ್ಲಿ ತೊಡಗಿ ಕೊಳ್ಳುವಂತೆ ಮಾಡುವುದು ಈಗ ನಮ್ಮ ಮುಂದಿರುವ ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಗುಂಪು ಕೃಷಿಯನ್ನು ಯುವ ಕೇಂದ್ರಿತವನ್ನಾಗಿ ಮಾಡುವ ಅಗತ್ಯ ಇದೆ.
ಗುಂಪು ಕೃಷಿಯಿಂದ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯ ಎನ್ನುವುದು ನಿಜ. ಇದೇ ವೇಳೆ ಕೃಷಿ ಉತ್ಪನ್ನಕ್ಕೆ ಸಮರ್ಪಕವಾದ ಮಾರುಕಟ್ಟೆಯನ್ನು ಸೃಷ್ಟಿಸಿಕೊಡುವುದು ಕೂಡಾ ಅಷ್ಟೇ ಅಗತ್ಯ ಎನ್ನುವುದನ್ನು ಸರಕಾರ ಮನಗಾಣಬೇಕು. ಈಗಲೂ ಭಾರತದ ಕೃಷಿ ಮಾರುಕಟ್ಟೆ ದಲ್ಲಾಳಿಗಳ ಹಿಡಿತದಲ್ಲೇ ಇದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ಬಹಳಷ್ಟು ಪ್ರಯತ್ನ ಮಾಡಿದೆ ಎನ್ನುವುದು ನಿಜವಾಗಿದ್ದರೂ, ಇನ್ನೂ ಈ ನಿಟ್ಟಿನಲ್ಲಿ ಆಗಬೇಕಿರುವುದು ಬಹಳಷ್ಟು ಇದೆ. ಅನೇಕ ಸಂದರ್ಭಗಳಲ್ಲಿ ಕೃಷಿ ಉತ್ಪನ್ನಕ್ಕೆ ಸಿಗುವ ಬೆಲೆಯೇ ರೈತರಿಗೆ ಕೃಷಿಯ ಮೇಲೆ ವೈರಾಗ್ಯ ಮೂಡುವಂತೆ ಮಾಡುತ್ತಿದೆ. ಈ ಪರಿಸ್ಥಿತಿ ಬದಲಾಗಬೇಕು.
ಕೇಂದ್ರ ಸರಕಾರ 2022ಕ್ಕಾಗುವಾಗ ರೈತರ ಆದಾಯವನ್ನು ದ್ವಿಗುಣ ಗೊಳಿಸುವ ಗುರಿಯನ್ನೇನೋ ಇಟ್ಟುಕೊಂಡಿದೆ. ಇದು ಕಾರ್ಯರೂಪಕ್ಕೆ ಬರಬೇಕಾದರೆ ರಾಜ್ಯಗಳ ಪಾತ್ರವೂ ಮುಖ್ಯ. ಗುಂಪು ಕೃಷಿಯಂಥ ಪ್ರಯೋಗಗಳು ಈ ಗುರಿಗೆ ಪೂರಕವಾಗಿರಲಿ.