ಇಂದಿನ ದಿನಗಳಲ್ಲಿ ಬಹುತೇಕರು ಸ್ಮಾರ್ಟ್ ಪೋನ್ ಮೇಲೆ ಅವಲಂಬಿತರಾಗಿರುತ್ತಾರೆ. ಆದರೆ ಅದೆಷ್ಟೋ ಜನರಿಗೆ ಅದರ ಅನಾನೂಕುಲತೆ, ಆಪತ್ತುಗಳ ಬಗ್ಗೆ ಗೊತ್ತಿರುವುದಿಲ್ಲ. ಅದರಲ್ಲೂ ಸ್ಮಾರ್ಟ್‌ಪೋನ್‌ಗಳ ಸೆಲ್ಫಿಕ್ರೇಜ್ ಅಂತೂ ಪ್ರತಿವರ್ಷ ಅದೆಷ್ಟೋ ಜೀವಗಳನ್ನ ಬಲಿಪಡೆಯುತ್ತಿದೆ. ಈಗ ಇದೇ ವಿಷಯವನ್ನು ಇಟ್ಟುಕೊಂಡು ಇಲ್ಲೊಂದು ಹೊಸಬರ ತಂಡ “ಗ್ರೂಫಿ’ ಹೆಸರಿನ ಸಿನಿಮಾದಲ್ಲಿ ಅದನ್ನ ತೆರೆಮೇಲೆ ಹೇಳಲು ಹೊರಟಿದೆ.
ಹೌದು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಜೊತೆ ಎಳೆಂಟು ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿರುವ ಡಿ. ರವಿ ಅರ್ಜುನ್ ಇಂಥದ್ದೊಂದು ಸಬ್ಜೆಕ್ಟ್ ಸಿನಿಮಾ ಟಚ್‌ಕೊಟ್ಟು ಬಿಗ್ ಸ್ಕ್ರೀನ್ ಮೇಲೆ ತರುತ್ತಿದ್ದಾರೆ.
ಈ ಬಗ್ಗೆ ಮಾತನಾಡುವ ನಿರ್ದೇಶಕ ಡಿ. ರವಿ ಅರ್ಜುನ್, “ಕೆಲ ವರ್ಷಗಳ ಹಿಂದೆ ಮಂಡ್ಯದಲ್ಲಿ ನಡೆದ ಮೆಡಿಕಲ್ ಸ್ಟುಡೆಂಟ್ಸ್ ಕುರಿತ ನೈಜ ಘಟನೆಯನ್ನ ಆಧಾರವಾಗಿಟ್ಟುಕೊಂಡು, ಅದನ್ನ ಸಿನಿಮ್ಯಾಟಿಕ್ ಸ್ಟೈಲ್‌ನಲ್ಲಿ ಈ ಸಿನಿಮಾದಲ್ಲಿ ಸ್ಕ್ರೀನ್ ಮೇಲೆ ತರುತ್ತಿದ್ದೇವೆ. ಇದೊಂದು ಔಟ್ ಆ್ಯಂಡ್ ಔಟ್ ಯೂಥ್ ಫುಲ್ ಸಬ್ಜೆಕ್ಟ್ ಸಿನಿಮಾ.ಕನ್ನಡದಲ್ಲಿ ಇಂಥದ್ದೊಂದು ಸಬ್ಜೆಕ್ಟ್ ಸಿನಿಮಾ ಬಂದಿಲ್ಲ. ಸೆಲ್ಫಿ ಡೆಸಾಸ್ಟರ್ (ಸೆಲ್ಫಿಕ್ರೇಜ್) ನಮ್ಮ ಯುವಕರನ್ನು ಎಷ್ಟರ ಮಟ್ಟಿಗೆ ಹಾಳು ಮಾಡುತ್ತದೆ ಅನ್ನೋದರ ಸುತ್ತ ಇಡೀ ಸಿನಿಮಾದ ಕಥೆ ನಡೆಯುತ್ತದೆ. “ಸೆಲ್ಫಿ’ ಆಪತ್ತುಗಳ ಬಗ್ಗೆ “ಗ್ರೂಫಿ’ಯಲ್ಲಿ ಸಂದೇಶವಿದೆ. ಸಸ್ಪೆನ್ಸ್ – ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ. ಒಬ್ಬರೆ ಪೋಟೋ ತೆಗೆದುಕೊಂಡರೆ ಸೆಲ್ಫಿ. ಅದೇ ಪೋಟೋವನ್ನ ಗುಂಪಾಗಿ ತೆಗೆದುಕೊಂಡರೆ ಅದು “ಗ್ರೂಫಿ’ ಎನ್ನುತ್ತಾರೆ. ಕಥೆಗೆ ಹೊಂದಿಕೆ ಆಗುತ್ತದೆ ಎಂಬ ಕಾರಣಕ್ಕೆ “ಗ್ರೂಫಿ’ ಟೈಟಲ್ ಇಟ್ಟುಕೊಂಡಿದ್ದೇವೆ’ ಎಂದು ವಿವರಣೆ ಕೊಡುತ್ತಾರೆ.
“ಲಿಯಾ ಗ್ಲೋಬಲ್ ಮೀಡಿಯಾ’ ಬ್ಯಾನರ್ ನಲ್ಲಿ ಕೆ.ಜಿ ಸ್ವಾಮಿ ನಿರ್ಮಿಸಿದ “ಗ್ರೂಫಿ’ ಚಿತ್ರದಲ್ಲಿ ಹೊಸ ಪ್ರತಿಭೆಗಳಾದ ಆರ್ಯನ್, ಪದ್ಮಶ್ರೀ ಜೈನ್, ಗಗನ್, ಉಮಾ ಮಯೂರಿ, ಸಂದ್ಯಾ, ಪ್ರಜ್ವಲ್, ಶ್ರೀಧರ್, ಹನುಮಂತೇಗೌಡ, ಸಂಗೀತಾ, ರಘು ಪಾಂಡೇಶ್ವರ್, ರಜನಿಕಾಂತ್ ಮೊದಲಾದವರು ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಗ್ರೂಫಿ’ ಹಾಡುಗಳಿಗೆ ವಿಜೇತ್‌ಕೃಷ್ಣ ಸಂಗೀತ ಸಂಯೋಜನೆಯಿದ್ದು, ಅಜಯ ಲಕ್ಷ್ಮೀಕಾಂತ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನವಿದೆ.
ಪ್ರಕೃತಿಯ ಜೊತೆ ಇಡೀ ಸಿನಿಮಾದ ಕಥೆ ಸಾಗಲಿದ್ದು, ಮಡಿಕೇರಿ, ಸೋಮವಾರ ಪೇಟೆ, ಹೊನ್ನಾವರದ ಸುಂದರ ತಾಣಗಳಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದೆ. ಚಿತ್ರದ ಆರು ಪ್ರಮುಖ ಪಾತ್ರಗಳು ಒಂದು ಕಡೆ ಸೇರಿದಾಗ ನಡೆಯುವ ಘಟನೆ ಸಿನಿಮಾದ ಹೈಲೈಟ್ ಎನ್ನುತ್ತದೆ ಚಿತ್ರತಂಡ.
ಇತ್ತೀಚೆಗಷ್ಟೇ “ಗ್ರೂಫಿ’ ಟ್ರೇಲರ್ ಬಿಡುಗಡೆ ಮಾಡಿ ಭರ್ಜರಿಯಾಗಿ ಪ್ರಚಾರ ಕಾರ್ಯದಲ್ಲಿರುವ ಚಿತ್ರತಂಡ, ಇದೇ ಆ.20ರಂದು “ಗ್ರೂಫಿ’ಯನ್ನು ತೆರೆಗೆ ತರಲು ಪ್ಲಾನ್ ಹಾಕಿಕೊಂಡಿದೆ.