ಹೊಸದಿಲ್ಲಿ: ಭಾರತೀಯ ವಾಯುಪಡೆ ಯಲ್ಲಿ ಮೊದಲ ಬಾರಿಗೆ ಮಹಿಳಾ ಅಧಿಕಾರಿ ಯೊಬ್ಬರಿಗೆ ಮುಂಚೂಣಿ ಯುದ್ಧ ಘಟಕದ ಹೊಣೆಯನ್ನು ವಹಿಸಲಾಗಿದೆ.
ಹೆಲಿಕಾಪ್ಟರ್ ಪೈಲಟ್ ಆಗಿರುವ ಗ್ರೂಪ್ ಕ್ಯಾಪ್ಟನ್ ಶಲೀಝಾ ಧಮಿ ಅವರು ಪಶ್ಚಿಮ ವಲಯದ ಮಿಸೈಲ್ ಸ್ಕ್ವಾಡ್ರನ್‌ನ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ವಾಯುಪಡೆಯಲ್ಲಿ “ಗ್ರೂಪ್ ಕ್ಯಾಪ್ಟನ್’ ಎನ್ನು ವುದು ಭೂಸೇನೆಯಲ್ಲಿ “ಕರ್ನಲ್’ಗೆ ಸಮಾನವಾದ ಹುದ್ದೆಯಾಗಿದೆ.
ಮಂಗಳವಾರ ಭಾರತೀಯ ವಾಯುಪಡೆ ಈ ಘೋಷಣೆಯನ್ನು ಮಾಡಿದೆ. ದೇಶದ ಸಶಸ್ತ್ರ ಪಡೆಗಳು ಪುರುಷರಿಗೆ ಸಮಾನ ವಾಗಿ ಮುಂಚೂಣಿ ಪಡೆಗಳಲ್ಲಿ ಮಹಿಳೆಯರಿಗೂ ಅವಕಾಶಗಳನ್ನು ಕಲ್ಪಿಸುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
2003ರಲ್ಲಿ ವಾಯುಪಡೆಗೆ ಸೇರ್ಪಡೆಗೊಂಡ ಶಲೀಝಾ ಧಮಿ ಅವರು ಈವರೆಗೆ 2,800ಕ್ಕೂ ಹೆಚ್ಚು ಗಂಟೆಗಳ ವಿಮಾನ ಹಾರಾಟದ ಅನುಭವ ಹೊಂದಿದ್ದಾರೆ. ಅವರು ವಾಯುಪಡೆಯ ಮೊದಲ ಫ್ಲೈಯಿಂಗ್ ಇನ್‌ಸ್ಟ್ರಕ್ಟರ್ ಹಾಗೂ ಪಶ್ಚಿಮ ವಲಯದ ಹೆಲಿಕಾಪ್ಟರ್ ಘಟಕದ ಫ್ಲೈಟ್ ಕಮಾಂಡರ್ ಕೂಡ ಹೌದು.
Related Articles
“ಪ್ರಥಮ’ಗಳ ರಾಣಿ ಧಮಿ
ಪಂಜಾಬ್‌ನ ಲುಧಿಯಾನಾದಲ್ಲಿ ಜನಿಸಿದ ಶಲೀಝಾ ಧಮಿ 2003ರಲ್ಲಿ ಮೊದಲ ಬಾರಿಗೆ ಏಕಾಂಗಿಯಾಗಿ ಎಚ್‌ಎಎಲ್ ನಿರ್ಮಿತ ಎಚ್‌ಪಿಟಿ-32 ದೀಪಕ್ ವಿಮಾನವನ್ನು ಯಶಸ್ವಿಯಾಗಿ ಹಾರಾಟ ನಡೆಸಿದರು. ಬಳಿಕ ವಾಯುಪಡೆಯ ಫ್ಲೈಯಿಂಗ್ ಆಫೀಸರ್ ಆಗಿ ನೇಮಕಗೊಂಡರು. 2005ರಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ಭಡ್ತಿ ಪಡೆದು, 2009ರಲ್ಲಿ ಸ್ಕ್ವಾಡ್ರನ್ ಲೀಡರ್ ಆದರು. 2019ರಲ್ಲಿ ಫ್ಲೈಯಿಂಗ್ ಘಟಕವೊಂದರ ಫ್ಲೈಟ್ ಕಮಾಂಡರ್ ಹುದ್ದೆಗೆ ಭಡ್ತಿ ಪಡೆದ ಮೊದಲ ಮಹಿಳಾ ಐಎಎಫ್ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಒಟ್ಟಾರೆ ತಮ್ಮ 15 ವರ್ಷಗಳ ಅನುಭವದಲ್ಲಿ ಹಲವು ಪ್ರಥಮಗಳ ಗರಿಗಳು ಧಮಿ ಅವರ ಮುಡಿಗೇರಿವೆ.