Advertisement

ಸಾಮೂಹಿಕ ವಿವಾಹ ಬಡವರಿಗೆ ವರ

09:44 AM Mar 05, 2019 | |

ಹರಪನಹಳ್ಳಿ: ಸಾಮಾಜಿಕ ಸಂಸ್ಥೆಗಳು, ಮಠ-ಮಾನ್ಯಗಳು ಇಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುವ ಮೂಲಕ ಬಡವರಿಗೆ ನೆರವಾಗಿರುವುದು ಸ್ತುತ್ಯಾರ್ಹ ಕಾರ್ಯವಾಗಿದೆ. ಸಮಾಜ ಇಂತಹ ಕಾರ್ಯಕ್ಕೆ ಬೆನ್ನುಲುಬಾಗಿ ನಿಲ್ಲಬೇಕು ಎಂದು ಬಾಳೇಹೊಸೂರು ದಿಂಗಾಲೇಶ್ವರ ಮಠದ ಪೀಠಾಧ್ಯಕ್ಷ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

Advertisement

ತಾಲೂಕಿನ ನೀಲಗುಂದ ಗ್ರಾಮದ ಗುಡ್ಡದ ವಿರಕ್ತಮಠದಲ್ಲಿ ಜಂಗಮ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಹಾಗೂ ವಿದ್ಯಾರ್ಥಿ ನಿಲಯ ಹಾಗೂ ದಾಸೋಹ ಮಹಾಮನೆಯ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀವರ್ಚನ ನೀಡಿದರು. 

ಮತ-ಪಂಥಗಳನ್ನು ಅಳಿಸಿ ಹಾಕುವ ನಿಟ್ಟಿನಲ್ಲಿ ಸರ್ವಧರ್ಮೀಯರ ಸಹಭಾಗಿತ್ವದಲ್ಲಿ ನಡೆಯುವ ಸರಳ ಸಾಮೂಹಿಕ ವಿವಾಹಗಳು ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯಲ್ಲಿ ಬಡವರ ಪಾಲಿನ ಸಂಜೀವಿನಿಯಾಗಿವೆ. ಎಲ್ಲ ಆಶ್ರಮಗಳಿಗಿಂತ ಗೃಹಸ್ಥಾಶ್ರಮ ಶ್ರೇಷ್ಠ. ವಿವಾಹ ಎಂಬುವುದು ಕೇವಲ ಎರಡು ದೇಹಗಳ ನಡುವಿನ ಸಮ್ಮಿಲನ ಸಲ್ಲ, ಅದು ಎರಡು ಹೃದಯ ಬೆಸೆಯುವ ಪವಿತ್ರವಾದ ಜೀವನ ಪದ್ಧತಿ. ಸತಿಪತಿಗಳು ಹೊಂದಾಣಿಕೆಯಿಂದ ಜೀವನ ನಡೆಸಬೇಕು ಎಂದರು.

ಮಡಿವಾಳ ಮಾಚಿದೇವ ಸಂಸ್ಥಾನದ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ, ಸಾಮೂಹಿಕ ವಿವಾಹಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವರದಾನವಾಗಿವೆ. ಇಂತಹ ವಿವಾಹ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಜೊತೆಗೆ ಸಮಾಜದಲ್ಲಿ ಸಾಮರಸ್ಯದ ವಾತಾವರಣ ಮೂಡಿಸುತ್ತವೆ. ಯುವಕರು ದುಶ್ಚಟಗಳಿಂದ ದೂರವಿದ್ದು, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಸಂಸ್ಕೃತರಾಗಬೇಕು. ಶರಣರು ಸದ್ಭಕ್ತರ ಹೃದಯದ ಆಳದಲ್ಲಿ ನೆಲೆಸಿರುತ್ತಾರೆ. ಅವರ ಮಾರ್ಗಗಳನ್ನು ಅನುಸರಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.

ಹೂವಿನಹಡಗಲಿ ಗವಿಸಿದ್ದೇಶ್ವರ ಮಠದ ಡಾ| ಹಿರಿಯ ಶಾಂತವೀರ ಸ್ವಾಮೀಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದುಂದು ವೆಚ್ಚದ ಆಡಂಬರದ ಮದುವೆಯಿಂದಾಗಿ ಮಧ್ಯಮ ವರ್ಗ ಹಾಗೂ ಬಡವರು ಸಾಲದ ಶೂಲಕ್ಕೆ ಸಿಕ್ಕಿ ನರಳುತ್ತಾರೆ. ಸಾಮೂಹಿಕ ವಿವಾಹದಿಂದ ನೆಮ್ಮದಿಯ ಜೀವನಕ್ಕೆ ನಾಂದಿ ಹಾಡಿದಂತಾಗುತ್ತದೆ. ಅಲ್ಲದೇ ಬರಗಾಲ ಸಂದರ್ಭದಲ್ಲಿ ಸಾಮೂಹಿಕ ವಿವಾಹಗಳಿಂದ ಆರ್ಥಿಕ ಸಂಕಷ್ಟ ತಪ್ಪಿಸಿದಂತಾಗುತ್ತದೆ ಎಂದರು. 

Advertisement

ಸಾನ್ನಿಧ್ಯ ವಹಿಸಿದ್ದ ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ, ದುಂದು ವೆಚ್ಚ ತಗ್ಗಿಸಲು ಸಾಮೂಹಿಕ ವಿವಾಹ ಸಹಕಾರಿಯಾಗಿದೆ. ಬಡತನದಿಂದಾಗಿ ಕುಟುಂಬ ನಿರ್ವಹಣೆಯೇ ದುಸ್ತರವಾಗಿರುವ ಪ್ರಸಂಗಗಳನ್ನು ಹತ್ತಿರದಿಂದ ಕಂಡು ಅಂತವರಿಗೆ ನೆರವಾಗುವ ದೃಷ್ಟಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಬಂದಿದ್ದೇವೆ.

ಸರ್ಕಾರ ಸರಳ ಸಾಮೂಹಿಕ ವಿವಾಹವಾಗುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಬಡವರಿಗೆ ಅನುಕೂಲ ಮಾಡಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಮಠದಲ್ಲಿ 45 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಬಳ್ಳಾರಿ ಕಲ್ಯಾಣ ಸ್ವಾಮೀಜಿ, ಲಿಂಗಾನಾಯಕನಹಳ್ಳಿ ಚನ್ನವೀರ ಶಿವಯೋಗಿ ಸ್ವಾಮೀಜಿ, ಹಿರೇಮಲ್ಲನಕೇರಿ ಚನ್ನಬಸವ ಸ್ವಾಮೀಜಿ, ನಾಗತಿಬಸಾಪುರ ಶಿವಯೋಗಿ ತಾತಾ, ಉತ್ತಂಗಿ ಮಠದ ಮರೀದೇವರಾದ ಶಂಕರಲಿಂಗದೇವರು, ಶಿರಸಂಗಿ ಬಸವ ಮಹಾಂತ ದೇವರು, ಬಾಗಳಿ ಕೊಟ್ರೇಶಪ್ಪ, ನಿಚ್ಚವ್ವನಹಳ್ಳಿ ಭೀಮಪ್ಪ, ನೀಲಗುಂದ ಟಿ.ಮನೋಜ್‌, ವಕೀಲ ತೆಲಿಗಿ ಕರಿಬಸಪ್ಪ, ಹರಾಳ್‌ ಅಶೋಕ್‌, ತಿರುಪತಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next