ಗ್ರೂಪ್ ಹೆಸರು: ಯೋಗಾ ಗ್ರೂಪ್
ಗ್ರೂಪ್ ಅಡ್ಮಿನ್: ಪ್ರೇಮಾ, ಜಯಶ್ರೀ, ಶಹಿಸ್ಥಾ, ರೂಪಾ, ವಿನುತಾ…
ಮನೇಲಿ ಒಬ್ಬರೆ ಯೋಗ ಮಾಡಲು ಯಾಕೋ ಬೇಸರ ಎಂದು ನಾವು ಐವರು ಗೆಳತಿಯರು ಸೇರಿ ಯೋಗಾ ಮಾಡಲು ನಿರ್ಧರಿಸಿದೆವು. ಇದಕ್ಕಂತಲೇ ಒಂದು ವಾಟ್ಸಾಪ್ ಗ್ರೂಪ್ ರಚಿಸಿಕೊಂಡೆವು. ಯೋಗ ಇಂದು ಇದೆಯೋ ಇಲ್ಲವೋ, ಯೋಗಕ್ಕೆ ಸಂಬಂಧಪಟ್ಟ ವಿಚಾರಗಳು, ಡಯೆಟ್ ಬಗ್ಗೆ ಅದರಲ್ಲಿ ಚರ್ಚೆಗಳಾಗುತ್ತಿದ್ದವು.
ನಾನು ನನ್ನ ಅನುಕೂಲಕ್ಕೋಸ್ಕರ “ಸೆಲ್ಫ್’ ಎಂಬ ಫೋಲ್ಡರ್ ಕ್ರಿಯೇಟ್ ಮಾಡಿದ್ದೆ. ಮನೆಯ ಕೆಲಸಗಳು, ಮಗಳ ಶಾಲೆಯ ಪ್ರಾಜೆಕ್ಟ್ ಡೆಡ್‌ಲೈನ್, ಸೆಮಿನಾರ್ ಹಾಗೂ ನಮ್ಮನೆ ದಿನಸಿ ಸಾಮಾನಿನ ಲಿಸ್ಟ್ ಕೂಡ ಅದರಲ್ಲಿ ಇರುತ್ತಿತ್ತು. ಒಮ್ಮೆ ನಾನು ಲಿಸ್ಟ್ ಮಾಡುವಾಗ ಚಿಕ್‌ಪೀಸ್ (ಕಾಬೂಲ್ ಕಡಲೆ) ಬರೆಯಲು ಹೋಗಿ ಚಿಕನ್ ಪೀಸ್ ಅಂತ ಬರೆದೆ. ದುರಾದೃಷ್ಟಕ್ಕೆ ಅದನ್ನು ನಾನು ಸೆಲ್ಫ್ ಫೋಲ್ಡರ್‌ಗೆ ಕಳುಹಿಸುವ ಬದಲು, ಯೋಗಾ ಗ್ರೂಪ್‌ಗೆ ಕಳುಹಿಸಿದ್ದೆ. ಅಲ್ಲೇ ಎಡವಟ್ಟಾಗಿದ್ದು!
ಪಕ್ಕಾ ಸಸ್ಯಾಹಾರಿಯಾದ ನನಗೆ ಮರುದಿನ ಯೋಗ ಗ್ರೂಪ್‌ನಲ್ಲಿ ಎಲ್ಲರೂ ಚಿಕನ್ ಪೀಸ್ ಅಂತೆಳಿ ಕಾಲು ಎಳೆದಿದ್ದೇ ಎಳೆದಿದ್ದು… ಆಗಲೇ ನನಗೆ ಗೊತ್ತಾಗಿದ್ದು, ನಾನು ಮಾಡಿದ್ದ ಸ್ಪೆಲ್ಲಿಂಗ್ ಮಿಸ್ಟೇಕ್‌ನಿಂದ ಹೀಗೆಲ್ಲ ಆಗಿದೆ ಅಂತ. ಈಗಲೂ ಕೆಲವೊಮ್ಮೆ, “ಚಿಕನ್ ಪೀಸ್ ತಂದ್ರಾ?’ ಅಂತಲೇ ಕೇಳ್ತಾರೆ.
ಪ್ರೇಮಾ ಲಿಂಗದಕೋಣ