Advertisement

ಮರಳುಗಾರಿಕೆಗೆ ನಲುಗಿದ ಉಳಿಯ ಕುದ್ರು: ಕಡಿಮೆಯಾಗಿದೆ ಕುದ್ರುವಿನ ಅರ್ಧಕ್ಕರ್ಧ ಗಾತ್ರ

12:42 AM Jun 25, 2024 | Team Udayavani |

ಮಂಗಳೂರು: ಪಾವೂರು ಮತ್ತು ಅಡ್ಯಾರ್‌ ಮಧ್ಯೆ ನೇತ್ರಾವತಿ ನದಿಯ ಮಧ್ಯದ ಪಾವೂರು ಉಳಿಯ ಕುದ್ರು ಅಕ್ರಮ ಮರಳುಗಾರಿಕೆಯಿಂದ ನಲುಗಿವೆ. ದ್ವೀಪದ ಭೂಭಾಗವನ್ನೇ ಬಗೆದು ಮರಳುಗಾರಿಕೆ ನಡೆಯುತ್ತಿ ದ್ದರೂ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

ಸ್ಥಳೀಯರ ಮನವಿ ಮೇರೆಗೆ ಕೆಥೋಲಿಕ್‌ ಸಭಾ ಮಂಗಳೂರು ಪ್ರದೇಶ್‌ ಮತ್ತು ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದವರು ಸೋಮವಾರ ಕುದ್ರುವಿಗೆ ಭೇಟಿ ನೀಡಿ, ಮರಳುಗಾರಿಕೆ ನಡೆಸಲಾದ ಸ್ಥಳವನ್ನು ಪರಿಶೀಲಿಸಿದರು. ಇಲ್ಲಿ ಮರಳುಗಾರಿಕೆ ತಡೆಯಲು ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳ ಬೇಕು. ಇಲ್ಲವಾದಲ್ಲಿ ಕಾನೂನು ಸಮರ ಅನಿವಾರ್ಯ ಎಂದು ಎಚ್ಚರಿಸಿದರು.

ಅರ್ಧಕ್ಕರ್ಧ ದ್ವೀಪವೇ ಇಲ್ಲ!
ಸುಮಾರು 80 ಎಕ್ರೆ ವಿಸ್ತೀರ್ಣ ಹಾಗೂ 2 ಕಿ.ಮೀ.ನಷ್ಟು ಉದ್ದಕ್ಕಿದ್ದ ದ್ವೀಪ ಹಲವು ವರ್ಷಗಳ ಮರಳು ಗಾರಿಕೆಯಿಂದ ಈಗ 40 ಎಕ್ರೆಗೆ ಇಳಿದಿದ್ದು, ಉದ್ದವೂ ಒಂದು ಕಿ.ಮೀ. ಕಡಿಮೆಯಾಗಿದೆ. ದೊಡ್ಡ ನೆರೆ ಬಂದರೆ ಸಂಪೂರ್ಣ ದ್ವೀಪವೇ ಕೊಚ್ಚಿ ಹೋಗಬಹುದು.

ಎ.ಬಿ. ಇಬ್ರಾಹಿಂ ಅವರು ಜಿಲ್ಲಾಧಿಕಾರಿಯಾಗಿದ್ದಾಗ ದ್ವೀಪದ ಸುತ್ತಲಿನ 1 ಕಿ.ಮೀ. ವ್ಯಾಪ್ತಿ ಯಲ್ಲಿ ಮರಳುಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿ, ಮರಳು ದಕ್ಕೆ ಗಳನ್ನು ನಾಶಪಡಿಸಿದ್ದರು. ಪ್ರಸ್ತುತ ಆ ಆದೇಶಕ್ಕೆ ಯಾವುದೇ ಬೆಲೆಇಲ್ಲ ಎನ್ನುತ್ತಾರೆ “ಉದಯವಾಣಿ’ ಜತೆ ಮಾತನಾಡಿದ ಸ್ಥಳೀಯರಾದ ಬೆನೆಟ್‌.

ಹೋರಾಡುವ ಶಕ್ತಿ ಇಲ್ಲ
ಮರಳುಗಾರಿಕೆ ವಿರುದ್ಧ ಹಲವು ಬಾರಿ ಹೋರಾಟ ನಡೆಸಿದ್ದೇವೆ. ಮರಳು ತೆಗೆಯುವವರನ್ನು ಓಡಿಸಿದ್ದೇವೆ. ಆದರೆ ಅವರ ತಾಕತ್ತಿನ ಎದುರು ನಮ್ಮ ಶಕ್ತಿ ಕುಂದಿದೆ. ನಮಗೆ ಶಾಶ್ವತ ಪರಿಹಾರ ಬೇಕು. ಭಯ ರಹಿತ ಜೀವನಕ್ಕೆ ಸಹಾಯ ಮಾಡಿ ಎಂದು ಗಿಲ್ಬರ್ಟ್‌ ಡಿ’ಸೋಜಾ ಮನವಿ ಮಾಡಿದರು.

Advertisement

ಕುದ್ರು ಇನ್ಫೆಂಟ್ ಜೀಸಸ್‌ ಚರ್ಚ್‌ ನ ಧರ್ಮಗುರು ಫಾ| ಮನೋಹರ್‌ ಡಿ’ಸೋಜಾ, ಕೆಥೋಲಿಕ್‌ ಸಭಾ ಕಾರ್ಯದರ್ಶಿ ಆಲ್ವಿನ್‌ ಮೊಂತೇರೊ, ಮಾಜಿ ಅಧ್ಯಕ್ಷ ಸ್ಟಾನಿ ಲೋಬೊ, ಪ್ರಮುಖರಾದ ಮುನೀರ್‌ ಕಾಟಿಪಳ್ಳ, ಮಂಜುಳಾ ನಾಯಕ್‌, ಕೆ. ಯಾದವ ಶೆಟ್ಟಿ, ಬಿ. ಶೇಖರ್‌, ಸುನಿಲ್‌ ಕುಮಾರ್‌ ಬಜಾಲ್‌ ಮತ್ತಿತರರಿದ್ದರು.

ದ್ವೀಪದ ಕುರಿತು
ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಪಾವೂರು ಉಳಿಯ ಕುದ್ರು ನೇತ್ರಾವತಿ ನದಿ ಮಧ್ಯದಲ್ಲಿದೆ. ತುಂಬೆ ಹಾಗೂ ಹರೇಕಳ ಅಣೆಕಟ್ಟಿನ ನಡುವಿನ ಪ್ರದೇಶವೂ ಸಹ. ಹಲವು ವರ್ಷಗಳ ಹಿಂದೆ 50ಕ್ಕೂ ಅಧಿಕ ಕುಟುಂಬಗಳಿದ್ದವು. ಪ್ರಸ್ತುತ 35ಕ್ಕೆ ಇಳಿದಿದ್ದು, ಸುಮಾರು 130 ಮಂದಿ ಇಲ್ಲಿ ವಾಸವಾಗಿದ್ದಾರೆ. ಈ ಪೈಕಿ ಶೇ.99ರಷ್ಟು ಕ್ರಿಶ್ಚಿಯನ್ನರು. ಕೃಷಿ ಹಾಗೂ ಹೊರಗೆ ಉದ್ಯೋಗ ಮಾಡಿಕೊಂಡು ಜೀವಿಸುತ್ತಿದ್ದಾರೆ. ಇವರಿಗೆ ಹೊರ ಪ್ರದೇಶದ ಸಂಪರ್ಕಕ್ಕೆ ದೋಣಿಯೇ ಆಧಾರ. ಹರೇಕಳ ಅಣೆಕಟ್ಟು ನಿರ್ಮಾಣದಿಂದಾಗಿ ಬೇಸಗೆಯಲ್ಲೂ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿರುತ್ತದೆ. ಕುದ್ರು ಮತ್ತು ಅಡ್ಯಾರ್‌ ನಡುವೆ ಸೇತುವೆ ಆಗಬೇಕು ಎಂಬ ಬೇಡಿಕೆ ಈಡೇರಿಲ್ಲ. ಬೇಸಗೆಯಲ್ಲಿ ಕುದ್ರು ನಿವಾಸಿಗಳೇ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಿದರು. ಕೆಲ ವರ್ಷಗಳ ಹಿಂದೆ ಮರಳು ದಂಧೆಕೋರರು ಈ ಸೇತುವೆಗೂ ಹಾನಿ ಮಾಡಿದರು ಎನ್ನುತ್ತಾರೆ ಸ್ಥಳೀಯರು.

ಮರಳುಗಾರಿಕೆ ಮೂಲಕ ದ್ವೀಪದ ಜನರನ್ನು ಓಡಿಸುವ ಸಂಚು ನಡೆಯುತ್ತಿದೆ. ಇದರಲ್ಲಿ ಎಲ್ಲ ಇಲಾಖೆಗಳೂ ಕೈ ಜೋಡಿಸಿರುವೆ. ಜನರ ಕಣ್ಣೀರಿನ ಶಾಪ ಖಂಡಿತ ವಾಗಿ ದಂಧೆಕೋರರಿಗೆ ತಟ್ಟಲಿದೆ.
– ರಾಯ್‌ ಕ್ಯಾಸ್ಟಲಿನೋ,
ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಪಿಆರ್‌ಒ

ಸ್ಥಳೀಯರ ಮನವಿ ಮೇರೆಗೆ ಜನರ ಸಮಸ್ಯೆಯನ್ನು ಪ್ರತ್ಯಕ್ಷವಾಗಿ ನೋಡಲು ಬಂದಿದ್ದೇವೆ. ಜಿಲ್ಲಾಧಿ ಕಾರಿಗೆ ಕರೆ ಮಾಡಿ ಸ್ಥಳೀಯರ ಕಷ್ಟವನ್ನು ಸ್ಥಳದಿಂದಲೇ ವಿವರಿಸಿ ದ್ದೇವೆ. ಶಾಶ್ವತ ಪರಿಹಾರ ಸಿಗುವವ ರೆಗೆ ಹೋರಾಟ ನಿಲ್ಲಿಸುವುದಿಲ್ಲ.
ಆಲ್ವಿನ್‌ ಡಿ’ಸೋಜಾ,
ಅಧ್ಯಕ್ಷರು, ಕೆಥೋಲಿಕ್‌ ಸಭಾ

Advertisement

Udayavani is now on Telegram. Click here to join our channel and stay updated with the latest news.

Next