ನವದೆಹಲಿ:ಭಾರತದಲ್ಲಿ ಕೋವಿಡ್ ಎರಡನೇ ಅಲೆ ತಾಂಡವವಾಡುತ್ತಿದ್ದು, ಕಳೆದ 24ಗಂಟೆಗಳ ಅವಧಿಯಲ್ಲಿ ದಾಖಲೆಯ 3.46 ಲಕ್ಷ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 1.66 ಕೋಟಿಗೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ(ಏಪ್ರಿಲ್ 24) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ರಾಜ್ಯಾದ್ಯಂತ ಮಾರುಕಟ್ಟೆಗಳು ಬಂದ್, ಇನ್ನು ಕಠಿಣ ನಿಯಮ ಜಾರಿ
ಜಗತ್ತಿನಲ್ಲಿಯೇ ಅತೀ ಹೆಚ್ಚು ಕೋವಿಡ್ ಪ್ರಕರಣ ಪತ್ತೆಯಾಗಿರುವ ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು, ಅಮೆರಿಕ ಮೊದಲ ಸ್ಥಾನದಲ್ಲಿದೆ. ಕಳೆದ 24ಗಂಟೆಯಲ್ಲಿ 3,46,786 ಕೋವಿಡ್ ಪ್ರಕರಣಗಳು ವರದಿಯಾಗಿದೆ.
ಭಾರತದಲ್ಲಿ ಏಪ್ರಿಲ್ 24ರ ಕೋವಿಡ್ 19 ಸೋಂಕು ಪ್ರಕರಣದ ಅಂಕಿಅಂಶ ವಿಶ್ವದ ಕಳೆದ ವರ್ಷದ ಏಕದಿನ ಗರಿಷ್ಠ ಏರಿಕೆಯನ್ನು ಮೀರಿಸಿದೆ. ಶುಕ್ರವಾರ 3,32,730 ಕೋವಿಡ್ ಪ್ರಕರಣ ಪತ್ತೆಯಾಗಿತ್ತು. ಕಳೆದ 24ಗಂಟೆಯಲ್ಲಿ 2,624 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದು, 2,19, 838 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ.
ದೇಶದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 1,66,10,481ಕ್ಕೆ ಏರಿಕೆಯಾಗಿದೆ, ಈವರೆಗೆ ಒಟ್ಟು 1,38,67,997 ಮಂದಿ ಚೇತರಿಸಿಕೊಂಡಿದ್ದಾರೆ. ಅಲ್ಲದೇ ಕೋವಿಡ್ ಸೋಂಕಿನಿಂದ 1,89,544 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಕ್ಷಿಪ್ರವಾಗಿ ಹರಡುತ್ತಿರುವ ಕೋವಿಡ್ ಎರಡನೇ ಅಲೆಯಲ್ಲಿ ಇದೀಗ 25,52,940 ಸಕ್ರಿಯ ಕೋವಿಡ್ ಪ್ರಕರಣಗಳಿವೆ ಎಂದು ವರದಿ ತಿಳಿಸಿದೆ.