ಮೈಸೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ ರಾಜ್ಯದ 10 ಸಾವಿರ ಸ್ಥಳಗಳಲ್ಲಿ ಎಲ್‌ಇಡಿ ಪರದೆ ಮೂಲಕ ನೇರ ಪ್ರಸಾರವಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಜಿಪಂ ಸಭಾಂಗಣದಲ್ಲಿ ಗುರುವಾರ ಮೈಸೂರು, ಮಂಡ್ಯ, ಚಾಮರಾನಗರ, ಹಾಸನ, ಕೊಡಗು ಜಿಲ್ಲೆಗಳ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಹಾರಾಜ ಕಾಲೇಜು ಮೈದಾನದಲ್ಲಿ ವೇದಿಕೆ ಸಿದ್ಧತೆಯನ್ನು ಪರಿಶೀಲಿಸಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಆ.30ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುವುದು. ಅದೇ ದಿನ ಪಂಚಾಯತ್, ಪುರಸಭೆ, ಪಾಲಿಕೆ ವಾರ್ಡ್‌ಗಳು ಸಹಿತ 10 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಗೃಹಲಕ್ಷ್ಮಿ ಯೋಜನೆ ಉದ್ಘಾಟನೆಯನ್ನು ಎಲ್‌ಇಡಿ ಪರದೆಯಲ್ಲಿ ಪ್ರದರ್ಶಿಸಲಾಗುವುದು ಎಂದರು.
ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮ ಸ್ಥಳಾಂತರ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ. ಬೆಳಗಾವಿಯಲ್ಲಿ ಮತ್ತೂಂದು ಕಾರ್ಯಕ್ರಮ ಆಯೋಜಿಸಲಾಗುವುದು. ಬೆಂಗಳೂರಿನಲ್ಲೂ ಕಾರ್ಯಕ್ರಮ ಮಾಡುವ ಯೋಚನೆ ಮಾಡಿದ್ದೆವು. ಆದರೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ ಎಂದು ಮೈಸೂರಿಗೆ ಸ್ಥಳಾಂತರಿಸಿದ್ದೇವೆ.
-ಡಿ.ಕೆ.ಶಿವಕುಮಾರ್,ಉಪಮುಖ್ಯಮಂತ್ರಿ