Advertisement

“ಗೃಹಜ್ಯೋತಿ”ಗೂ ವಿದ್ಯುತ್‌ ದರ ಏರಿಕೆಗೂ ಸಂಬಂಧವಿಲ್ಲ: CM ಸ್ಪಷ್ಟನೆ

09:03 PM Jun 23, 2023 | Team Udayavani |

ಬೆಂಗಳೂರು: ಗೃಹಜ್ಯೋತಿ ಯೋಜನೆಯ ಹೊರೆಯನ್ನು ಯಾರ ಮೇಲೂ ಹಾಕುತ್ತಿಲ್ಲ. ಗೃಹಜ್ಯೋತಿ ಯೋಜನೆಗೂ ವಿದ್ಯುತ್‌ ದರ ಹೆಚ್ಚಳಕ್ಕೂ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗಾರಿಕೋದ್ಯಮಿಗಳಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಬಿ.ವಿ.ಗೋಪಾಲ ರೆಡ್ಡಿ ಅವರ ನೇತೃತ್ವದ ನಿಯೋಗವು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ವಿದ್ಯುತ್‌ ದರ ಏರಿಕೆಯಿಂದಾಗಿರುವ ಸಂಕಷ್ಟದ ಬಗ್ಗೆ ವಿವರಿಸಿದಾಗ ಮುಖ್ಯಮಂತ್ರಿಗಳು ಈ ಸ್ಪಷ್ಟನೆ ನೀಡಿದ್ದಾರೆ.

Advertisement

ನಮ್ಮ ಸರ್ಕಾರ ವಿದ್ಯುತ್‌ ಶುಲ್ಕವನ್ನು ಏರಿಸುವ ನಿರ್ಧಾರ ಮಾಡಿಲ್ಲ. ಕೆಇಆರ್‌ಸಿಯು ಬೆಲೆ ಹೆಚ್ಚಳದ ನಿರ್ಧಾರವನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ಕೈಗೊಂಡಿತ್ತು ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

ನಿಯೋಗವು ಮಾಡಿರುವ ಮನವಿಯ ಕುರಿತು ಆರ್ಥಿಕ, ಇಂಧನ ಇಲಾಖೆ, ಕಾಸಿಯಾ, ಎಫ್ಕೆಸಿಸಿಐ ಅವರೊಂದಿಗೆ ಪ್ರತ್ಯೇಕ ಸಭೆ ಕರೆದು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ನಿಯೋಗವು ಕೆಇಆರ್‌ಸಿ ಉದ್ಯಮ ವಲಯದ ವಿದ್ಯುತ್‌ ದರವನ್ನು ಹೆಚ್ಚಿಸಿದ್ದು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಹೆಚ್‌.ಟಿ. ಕೈಗಾರಿಕೆಗಳ ಮೇಲೆ ವಿಧಿಸುವ ಶೇ. 9 ರಷ್ಟು ವಿದ್ಯುತ್‌ ತೆರಿಗೆಯನ್ನು ಶೇ 3 ರಷ್ಟು ಇಳಿಸಬೇಕು. ಇಂಧನ ಶುಲ್ಕದಲ್ಲಿ ರಿಯಾಯಿತಿ ನೀಡಲು ಹಾಗೂ ಇತರೆ ರಾಜ್ಯಗಳಲ್ಲಿ ಎಂ.ಎಸ್‌.ಎಂ.ಇ ನೀತಿ ಹಾಗೂ ಕಾಯ್ದೆ ಇರುವಂತೆ ರಾಜ್ಯದಲ್ಲಿಯೂ ಕಾಯ್ದೆ ರಚನೆ ಮಾಡುವಂತೆ ನಿಯೋಗವು ಮನವಿ ಮಾಡಿತು.

ಇಂಧನ ಸಚಿವ ಕೆ.ಜೆ.ಜಾರ್ಜ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್‌ ಅಹ್ಮದ್‌, ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಎಫ್.ಕೆ.ಸಿ.ಸಿ.ಐ ಪದಾಧಿಕಾರಿಗಳಾದ ರಮೇಶ್‌ ಚಂದ್ರ ಲಾಹೋಟಿ, ಎಂ.ಜಿ. ಬಾಲಕೃಷ್ಣ , ಡಾ. ಪ್ರಸಾದ್‌, ಬಿ.ಟಿ. ಮನೋಹರ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next