ನವದೆಹಲಿ: ರೈತರ ಪ್ರತಿಭಟನೆ ಪರ ಧ್ವನಿಯೆತ್ತಿ ಸ್ವೀಡನ್‌ನ ಹೋರಾಟಗಾರ್ತಿ ಗ್ರೆಟಾ ಥನ್ ಬರ್ಗ್ ಮಾಡಿದ ಟ್ವೀಟ್ ಈಗ ಇಡೀ ಹೋರಾಟವನ್ನೇ ಪೇಚಿಗೆ ಸಿಲುಕಿಸಿದೆ! ಬುಧವಾರ ರೈತರನ್ನು ಬೆಂಬಲಿಸಿ ಗ್ರೆಟಾ ಮಾಡಿದ 2ನೇ ಟ್ವೀಟ್ ನಿಂದಾಗಿ “ರೈತ ಹೋರಾಟ ಒಂದು ವ್ಯವಸ್ಥಿತ ಸಂಚು’ ಎಂಬ ಶಂಕೆಗೆ ಬಲವಾದ ಪುಷ್ಟಿ ಸಿಕ್ಕಿದೆ.
ಇದನ್ನೂ ಓದಿ:ಖಾಸಗಿ ದೇವಸ್ಥಾನ ವಶಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ: ಸಚಿವ ಕೋಟ ಸ್ಪಷ್ಟನೆ
ಟ್ವೀಟ್ ನಲ್ಲೇನಿದೆ?: ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದ ಕಂಪ್ಲೀಟ್ ನೀಲನಕ್ಷೆಯ ಟೂಲ್ ಕಿಟ್ ಅನ್ನು ಗ್ರೆಟಾ ಟ್ವೀಟ್ ಮಾಡಿದ್ದರು. ರೈತರು ಯಾವ ದಿನ, ಯಾವ ಹೆಜ್ಜೆ ಇಡಬೇಕು? ಹೇಗೆ ಹೋರಾಟ ಮಾಡಬೇಕು? ಎಂಬುದರ ಕುರಿತ ವಿವರಣೆ ಪಿಡಿಎಫ್ ಮಾದರಿಯ ಟೂಲ್ ಕಿಟ್ ನಲ್ಲಿದೆ. ಈ ಕಡತದ ಆರಂಭದಲ್ಲಿ “ಆಸ್ಕ್ಇಂಡಿಯಾವೈ’ ಹ್ಯಾಶ್ ಟ್ಯಾಗ್ ಇದ್ದು, “ನೀವು ಮಾನವ ಇತಿಹಾಸದ ಅತಿದೊಡ್ಡ ಪ್ರತಿಭಟನೆಗೆ ಭಾಗಿಯಾಗುತ್ತೀರಾ?’ ಎಂದು ಪ್ರಚೋ ದನಾತ್ಮಕ ಶೀರ್ಷಿಕೆಯನ್ನೂ ನೀಡಲಾಗಿದೆ.
ಜ.26ರ ಸ್ಕೆಚ್ ಬಯಲು: ಜನವರಿ 26ರ ಗಣರಾಜ್ಯೋತ್ಸವದಂದು ರೈತ ಹೋರಾಟ ಯಾವ ಹೆಜ್ಜೆ ಇಡಬೇಕು ಎಂಬುದೂ ಟೂಲ್‌ಕಿಟ್‌ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಫೆ.13-14ರಂದು ದೆಹಲಿಯಲ್ಲಿನ ಎಲ್ಲ ರಾಯಭಾರ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿ, ಭಾರತದ ಮರ್ಯಾದೆಯನ್ನು ಜಾಗತಿಕವಾಗಿ ಕಳೆಯುವ ಸಂಚೂ ಇತ್ತು. ಹೋರಾಟದ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೇಗೆಲ್ಲ ಪ್ರಚೋದನೆ ನೀಡಬೇಕು, ಪ್ರಚೋದನಾತ್ಮಕ ವಿಡಿ ಯೊ- ಫೋಟೋಗಳನ್ನು ಯಾರಿಗೆಲ್ಲ ಟ್ಯಾಗ್ ಮಾಡಬೇಕು ಎಂದು ವಿವರಿಸಲಾಗಿದೆ.
ಮೋದಿ ವಿರುದ್ಧ ಪ್ರಚೋದನೆ: ಟೂಲ್ ಕಿಟ್‌ನ ಹೋರಾಟದ ರೂಪುರೇಷೆಗಳ ನಡುವೆ ಪ್ರಧಾನಿ ವಿರುದ್ಧ ರೈತರನ್ನು ಪ್ರಚೋದಿಸುವಂಥ ಸಾಲುಗಳೂ ಇವೆ. “ಮೋದಿ ಮತ್ತು ಅವರ ಪಕ್ಷದ ಸದಸ್ಯರು ಆರೆಸ್ಸೆಸ್‌ನ ದೀರ್ಘಕಾಲದ ಸದಸ್ಯರು. ಫ್ಯಾಸಿಸ್ಟ್ ಸಿದ್ಧಾಂತದ ಬೇರಿನೊಂದಿಗೆ ಶಕ್ತಿಶಾಲಿಯಾಗಿ ಬೆಳೆದ ಸಮೂಹ ಇದು. ಮುಸ್ಲಿಂವಿರೋಧಿ, ಕ್ರಿಶ್ಚಿ ಯನ್ ವಿರೋಧಿಯಾದ ಈ ಗುಂಪು ಹಿಂದೂ ರಾಷ್ಟ್ರೀಯತೆಯನ್ನೂ ಭಾರತದಲ್ಲಿ ಬೆಳೆಸಲಿದೆ’ ಎಂಬ ಸಾಲು ಗಳೂ ಇವೆ.
ಟ್ವೀಟ್ ಡಿಲೀಟ್!
ವ್ಯವಸ್ಥಿತ ಹೋರಾಟ ಎನ್ನುವುದಕ್ಕೆ ಬಲವಾದ ಅಂಶಗಳನ್ನು ಹೊಂದಿದ್ದ ಈ ಟೂಲ್ ಕಿಟ್ ಟ್ವೀಟ್ ಸಾಕಷ್ಟು ವೈರಲ್ ಆಗುತ್ತಿದ್ದಂತೆಯೇ ಗ್ರೆಟಾ ಇದನ್ನು ಡಿಲೀಟ್ ಮಾಡಿದ್ದಾರೆ. ಅಷ್ಟರಲ್ಲಾಗಲೆ, ಬಿಜೆಪಿಯ ಹಲವು ಪ್ರಮುಖರು ಈ ಟೂಲ್ ಕಿಟ್ ಅನ್ನು ಟ್ವೀಟಿಸಿ, ನಕಲಿ ಪ್ರತಿಭಟನಾಕಾರರ ಮುಖವಾಡ ಕಳಚಿದ್ದಾರೆ. ನೇರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ.