ಹುಬ್ಬಳ್ಳಿ: ಮಹಾನಗರ ಸೌಂದರ್ಯಿಕರಣ ಹಾಗೂ ಹಸಿರು ಪರಿಸರ ನಿರ್ಮಾಣ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ರಸ್ತೆ ವಿಭಜಕ (ಡಿವೈಡರ್)ಗಳಲ್ಲಿ ಗಿಡ ನೆಡುವ ಕಾರ್ಯಕ್ಕೆ ಮುಂದಾಗಿದ್ದು, ಮಹಾನಗರ ಪ್ರವೇಶಿಸುವ ಪ್ರಮುಖ ರಸ್ತೆಗಳು ಹಸಿರಿನಿಂದ ಕಂಗೊಳಿಸಲಿವೆ.
ಮಹಾನಗರ ಪ್ರವೇಶಿಸುವ ಪ್ರಮುಖ ರಸ್ತೆಗಳು ಸುಧಾರಣೆ ಕಾಣುತ್ತಿವೆ. ಇದಕ್ಕೆ ಪೂರಕವಾಗಿ ಒಂದಿಷ್ಟು ಹಸಿರು ಸ್ಪರ್ಶ ನೀಡಿದರೆ ರಸ್ತೆಗಳ ಅಂದ ಹೆಚ್ಚಾಗಿ ನಗರದ ಸೌಂದರ್ಯ ಮತ್ತಷ್ಟು ಹೆಚ್ಚಲಿದೆ ಎನ್ನುವ ಕಾರಣಕ್ಕೆ ರಸ್ತೆ ವಿಭಜಕಗಳಲ್ಲಿ ವಿವಿಧ ಜಾತಿಯ ಗಿಡ ನೆಡುವುದರ ಜೊತೆಗೆ ಲಾನ್ ಬೆಳೆಸಲು ಪಾಲಿಕೆ ಮುಂದಾಗಿದೆ. ಮೊದಲ ಹಂತದಲ್ಲಿ ಮಹಾನಗರದ ಎರಡು ರಸ್ತೆಗಳನ್ನು ಆಯ್ಕೆ ಮಾಡಿಕೊಂಡು ಬೆಂಗಳೂರು ಮೂಲದ ನರ್ಸರಿಮೆನ್ ಕೋ-ಆಪರೇಟಿವ್ ಸೊಸೈಟಿ ಸಂಸ್ಥೆಗೆ ಗುತ್ತಿಗೆ ನೀಡಿದೆ. ಈಗಾಗಲೇ ಲ್ಯಾಮಿಂಗ್ಟನ್ ರಸ್ತೆ ವಿಭಜಕದಲ್ಲಿ ಗಿಡ ನೆಡಲಾಗಿದೆ.
ಮಹಾನಗರ ಪಾಲಿಕೆಯ “ಹಸಿರು ಉಸಿರು’ ಯೋಜನೆಯಲ್ಲಿ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಮಹಾನಗರ ಪ್ರಮುಖ ರಸ್ತೆಯಾದ ಲ್ಯಾಮಿಂಗ್ಟನ್ ಹಾಗೂ ವಿಮಾನ ನಿಲ್ದಾಣ ರಸ್ತೆ ಆಯ್ಕೆ ಮಾಡಿಕೊಳ್ಳಲಾಗಿದ್ದು, ಗಿಡ ನೆಡುವ ಕಾರ್ಯ ಆರಂಭವಾಗಿದೆ. ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತ, ವಿಮಾನ ನಿಲ್ದಾಣದಿಂದ ಹೊಸೂರು ವೃತ್ತದವರೆಗೆ ಗಿಡ ನೆಡಲು ನಿರ್ಧರಿಸಲಾಗಿದ್ದಾದರೂ ಲೋಕೋಪಯೋಗಿ ಇಲಾಖೆಯಿಂದ ವಿಮಾನ ನಿಲ್ದಾಣ ರಸ್ತೆಯಲ್ಲಿ ರಸ್ತೆ ವಿಭಜಕ ನಿರ್ಮಾಣ ಹಾಗೂ ದುರಸ್ತಿ ಕಾರ್ಯ ಕೈಗೊಂಡಿರುವ ಕಾರಣ ಅಕ್ಷಯ ಪಾರ್ಕ್‌ವರೆಗೆ ನೆಟ್ಟು ನಂತರ ಅದನ್ನು ಮುಂದುವರಿಸುವ ಯೋಜನೆ ಇದೆ.
ಪ್ರಮುಖ ರಸ್ತೆಗಳ ಗುರಿ: ನಗರದ ಎಲ್ಲಾ ಪ್ರಮುಖ ರಸ್ತೆಗಳ ವಿಭಜಕಗಳಲ್ಲಿ ಗಿಡ ನೆಡಲು ಪಾಲಿಕೆ ಯೋಜನೆ ರೂಪಿಸಿದೆ. ಶೀಘ್ರದಲ್ಲಿ ಕುಸಗಲ್ಲ ರಸ್ತೆಯಲ್ಲಿ ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ ಯೋಜನೆ ಕಾರ್ಯಗತಗೊಳ್ಳಲಿದೆ. ನಂತರದಲ್ಲಿ ಧಾರವಾಡದ ಕೆಸಿಡಿ ಕಾಲೇಜು ರಸ್ತೆ ಹಸಿರೀಕರಣಗೊಳ್ಳಲಿವೆ. ಇದೀಗ ಗಿಡ ನೆಡುತ್ತಿರುವ ರಸ್ತೆ ವಿಭಜಕಗಳಲ್ಲಿ ಹಿಂದೆ ಇದೇ ಯೋಜನೆಯಲ್ಲಿ ನೆಡಲಾಗಿತ್ತಾದರೂ ನಿರ್ವಹಣೆ ಕೊರತೆ, ರಸ್ತೆ ದುರಸ್ತಿ ಕಾರ್ಯಗಳಿಂದ ರಸ್ತೆ ವಿಭಜಕ ಸೇರಿದಂತೆ ಗಿಡಗಳು ಇಲ್ಲದಂತಾಗಿದ್ದವು. ಇದೀಗ ಗುತ್ತಿಗೆ ಪಡೆದಿರುವ ಸಂಸ್ಥೆ ಒಂದು ವರ್ಷ ಕಾಲ ನಿರ್ವಹಣೆ ಕಾರ್ಯ ಮಾಡಲಿದೆ. ಮುಂದೆ ನಿರ್ವಹಣೆ ಭಾರ ಯಾರದ್ದು ಎಂಬ ಪ್ರಶ್ನೆ ಮೂಡಿದೆ. ಪಾಲಿಕೆ ಈ ನಿಟ್ಟಿನಲ್ಲಿ ಮುಂದೆಯೂ ಜವಾಬ್ದಾರಿ ಹೊರಬೇಕಿದೆ.
ಗಿಡಗಳಿಗೆ ಕಳ್ಳರ ಕಾಟ : ಇತ್ತೀಚೆಗೆ ಉದ್ಘಾಟನೆಗೊಂಡಿರುವ ಟೆಂಡರ್ ಶ್ಯೂರ್ ರಸ್ತೆಯ ವಿಭಜಕದಲ್ಲಿ ನೆಟ್ಟಿದ್ದ ಗಿಡಗಳಿಗೆ ಕಳ್ಳರ ಕಾಟ ಹೆಚ್ಚಾಗಿತ್ತು. ಆರಂಭದಲ್ಲಿ ಗಿಡಗಳನ್ನು ಕಾಯಲು ಭದ್ರತಾ ಸಿಬ್ಬಂದಿ ನೇಮಿಸುವ ಪರಿಸ್ಥಿತಿ ಒದಗಿಬಂದಿತ್ತು. ರಾತ್ರಿ ವೇಳೆ ಸುತ್ತಮುತ್ತಲಿನ ಜನರು ಗಿಡಗಳನ್ನು ಕಿತ್ತುಕೊಂಡು ಹೋಗುತ್ತಿರುವುದು ಪಾಲಿಕೆ ಅಧಿಕಾರಿಗಳಿಗೆ ತಲೆನೋವಾಗಿತ್ತು. ಇದೀಗ ಇಲ್ಲಿನ ಗಿಡಗಳ ಪರಿಸ್ಥಿತಿ ಹೇಗೆ ಎಂಬುವುದು ಪಾಲಿಕೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಚಿಂತೆಯಾಗಿ ಪರಿಣಮಿಸಿದ್ದು, ಈ ಗಿಡ ಹಾಗೂ ಸಸಿಗಳು ಕಡಿಮೆ ದರದಲ್ಲಿ ಎಲ್ಲಾ ನರ್ಸರಿಗಳಲ್ಲಿ ದೊರೆಯುತ್ತಿದ್ದು, ಪಾಲಿಕೆಯ ಈ ಕಾರ್ಯಕ್ಕೆ ಜನರು ಸಹಕಾರ ನೀಡಬೇಕು ಎಂಬುವುದು ಪಾಲಿಕೆ ಅಧಿಕಾರಿಗಳ ಮನವಿಯಾಗಿದೆ.
38.8 ಲಕ್ಷ ರೂ. ವೆಚ್ಚ : ಲ್ಯಾಮಿಂಗ್ಟನ್ ಹಾಗೂ ವಿಮಾನ ನಿಲ್ದಾಣ ರಸ್ತೆಗಳಲ್ಲಿ ರಾಯಲ್ ಫಾಮ್, ಫಾಗಸೇrಲ್ ತಳಿಯ ಗಿಡಗಳನ್ನು ನೆಟ್ಟು ಅವುಗಳ ಮಧ್ಯದಲ್ಲಿ ಪೊದೆ ರೀತಿಯಲ್ಲಿ ಬೆಳೆಯುವ ಸಸಿಗಳನ್ನು ನೆಡಲಾಗುತ್ತಿದೆ. ಈ ಎರಡು ರಸ್ತೆಗಳಲ್ಲಿ ಸುಮಾರು 14,000ಗಿಡ ಹಾಗೂ ಸಸಿ ನೆಡಲಾಗುತ್ತಿದೆ. ಇದಕ್ಕಾಗಿ ಸುಮಾರು 38.8 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಇದೀಗ ಆಯ್ಕೆ ಮಾಡಿಕೊಂಡಿರುವ ಗಿಡ ಹಾಗೂ ಸಸಿಗಳು ರಸ್ತೆ-ವಿಭಜಕಕ್ಕೆ ಯಾವುದೇ ಧಕ್ಕೆ ಮಾಡುವುದಿಲ್ಲ. ಮೇಲಾಗಿ ಜಾನುವಾರುಗಳು ತಿನ್ನದಂತಹ ಗಿಡಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೆಲವೆಡೆ ರಸ್ತೆ ವಿಭಜಕಗಳು ಹಾಳಾಗಿದ್ದರೆ ಅವುಗಳನ್ನು ದುರಸ್ತಿ ಮಾಡಿಸಿ ಸಸಿ ಬೆಳೆಸುವ ಕಾರ್ಯ ನಡೆದಿದೆ.
ಹಸಿರು ಉಸಿರು ಯೋಜನೆಯಲ್ಲಿ ನಗರದ ಸೌಂದಯೀìಕರಣ ಹಾಗೂ ಹಸಿರೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಮಹಾನಗರದ ಪ್ರಮುಖ ರಸ್ತೆಗಳನ್ನು ಹಸಿರು ಉಸಿರು ಯೋಜನೆಗೆ ಒಳಪಡಿಸುವ ಯೋಜನೆಯಿದೆ. ಪಾಲಿಕೆ ಆಯುಕ್ತರ ಮಾರ್ಗದರ್ಶನದ ಮೇರೆಗೆ ಇನ್ನಷ್ಟು ಕಾರ್ಯ ಕೈಗೊಳ್ಳಲಾಗುವುದು. ಜನರ ಸಹಭಾಗಿತ್ವ ಇಲ್ಲದೆ ಯಾವುದೇ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ. ನೆಟ್ಟಿರುವ ಗಿಡಗಳನ್ನು ಹಾಳು ಮಾಡದೆ ಕಾಪಾಡಿಕೊಳ್ಳಬೇಕು.
–ಇ. ತಿಮ್ಮಪ್ಪ, ಅಧೀಕ್ಷಕ ಅಭಿಯಂತ, ಹು-ಧಾ ಮಹಾನಗರ ಪಾಲಿಕೆ
–ಹೇಮರಡ್ಡಿ ಸೈದಾಪುರ