Advertisement

ಶಕ್ತಿ ಸೌಧದ ಎದುರು ಮತ್ತೆ ಚಿಗುರಲಿದೆ ಹಸಿರು

11:51 AM Jul 17, 2017 | |

ಬೆಂಗಳೂರು: ಮೆಟ್ರೋ ಕಾಮಗಾರಿಯಿಂದಾಗಿ ಹಾಳಾಗಿದ್ದ ವಿಧಾನಸೌಧ-ಹೈಕೋರ್ಟ್‌ಗಳ ಮುಂಭಾಗದ ಜಾಗವಿನ್ನು ವರ್ಷಪೂರ್ತಿ ವಿವಿಧ ಬಗೆಯ ಪರಿಮಳದ ಹೂವುಗಳಿಂದ ಕಂಗೊಳಿಸಲಿದೆ! ಆಂಧ್ರಪ್ರದೇಶ, ಪೂನಾ ಸೇರಿದಂತೆ ವಿವಿಧೆಡೆಗಳಿಂದ ಹಲವು ಬಗೆಯ ಹೂಗಿಡಗಳ ವಿಶೇಷ ತಳಿಗಳನ್ನು ತಂದು ವಿಧಾನಸೌಧದ ಮುಂಭಾಗದಲ್ಲಿ ನೆಡಲಾಗುತ್ತಿದೆ.

Advertisement

ಪೊಲೀಸ್‌ ತಿಮ್ಮಯ್ಯ ವೃತ್ತದಿಂದ ಶಾಂತವೇರಿ ಗೋಪಾಲಗೌಡ ವೃತ್ತದವರೆಗಿನ ರಸ್ತೆ ವಿಭಜಕದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿದ್ದಂತೆ ಅಂದದ ಭೂದೃಶ್ಯವನ್ನು (ಲ್ಯಾಂಡ್‌ ಸ್ಕೇಪ್‌) ಈ ಜಾಗದಲ್ಲಿ ನಿರ್ಮಿಸಲು ಯೋಜನೆ ಸಿದ್ಧಗೊಂಡಿದೆ. ಮೆಟ್ರೋ ಕಾಮಗಾರಿಯಿಂದಾಗಿ ವಿಧಾನಸೌಧ ಮತ್ತು ಹೈಕೋರ್ಟ್‌ ನಡುವಿನ ಉದ್ಯಾನ ಹಾನಿಗೊಂಡಿತ್ತು.

ಇದೀಗ ತನ್ನಿಂದಾದ ಹಾನಿ ಸರಿಪಡಿಸಲು ಉದ್ಯಾನವನ ಪುನರ್‌ನಿರ್ಮಾಣಕ್ಕೆಂದು ಬಿಎಂಆರ್‌ಸಿ ಸಂಸ್ಥೆ ಸುಮಾರು 1.50 ಕೋಟಿ ರೂ.ಗಳನ್ನು ತೋಟಗಾರಿಕೆ ಇಲಾಖೆಗೆ ನೀಡಿದೆ. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ವಿಧಾನಸೌಧ ಮುಖ್ಯದ್ವಾರ ಸಮೀಪದ ಉದ್ಯಾನ, ಹೈಕೋರ್ಟ್‌ ರಕ್ಷಣಾ ಬೇಲಿ ಒಳಗಿರುವಂತೆ ಸುಮಾರು 4 ಎಕರೆ ಪ್ರದೇಶದಲ್ಲಿ 2 ಕೋಟಿ ವೆಚ್ಚದಲ್ಲಿ ಹೊಸದಾಗಿ ಉದ್ಯಾನ ಅಭಿವೃದ್ಧಿ ಕಾರ್ಯ ಆರಂಭಿಸಿದೆ.

ನಿತ್ಯ ಪುಷ್ಪ ಬೋಗನ್‌ವೀಲಾ
ವಿಧಾನಸೌಧದ ರಕ್ಷಣಾ ಬೇಲಿ(ಗ್ರಿಲ್‌) ಒಳಭಾಗದಲ್ಲಿ ಇಳಿಜಾರಿನಂಥ ವ್ಯವಸ್ಥೆ ಮಾಡಲಾಗಿದ್ದು, ಇದರಲ್ಲಿ ವರ್ಷಪೂರ್ತಿ ಹೂವು ಬಿಡುವ ಕ್ರೀಪಿಂಗ್‌ ಬೋಗನ್‌ವೀಲಾ(ಕಾಗದ ಹೂವು)ದ ಗಿಡಗಳನ್ನು ನೆಡಲಾಗಿದೆ. ಕೆಂಪು, ಬಿಳಿ, ಹಳದಿ, ತಿಳಿಗೆಂಪು, ವೈಲೆಟ್‌ ಹಾಗೂ ಬಣ್ಣಬಣ್ಣದ ಎಲೆಗಳನ್ನು ಬಿಡುವ ಬೋಗನ್‌ವೀಲಾಗಳನ್ನು ಹಾಕಲಾಗಿದೆ. ಇದು ಬಳ್ಳಿಯಂತಾಗದೆ ಗಿಡದಂತೆ ತುಂಬಾ ಆಕರ್ಷಕವಾಗಿ ವರ್ಷಪೂರ್ತಿ ಹೂವಿನಿಂದ ಗಮನ ಸೆಳೆಯಲಿದೆ.

ಟೋಪಿಯರಿ ಆಕರ್ಷಣೆ
ಮೆಟ್ರೋ ಕಾಮಗಾರಿಗಾಗಿ ಪೊಲೀಸ್‌ ತಿಮ್ಮಯ್ಯ ವೃತ್ತದಿಂದ ಶಾಂತವೇರಿ ಗೋಪಾಲಗೌಡ ವೃತ್ತದವರೆಗೆ ಈ ಹಿಂದೆ ಇದ್ದ ರಾಯಲ್‌ಫಾಮ್‌ ಮರಗಳನ್ನು ತೆರವುಗೊಳಿಸಲಾಗಿತ್ತು. ಈಗ ಆ ಜಾಗದಲ್ಲಿ ಅತ್ಯುತ್ತಮ ಭೂದೃಶ್ಯ(ಲ್ಯಾಂಡ್‌ಸ್ಕೇಪ್‌) ನಿರ್ಮಿಸಿ ಆಂಧ್ರಪ್ರದೇಶ ಸೇರಿದಂತೆ ವಿವಿಧ ಕಡೆಗಳಿಂದ ಸುಮಾರು 50ಕ್ಕೂ ಹೆಚ್ಚು ಟೋಪಿಯರಿ ತಳಿಯ ಗಿಡಗಳನ್ನು ತಂದು ನೆಡುವ ಯೋಜನೆ ಇದೆ.

Advertisement

ಜತ್ರೋಪ, ಅಕೆಲಿಫಾ, ಸೆಸ್ಟ್ರಮ್‌ ರೆಡ್‌ ಜೋಹರ್‌, ಕ್ರೋಟಾನ್ಸ್‌, ಸೆಲೋಸಿಯಾ, ನೆರೂÅಮ್ಸ್‌, ಡಯಾನ¤ಸ್‌ ಬಾರ್ಬಟಸ್‌, ಸಲ್ವಿಯಾ ಜಾತಿಯ ವಿವಿಧ ತಳಿಗಳು, ಸೈಂಬಿಡಿಯಾಂ ಸೇರಿದಂತೆ ಬಗೆಬಗೆಯ ಹೂವಿನ ಗಿಡಗಳ ನಡುವೆ ಟೋಪಿಯರಿ ಗಿಡಗಳನ್ನು ನೆಡಲಾಗುವುದು. ಈ ಗಿಡಗಳು ಸ್ವಲ್ಪ ಎತ್ತರಕ್ಕೆ ಬೆಳೆದ ನಂತರ ವಿವಿಧ ಪ್ರಾಣಿ, ಪಕ್ಷಿಗಳ ಆಕೃತಿಯಂತೆ ಕತ್ತರಿಸಿ ಆಕಾರ ನೀಡಬಹುದು. ಇದು ನೋಡುಗರಿಗೆ, ಮುಖ್ಯವಾಗಿ ಮಕ್ಕಳಿಗೆ ತುಂಬಾ ಇಷ್ಟವಾಗಲಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್‌. 

ಹೊಸ ಪಾರ್ಕ್‌ 
ವಿಧಾನಸೌಧದ ಮುಖ್ಯ ಪ್ರವೇಶದ್ವಾರದ ಇಕ್ಕೆಲಗಳಲ್ಲಿ ಇದ್ದ ಉದ್ಯಾನ ಹಳೆಯದಾಗಿತ್ತು. ಈಗ ಹೊಸದಾಗಿ ನಿರ್ಮಿಸುತ್ತಿರುವ ಉದ್ಯಾನದೊಂದಿಗೆ ಹಳೆಯ ಉದ್ಯಾನವನ್ನು ಪುನರ್‌ನಿರ್ಮಿಸಬೇಕೆಂಬುದು ತೋಟಗಾರಿಕೆ ಸಚಿವರ ಆಸೆಯಾಗಿತ್ತು. ಅಂತೆಯೇ ಹೈಕೋರ್ಟ್‌ ಮತ್ತು ವಿಧಾನಸೌಧದ ಉದ್ಯಾನದಲ್ಲಿ ವರ್ಷವಿಡೀ ಹಸಿರಿನಿಂದ ಹೂವು ಬಿಡುವ ಸಣ್ಣ ಸಣ್ಣ ಹೂವಿನ ತಳಿಗಳನ್ನು ನೆಡಲಾಗುತ್ತಿದೆ.

ಗುಲಾಬಿ ಸೇರಿದಂತೆ ಲಾಲ್‌ಬಾಗ್‌ನಲ್ಲಿ ಅಭಿವೃದ್ಧಿಪಡಿಸಿದ ಹೂವಿನ ಗಿಡಗಳನ್ನು ಹಾಕಲಾವುದು. ಇದೀಗ ಹೊಸ ಗಾರ್ಡನ್‌ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಶೇ.70ರಷ್ಟು ಕೆಲಸ ಮುಗಿದಿದೆ. ವಿವಿಧ ವಿಶೇಷ ಹೂವಿನ ತಳಿಗಳು, ಆಕರ್ಷಕ ಅಲಂಕಾರಿಕ ಗಿಡಗಳನ್ನು ಇಲ್ಲಿ ಬಳಕೆ ಮಾಡಲಾಗುತ್ತಿದೆ. ಹೈಕೋರ್ಟ್‌ ಮುಂಭಾಗದಲ್ಲಿ ವಿವಿಧ ಮರದ ಜಾತಿಯ ಗಿಡಗಳನ್ನು ಕೂಡ ಬೆಳೆಸುವ ಉದ್ದೇಶ ತೋಟಗಾರಿಕೆ ಇಲಾಖೆ ಹೊಂದಿದೆ. 

ಪ್ರಸ್ತುತ ಉದ್ಯಾನ ಪುನರ್‌ ನಿರ್ಮಾಣ ಕಾರ್ಯ ಶೇ.70ರಷ್ಟು ಪೂರ್ಣವಾಗಿದೆ. ಬಿಎಂಆರ್‌ಸಿಗೆ ಹೆಚ್ಚುವರಿಯಾಗಿ 38.7 ಲಕ್ಷ ರೂ. ಕೇಳಲಾಗಿದೆ. ಮುಂದಿನ ದಿನಗಳಲ್ಲಿ ಅನುದಾನದ ಲಭ್ಯತೆಗೆ ಅನುಗುಣವಾಗಿ ವಿಧಾನಸೌಧದ ಇತರ ಆಯ್ದ ಪ್ರದೇಶಗಳ ಅಂದ ಹೆಚ್ಚಿಸಲು ಭೂದೃಶ್ಯ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು. 
-ಡಾ.ಎಂ.ಜಗದೀಶ್‌, ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ

ಹೈಕೋರ್ಟ್‌ ಮುಂಭಾಗದ ಉದ್ಯಾನದಲ್ಲಿ ಸಣ್ಣ ಹೂವಿನ ಸಸಿಗಳಿಂದ ಭಾರತದ ನಕ್ಷೆ ಮಾಡಲಾಗುವುದು. ಉದ್ಯಾನ ಪುನರ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಲಾಖೆ ಟೆಂಡರ್‌ ಕರೆದಿದ್ದು, ಆಂಧ್ರ ಮೂಲದ “ಗಂಗು ಎಂಟರ್‌ಪ್ರೈಸಸ್‌’ ಟೆಂಡರ್‌ ಪಡೆದುಕೊಂಡಿದೆ. ಉದ್ಯಾನ ಸೇರಿದಂತೆ ರಸ್ತೆ ವಿಭಜಕದ ಉದ್ಯಾನಕ್ಕೂ ತುಂತುರು ನೀರಾವರಿ ವ್ಯವಸ್ಥೆ ಅಳವಡಿಸುವ ಯೋಜನೆ ಇದೆ. 
-ಮಹಾಂತೇಶ್‌ ಮುರುಗೋಡು, ಉಪ ನಿರ್ದೇಶಕ, ಕಬ್ಬನ್‌ಪಾರ್ಕ್‌

* ಸಂಪತ್‌ ತರೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next