Advertisement

ಹಸಿರು ಸಂಚಾರಿ ಪಥ ಯೋಜನೆ ಪರಿಶೀಲನೆ

12:55 PM Apr 04, 2022 | Team Udayavani |

ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ಉಣಕಲ್ಲ ಕೆರೆ ನಾಲಾಕ್ಕೆ ಪ್ರಾಯೋಗಿಕವಾಗಿ ಕೈಗೊಂಡಿರುವ ಹಸಿರು ಸಂಚಾರಿ ಪಥ (ಗ್ರೀನ್‌ ಮೊಬಿಲಿಟಿ ಕಾರಿಡಾರ್‌) ಯೋಜನೆಯನ್ನು ಫ್ರೆಂಚ್‌ ಅಭಿವೃದ್ಧಿ ಏಜೆನ್ಸಿ ನಿಯೋಗ (ಎಎಫ್‌ಡಿ) ಭೇಟಿ ನೀಡಿ ಪರಿಶೀಲನೆ ನಡೆಸಿತು.

Advertisement

ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ 640 ಮೀಟರ್‌ ಉದ್ದದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಎರಡನೇ ಹಂತದ ಯೋಜನೆ ಕೈಗೊಳ್ಳುವುದು ಹಾಗೂ ಅಗತ್ಯ ಅನುದಾನ ನೀಡುವ ಹಿನ್ನೆಲೆಯಲ್ಲಿ ಫ್ರಾನ್ಸ್‌ನ ನಿಯೋಗ ಕಾಮಗಾರಿಯನ್ನು ಪರಿಶೀಲಿಸಿತು. ಉಣಕಲ್ಲ ಕೆರೆಯಿಂದ ಗಬ್ಬೂರುವರೆಗೆ ಸುಮಾರು 80 ಕೋಟಿ ರೂ. ವೆಚ್ಚದಲ್ಲಿ 9.2 ಕಿಮೀ ಸಂಚಾರ ಪಥ ನಿರ್ಮಾಣದ ಯೋಜನೆಯಾಗಿದೆ. ದೇಶದ ಮೊದಲ ಯೋಜನೆಯಾಗಿದ್ದರಿಂದ ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಕೈಗೊಳ್ಳಲಾಗಿದೆ. ಇದೀಗ ಪೂರ್ಣಗೊಂಡಿರುವ ಕಾರಿಡಾರ್‌ನ ಪ್ರತಿಯೊಂದು ಕಾಮಗಾರಿಯನ್ನು ನಿಯೋಗ ವೀಕ್ಷಿಸಿತು. ಈ ಸಂದರ್ಭದಲ್ಲಿ ಸ್ಮಾರ್ಟ್‌ ಸೈಕಲ್‌ ಸವಾರಿ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿತು.

ಮಾಜಿ ಸಿಎಂ ಜಗದೀಶ ಶೆಟ್ಟರ ಮಾತನಾಡಿ, ದೇಶದ 100 ಸ್ಮಾರ್ಟ್‌ಸಿಟಿ ಯೋಜನೆಗಳ ಪೈಕಿ ಉಣಕಲ್ಲ ಕೆರೆ-ಗಬ್ಬೂರುವರೆಗಿನ ಹಸಿರು ಪಥ ಮೊದಲ ಯೋಜನೆಯಾಗಿದೆ. ಮೊದಲ ಹಂತದಲ್ಲಿ 640 ಮೀ ಉದ್ದವನ್ನು 7 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಉದ್ಘಾಟನೆಗೆ ದಿನ ನಿಗದಿ ಮಾಡಬೇಕಾಗಿದೆ. ನಾಲಾ ಪಕ್ಕದಲ್ಲಿ ಸೈಕಲ್‌ ಪಾಥ್‌, ಸ್ಮಾರ್ಟ್‌ ಸೈಕಲ್‌, ಉದ್ಯಾನವನ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಲಾಗಿದೆ. ಉಣಕಲ್ಲ ಭಾಗದಿಂದ ಬರುವ ಕೊಳಚೆ ನೀರನ್ನು ಎಸ್‌ಟಿಪಿ ಘಟಕದ ಮೂಲಕ ಶುದ್ಧೀಕರಿಸಿ ಈ ನಾಲಾಗೆ ಬಿಡುವುದರಿಂದ ನಿತ್ಯವೂ ಒಂದು ಪ್ರಮಾಣದಲ್ಲಿ ನೀರು ಹರಿಯಲಿದೆ. ಹೀಗಾಗಿ ಈ ಸ್ಥಳ ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಲಿದೆ ಎಂದರು.

ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್‌ ಅಹ್ಮದ್‌ ಮಾತನಾಡಿ, ಉಣಕಲ್ಲ ಕೆರೆಯಲ್ಲಿ ಕಳೆ ನಾಶಕ್ಕೆ ಸ್ಮಾರ್ಟ್‌ಸಿಟಿಯಿಂದ ಪ್ರಯತ್ನಗಳು ನಡೆದಿವೆ. ಹಿಂದೆ ಬಹುತೇಕ ಕಳೆ ತೆಗೆಯಲಾಗಿತ್ತು. ಇದೀಗ ಪುನಃ ಕಳೆ ಕಾಣಿಸುತ್ತಿದೆ. ಕಳೆ ತೆಗೆಯುವ ಹಾಗೂ ಸ್ವತ್ಛತೆ ಕಾಪಾಡುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ. ಹಸಿರು ಸಂಚಾರ ಪಥದ ಎರಡನೇ ಹಂತದ ಕಾಮಗಾರಿ ಕೈಗೊಳ್ಳಲು ಈಗಾಗಲೇ ಸಮೀಕ್ಷೆ ಮಾಡಲಾಗಿದೆ. ಯಾವುದೇ ಒತ್ತುವರಿ ಕಂಡುಬಂದಿಲ್ಲ ಎಂದು ಹೇಳಿದರು.

ಸ್ಮಾರ್ಟ್‌ಸಿಟಿ ಯೋಜನೆ ಚೇರ್ಮೆನ್‌ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ| ಆರ್‌. ವಿಶಾಲ ಅವರು ಫ್ರಾನ್ಸ್‌ ನಿಯೋಗಕ್ಕೆ ಯೋಜನೆ ಕುರಿತು ಮಾಹಿತಿ ನೀಡಿದರು. ನಿಯೋಗದಲ್ಲಿ ಜ್ಯೂಲಿಯೆಟ್‌ ಲಿ ಪ್ಯಾನೆರರ್‌, ಜ್ಯೂಲಿಯೆನ್‌ ಬೊಗಿಲೆಟ್ಟೊ, ಸ್ಮಾರ್ಟ್‌ಸಿಟಿ ವಲಯದ ವ್ಯವಸ್ಥಾಪಕಿ ಫ್ಯಾನಿ ರಗೋಟ್‌, ನಯೀಮ್‌ ಕೇರುವಾಲಾ, ವಿವೇಕ ಸಂಧು, ಡಾ| ಶಾಲಿನಿ ಮಿಶ್ರಾ, ಡಾ| ಮಹ್ಮದ್‌ ಆರೀಫ್‌, ಆಕಾಂಕ್ಷ ಲಾರೋಯಿಯಾ, ಇಂದರಕುಮಾರ ಇದ್ದರು.

Advertisement

ಯೋಜನೆ ಬಗ್ಗೆ ಫ್ರಾನ್ಸ್‌ನಿಂದ ಆಗಮಿಸಿರುವ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಎರಡನೇ ಹಂತದ ಭಾಗವಾಗಿ ಯೋಜನೆ ಕೈಗೊಳ್ಳುವ ಕುರಿತು ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. 9.2 ಕಿಮೀ ಉದ್ದದವರೆಗೂ ಸಂಚಾರಿ ಪಥ ನಿರ್ಮಾಣವಾಗಲಿದೆ. ಮುಂದಿನ ಹಂತದ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ನಾಲಾ ಒತ್ತುವರಿ ಕಂಡುಬಂದರೆ ತೆರವುಗೊಳಿಸುವ ಕೆಲಸ ಆಗಲಿದೆ. ಯೋಜನೆಯಿಂದಾಗಿ ಪ್ರತಿ ಮಳೆಗಾಲದಲ್ಲಿ ಇಲ್ಲಿನ ಜನರು ಅನುಭವಿಸುವ ಸಂಕಟ ತಪ್ಪಲಿದೆ. ಕೋವಿಡ್‌ನಿಂದಾಗಿ ಸ್ಮಾರ್ಟ್‌ಸಿಟಿ ಕಾಮಗಾರಿಗಳು ವಿಳಂಬವಾಗಿದ್ದವು. ಇದೀಗ ವೇಗ ಪಡೆದುಕೊಂಡಿದೆ. ರಸ್ತೆಗಳನ್ನು ಪೂರ್ಣಗೊಳಿಸಲು ಮೊದಲ ಆದ್ಯತೆ ನೀಡಲಾಗಿದೆ. –ಜಗದೀಶ ಶೆಟ್ಟರ, ಮಾಜಿ ಮುಖ್ಯಮಂತ್ರಿ

ಇಂತಹ ಪರಿಸರ ಸ್ನೇಹಿ ಯೋಜನೆ ಕೈಗೊಂಡಿರುವ ಸ್ಮಾರ್ಟ್‌ಸಿಟಿ ನಗರಗಳ ಪೈಕಿ ಇದು ಮೊದಲು. ಬೆಳೆಯುತ್ತಿರುವ ನಗರಗಳಲ್ಲಿ ಇಂತಹ ಯೋಜನೆಗಳ ಬಗ್ಗೆ ಹೆಚ್ಚು ಕೇಂದ್ರೀಕರಿಸಿದರೆ ವಾಯುಮಾಲಿನ್ಯಕ್ಕೆ ಆಸ್ಪದ ಕೊಡದಂತೆ ನೋಡಿಕೊಳ್ಳಬಹುದು. ಇದೊಂದು ಮಾದರಿ ಯೋಜನೆಯಾಗಿದ್ದು, ಪ್ರಾಯೋಗಿಕವಾಗಿ ಕೈಗೊಂಡಿರುವ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಮುಂದಿನ ಹಂತದ ಯೋಜನೆ ಬಗ್ಗೆ ನಿರ್ಧರಿಸಲಾಗುವುದು. -ಹಿತೇಶ ವೈದ್ಯ, ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅರ್ಬನ್‌ ಅಫೆರ್ಸ್‌ ನಿಯೋಗದ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next