Advertisement

ಕಾಂತಮಂಗಲ-ಅಜ್ಜಾವರ ರಸ್ತೆ ದುರಸ್ತಿಗೆ ಹಸುರು ನಿಶಾನೆ

05:41 AM Feb 20, 2019 | |

ಅಜ್ಜಾವರ: ಹಲವು ವರ್ಷಗಳಿಂದ ದುರಸ್ತಿ ಕಾಣದೆ ಸಂಪೂರ್ಣ ಶಿಥಿಲಗೊಂಡಿದ್ದ ಸುಳ್ಯ-ಅಜ್ಜಾವರ ರಸ್ತೆಯ ಪುನಃ ನಿರ್ಮಾಣ ಕಾಮಗಾರಿ ಶೀಘ್ರವಾಗಿ ಆರಂಭವಾಗುವ ಲಕ್ಷಣಗಳು ಕಾಣುತ್ತಿವೆ. ರಸ್ತೆ ದುರಸ್ತಿಗೆ 8 ಕೋಟಿ ರೂ. ಅನುದಾನದ ಟೆಂಡರ್‌ ಪೂರ್ಣಗೊಂಡಿದ್ದು, ಸರಕಾರದಿಂದ ಅನುಮೋದನೆ ಲಭಿಸಿದರೆ ಕೆಲಸ ಶುರುವಾಗಲಿದೆ.

Advertisement

ಸುಳ್ಯ-ಅಜ್ಜಾವರ ರಸ್ತೆ ನಿರ್ಮಾಣವಾಗಿ 20 ವರ್ಷಗಳಿಗೂ ಹೆಚ್ಚು ಕಾಲ ಸಂದಿದೆ. ಸುಮಾರು 6.5 ಕಿ.ಮೀ. ಉದ್ದವಿರುವ ಈ ರಸ್ತೆಗೆ ಡಾಮರು ಹಾಕಿ ಐದು ವರ್ಷಗಳು ಕಳೆದಿವೆ. ಆ ಬಳಿಕ ಯಾವುದೇ ದುರಸ್ತಿ ಕಂಡಿರಲಿಲ್ಲ. ರಸ್ತೆಯ ಡಾಮರು ಸಂಪೂರ್ಣ ಕಿತ್ತು ಹೋಗಿ ಗುಂಡಿ ಬಿದ್ದಿದೆ. ಹೀಗಿದ್ದರೂ ರಸ್ತೆ ದುರಸ್ತಿ ಕಾರ್ಯ ಮಾಡಲು ಜನಪ್ರತಿನಿಧಿಗಳ ನಿರ್ಲಕ್ಷ್ಯವು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು.

ಟೆಂಡರ್‌ ಪ್ರಕ್ರಿಯೆ ಪೂರ್ಣ
ಸುಳ್ಯ- ಕಾಂತಮಂಗಲ- ಅಜ್ಜಾವರ ಹಾಗೂ ಉಬರಡ್ಕ ರಸ್ತೆ ಶೀಘ್ರವೇ ಅಭಿವೃದ್ಧಿಗೆ ತೆರೆದುಕೊಳ್ಳಲಿದೆ. ಅಜ್ಜಾವರ ರಸ್ತೆ ಜಿ.ಪಂ. ವತಿಯಿಂದ ನಿರ್ಮಾಣಗೊಂಡಿದ್ದರೂ ನಿರ್ವಹಣೆಯ ಟೆಂಡರ್‌ ಅನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ವಹಿಸಲಾಗಿದೆ. ಕಳೆದ ವರ್ಷದ ಟೆಂಡರ್‌ ಹಲವು ಕಾರಣಗಳಿಂದ ಕೊನೆ ಹಂತದಲ್ಲಿ ಕ್ಯಾನ್ಸಲ್‌ ಆಗಿತ್ತು. ಹೊಸ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ತಾಂತ್ರಿಕ ಇಲಾಖೆಯಿಂದ ಹಸುರು ನಿಶಾನೆ ಸಿಕ್ಕಿದೆ. ಸರಕಾರದ ಅನುಮೋದನೆಗೆ ಕಾಯಲಾಗುತ್ತಿದೆ. ಅಗ್ರಿಮೆಂಟ್‌ ನಮಗೆ ಲಭಿಸಿದರೆ ತತ್‌ಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದು ಹೆದ್ದಾರಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಯಾಕಿಷ್ಟು ವಿಳಂಬ?
ಕಾಂತಮಂಗಲ- ಅಜ್ಜಾವರ ರಸ್ತೆ ದುರಸ್ತಿ ಕಾರ್ಯ ದಿನೇ ದಿನೇ ಮುಂದಕ್ಕೆ ಹೋಗಿದ್ದು ಜನರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿತ್ತು.

ಜನ ಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರಾಸಕ್ತಿ ಎಂದು ದೂರಲಾಗಿತ್ತು. ಕಳೆದ ವರ್ಷ ಅನುದಾನ ಮಂಜೂರಾಗಿ ತಾಂತ್ರಿಕ ಇಲಾಖೆಗೆ ವರದಿ ಸಲ್ಲಿಸಲಾಗಿತ್ತು. ಅನಂತರ ಹಣಕಾಸು ವಿಭಾಗಕ್ಕೆ ಕಡತ ಹೋದ ಕೊನೆ ಹಂತದಲ್ಲಿ ರಾಜ್ಯ ಸರಕಾರ ಚಾಲ್ತಿಯಲ್ಲಿರುವ ಟೆಂಡರ್‌ಗಳನ್ನು ಸ್ಥಗಿತಗೊಳಿಸಲು ಆದೇಶ ಹೊರಡಿಸಿತ್ತು. ಈ ಕಾರಣದಿಂದ ಬಾಕಿ ಉಳಿದಿದ್ದ ಟೆಂಡರ್‌ ಅವಧಿ ಕೊನೆಗೊಂಡು, ಅನುಮೋದನೆಗೆ ಪರಿಗಣಿಸಲು ಆಗಿರಲಿಲ್ಲ. ಟೆಂಡರ್‌ ಅವಧಿಯನ್ನು ಹೊಸದಾಗಿ ರಿವ್ಯಾಲಿಡಿಟಿ ಮಾಡಿಸಲು ಸರಕಾರದ ಸುತ್ತೋಲೆ ಬರಬೇಕಾಗಿತ್ತು. ಈ ಪ್ರಕ್ರಿಯೆ ಮುಂದುವರೆಸಲು ಕಾಲಾವಕಾಶವೂ ಬೇಕಿತ್ತು. ಹೀಗಾಗಿ ಕಳೆದ ವರ್ಷ ಆಗಬೇಕಿದ್ದ ರಸ್ತೆ ಕಾಮಗಾರಿ ಅನಿವಾರ್ಯವಾಗಿ ಮುಂದೂಡಿಕೆಯಾಗಿತ್ತು.

Advertisement

ಸ್ಥಳೀಯರಿಂದ ರಸ್ತೆ ದುರಸ್ತಿ ಕಾರ್ಯ
ರಸ್ತೆಗಳು ಹೊಂಡ- ಗುಂಡಿಗಳಿಂದ ಕೂಡಿದ್ದು, ಸಂಚಾರಕ್ಕೆ ತೊಂದರೆ ಆಗುವುದನ್ನು ಅರಿತ ಅಜ್ಜಾವರ ಗ್ರಾಮಸ್ಥರು ಕೆಲವು ತಿಂಗಳ ಹಿಂದೆ ಒಂದು ದಿನದ ಶ್ರಮದಾನದ ಮೂಲಕ ತಕ್ಕ ಮಟ್ಟಿಗೆ ದುರಸ್ತಿ ಮಾಡಿಸಿದ್ದರು. ತುರ್ತು ಸ್ಥಿತಿಯಲ್ಲಿ ನಗರಕ್ಕೆ ಸಂಚರಿಸಲು ಆಟೋ ಚಾಲಕರು ಒಪ್ಪುತ್ತಿರಲಿಲ್ಲ. ಬೇರೆ ವಾಹನಗಳೂ ಬರುತ್ತಿಲ್ಲ. ಸುಳ್ಯ-ಅಜ್ಜಾವರ ರಸ್ತೆಯಲ್ಲಿ ಬಸ್ಸುಗಳ ಓಡಾಟವೂ ವಿರಳ. ಶಿಥಿಲಗೊಂಡಿರುವ ರಸ್ತೆಯನ್ನು ಜೆಸಿಬಿ ಸಹಾಯದಿಂದ ಕೆಂಪು ಕಲ್ಲು ಹಾಗೂ ಮಣ್ಣು ಹಾಕಿ ಸರಿಪಡಿಸಲಾಗಿತ್ತು.

ಅನುದಾನ ಮಂಜೂರು
ಕಾಂತಮಂಗಲ- ಅಜ್ಜಾವರ ಹಾಗೂ ಉಬರಡ್ಕ ರಸ್ತೆ ದುರಸ್ತಿ ಕಾಮಗಾರಿಗೆ 8 ಕೋಟಿ ರೂ.
ಮಂಜೂರಾಗಿದ್ದು, ಟೆಂಡರ್‌ ಆಗಿದೆ. ಸರಕಾರದಿಂದ ಅನುಮೋದನೆ ಸಿಕ್ಕದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು. 
– ಎಂಜಿನಿಯರ್‌,
ರಾಷ್ಟ್ರೀಯ ಹೆದ್ದಾರಿ ಇಲಾಖೆ ಶಿವಪ್ರಸಾದ್‌ ಮಣಿಯೂರು

ಶಿವಪ್ರಸಾದ್‌ ಮಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next