Advertisement

ಪಾಮರತಿದೊಡ್ಡಿ ಶಾಲೆಗೆ ಹಸಿರು ಶಾಲೆ ಪ್ರಶಸ್ತಿ

11:02 AM Feb 04, 2019 | Team Udayavani |

ದೇವದುರ್ಗ: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ತಾಲೂಕಿನ ಗಲಗ ಕ್ಲಸ್ಟರ್‌ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಪಾಮರತಿದೊಡ್ಡಿ ಶಾಲೆಗೆ ಹಸಿರು ಪ್ರಶಸ್ತಿ, ಚಡಕಲಗುಡ್ಡ ಶಾಲೆಗೆ ಹಳದಿ ಪ್ರಶಸ್ತಿ, ಮತ್ತು ಪುರಸಭೆ ವ್ಯಾಪ್ತಿಯ ಆರೇರದೊಡ್ಡಿ ಶಾಲೆಗೆ ಹಳದಿ ಪ್ರಶಸ್ತಿ ಲಭಿಸಿದೆ. ರಾಯಚೂರಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಕೆ. ನಂದನೂರು ಮೂರು ಶಾಲೆಗಳಿಗೆ ಪ್ರಶಸ್ತಿ ನೀಡಿ ಶಿಕ್ಷಕರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಪಾಮರತಿದೊಡ್ಡಿ ಶಾಲೆ: ಪಾಮರತಿದೊಡ್ಡಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗಿಡ, ಮರ ವಿವಿಧ ಸಸ್ಯಗಳನ್ನು ಬೆಳೆಸಿ ಹಸಿರು ವಾತಾವರಣ ನಿರ್ಮಿಸಲಾಗಿದೆ. ಶಾಲೆಯಲ್ಲಿ ಸದಾ ಹಸಿರು ಮನಸ್ಸಿಗೆ ಮುದ ನೀಡುವ ಜೊತೆಗೆ ತಂಪಿನ ಅನುಭವವಾಗುತ್ತದೆ. ಈ ಶಾಲೆಗೆ ಈಗಾಗಲೇ ಮೂರು ಪ್ರಶಸ್ತಿ ಲಭ್ಯವಾಗಿವೆ. 2008ರಲ್ಲಿ ಗುಣತ್ಮಾಕ ಪ್ರಶಸ್ತಿ, 2017ರಲ್ಲಿ ಹಳದಿ ಪ್ರಶಸ್ತಿ, 2018ರಲ್ಲಿ ಹಸಿರು ಶಾಲೆ ಪ್ರಶಸ್ತಿ ಲಭಿಸಿದೆ.

ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 39 ಮಕ್ಕಳಿದ್ದಾರೆ. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಜೊತೆಗೆ ಬೇಸಿಗೆ, ಮಳೆಗಾಲದಲ್ಲಿ ಕಲಿಕೆಗೆ ಅಕ್ಷರ ಕೋಟರ್‌ ಕೋಣೆ, ಶಾಲಾ ಆವರಣ ಗೋಡೆಗೆ ವಿವಿಧ ಪ್ರಾಣಿ ಪಕ್ಷಿಗಳು, ಹಣ್ಣಿನ ಚಿತ್ರಗಳನ್ನು ಬಿಡಿಸಲಾಗಿದೆ. ಮಕ್ಕಳ ಬಿಸಿಯೂಟಕ್ಕಾಗಿ ಆಸನ-ಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ಶಿಕ್ಷಣ ಇಲಾಖೆಯಿಂದ ಪ್ರತಿ ವರ್ಷ ನೀಡುವ ಉತ್ತಮ ಎಸ್‌ಡಿಎಂಸಿ 2.50 ಲಕ್ಷ ನಗದು ಪ್ರಶಸ್ತಿಗೆ ಈ ಬಾರಿ ಪ್ರಸ್ತಾವನೆ ಕಳಿಸಲಾಗಿದೆ ಎಂದು ಮುಖ್ಯ ಶಿಕ್ಷಕ ಇಸ್ಮಾಯಿಲ್‌ ತಿಳಿಸಿದ್ದಾರೆ.

ಚಡಕಲಗುಡ್ಡ ಶಾಲೆ: ಗಲಗ ಕ್ಲಸ್ಟರ್‌ ವ್ಯಾಪ್ತಿಯ ಚಡಕಲಗುಡ್ಡ ಶಾಲೆಗೆ ಹಳದಿ ಶಾಲೆಗೆ ಹಳದಿ ಪ್ರಶಸ್ತಿ ಲಭಿಸಿದೆ. ಶಾಲೆಯಲ್ಲಿ 1ರಿಂದ7ನೇ ತರಗತಿವರೆಗೆ 250 ಮಕ್ಕಳಿದ್ದು, ಮೂವರು ಕಾಯಂ, ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಶಾಲೆಯ ಎರಡೂವರೆ ಎಕರೆ ಪ್ರದೇಶದ ಆವರಣದಲ್ಲಿ 200ಕ್ಕೂ ಹೆಚ್ಚು ವಿವಿಧ ಗಿಡಮರ ಬೆಳೆಸಲಾಗಿದೆ. ಮಧ್ಯಾಹ್ನ ಬಿಸಿಯೂಟದ ತರಕಾರಿಗಾಗಿ ಶಾಲಾ ಆವರಣದಲ್ಲಿ ಕೈತೋಟ ಮಾಡಲಾಗಿದ್ದು, ಇಲ್ಲಿ ಬೆಳೆಸುವ ತರಕಾರಿಯನ್ನು ಬಳಸಲಾಗುತ್ತಿದೆ. ವಿವಿಧ ಕಾರ್ಯಕ್ರಮಕ್ಕಾಗಿ ಬಯಲುರಂಗಮಂದಿರ ನಿರ್ಮಿಸಲಾಗಿದೆ. ಗ್ರಾಮಸ್ಥರು ಶಾಲೆ ಅಭಿವೃದ್ಧಿಗೆ ಕೈಜೋಡಿಸಿದರೆ ಇನ್ನಷ್ಟು ಪರಿವರ್ತನೆ ತರುವ ಆಸೆ ಇದೆ ಎನ್ನುತ್ತಾರೆ ಮುಖ್ಯಶಿಕ್ಷಕ ವಿಷ್ಣುವರ್ದನ್‌.

ಆರೇರದೊಡ್ಡಿ ಶಾಲೆ: ದೇವದುರ್ಗ ಪುರಸಭೆ ವ್ಯಾಪ್ತಿಯ ಆರೇರದೊಡ್ಡಿ ಶಾಲೆಗೂ ಹಳದಿ ಶಾಲೆ ಪ್ರಶಸ್ತಿ ಲಭಿಸಿದೆ. ಶಾಲೆ ಆವರಣದಲ್ಲಿ ತೆಂಗಿನಮರ, ಬೇವಿನಗಿಡ, ಲಿಂಬೆಹಣ್ಣಿನ ಗಿಡ ಸೇರಿ ವಿವಿಧ ಗಿಡ ಮರ ಬೆಳೆಸಲಾಗಿದೆ. 2009ರಲ್ಲಿ ಶಾಲೆ ಆರಂಭವಾದಾಗ ಕೇವಲ 9 ಮಕ್ಕಳ ದಾಖಲಾತಿ ಇತ್ತು. ನಿತ್ಯ ಮೂವರು ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಹಾಜರಾಗುತ್ತಿದ್ದರು. ಮುಖ್ಯ ಶಿಕ್ಷಕ ಕೇಶಾಪುರ ಪರಿಶ್ರಮದ ಫಲವಾಗಿ ಇದೀಗ 35 ಮಕ್ಕಳ ದಾಖಲಾತಿ ಇದೆ. ಸರಕಾರಿ ಶಾಲೆ ಮಕ್ಕಳನ್ನು ತನ್ನತ್ತ ಸೆಳೆಯುತ್ತಿದೆ. ಶಾಲಾ ವಾತಾವರಣ ಹಸಿರಿನಿಂದ ಕೂಡಿದೆ ಎಂದು ಪಾಲಕ ಬಸವರಾಜ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next