ನೆರಳಿರುವ ಹಸಿರು ಮರದ ಕೆಳಗಿರುವ ಕಟ್ಟೆ, ಅರಳಿ ನಿಂತ ಗುಲಾಬಿ ಗಿಡಗಳು ಠಾಣೆಗೆ ವಿಶೇಷ ಮೆರುಗು ನೀಡಿವೆ.
Advertisement
ಜಗಳವಾಡಿಕೊಂಡು ಬಂದ ಗಂಡ ಹೆಂಡತಿಯರು, ಹೊಡೆದಾಡಿಕೊಂಡು ಬರುವ ನೆರೆಮನೆಯವರು, ಅಪಘಾತದಿಂದ ನರಳಿದವರು ಸೇರಿದಂತೆ ಪೊಲೀಸ್ ಠಾಣೆ ಮೆಟ್ಟಿಲೇರುವ ನಾನಾ ರೀತಿಯ ದೂರುದಾರರಿಗೆ ತಕ್ಷಣ ಮನಃಶಾಂತಿ ಉಂಟು ಮಾಡುತ್ತದೆ.
ಇಲ್ಲಿ ಕಾರ್ಯ ನಿರ್ವಹಿಸಿದ್ದ ಉತ್ಸಾಹಿ, ಯುವಕ ಪಿಎಸ್‌ಐ ಗುಡ್ಡಪ್ಪ ಹಾಗೂ ಸಿಬ್ಬಂದಿಯ ಶ್ರಮದಿಂದ ಹಸಿರು ಠಾಣೆ ನಿರ್ಮಾಣ ಸಾಧ್ಯವಾಗಿದೆ. 2015 ರಲ್ಲಿ ಠಾಣೆಯ ಪಿಎಸ್‌ಐ ಗುಡ್ಡಪ್ಪ ಹಾಗೂ ಸಿಬ್ಬಂದಿ ಠಾಣೆಯ ಮುಂದೆ ಖಾಲಿ ಇದ್ದ ಪ್ರದೇಶವನ್ನು ಸುಂದರಗೊಳಿಸಲು ನಿರ್ಧರಿಸಿದರು. ಮೂರು ವರ್ಷಗಳ ಅವಧಿಯಲ್ಲಿ ಅಭಿವೃದ್ಧಿಪಡಿಸಿರುವ ಸುಂದರ ವಾತಾವರಣ ಮನಸೆಳೆಯುತ್ತದೆ. ಮೂರು ವರ್ಷಗಳ ಹಿಂದೆ ಹಾವು, ಚೇಳುಗಳು ತುಂಬಿ ತುಳುಕುತ್ತಿದ್ದ ಠಾಣೆಯೀಗ ನೆಮ್ಮದಿಯ ತಾಣವಾಗಿದೆ. ಮೊದಲು ಇದ್ದ ಕೆಲವು ಮರಗಳ ಜತೆ ಹಸಿರು ಲಾನ್, ಗುಲಾಬಿ, ಕ್ರೊಟಾನ್ಸ, ಕಲ್ಲಿನ ಕಂಬಗಳು ತಲೆಯೆತ್ತಿವೆ. ಪಾರ್ಕ್‌ಗೆ ಅಗತ್ಯವಿರುವ ಎಲ್ಲ ರೀತಿಯ ವಾತಾವರಣ ನಿರ್ಮಾಣಗೊಂಡಿದೆ. ಓಡಾಟಕ್ಕೆ ಜಾಗ, ವಿಶ್ರಮಿಸಲು ಕಟ್ಟೆಗಳನ್ನು ನಿರ್ಮಿಸಲಾಗಿದೆ.
Related Articles
Advertisement
ಠಾಣೆಯ ಆವರಣದಲ್ಲಿ ನೂತನ ಕಟ್ಟಡ ನಿಮಾಣಕ್ಕಾಗಿ ಕೊರೆಯಿಸಿದ್ದ ಬೋರ್‌ವೆಲ್‌ನ ನೀರು ಪಾರ್ಕ್ ನಿರ್ಮಾಣಕ್ಕೆ ಸಹಾಯಕವಾಗಿದೆ. ಇಡೀ ಪಾರ್ಕ್‌ಗೆ ಹನಿ ನೀರಾವರಿ ವಿಧಾನ ಅಳವಡಿಸಲಾಗಿದೆ. ಹೀಗಾಗಿ ನೀರಿನ ದಕ್ಷ ಬಳಕೆ ಸಾಧ್ಯವಾಗಿದೆ. ಠಾಣೆಯಲ್ಲಿ ಒಬ್ಬ ಅರೆಕಾಲಿಕ ಡಿ ಗ್ರೂಪ್ ನೌಕರ ಇದ್ದು, ಕಚೇರಿ ಸ್ವತ್ಛತಾ ಕಾರ್ಯ ನಿರ್ವಹಿಸುತ್ತಿದ್ದಾರೆ.ಪಾರ್ಕ್ ನಿರ್ವಹಣೆಗೆ ಯಾವುದೇ ವಿಶೇಷ ಸಿಬ್ಬಂದಿ ಇಲ್ಲಿಲ್ಲ. ಇಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ನಿತ್ಯ ಕರ್ತವ್ಯದ ಜತೆಗೆ ಪಾಳಿಯಲ್ಲಿ ಪಾರ್ಕ್‌ನ್ನು ನಿರ್ವಹಿಸುತ್ತಿದ್ದಾರೆ. ಹುಲ್ಲು ಕತ್ತರಿಸುವ, ನೀರು ಬಿಡುವ, ಪಾತಿ ನಿರ್ಮಿಸುವ ಕಾರ್ಯವನ್ನು ಪ್ರೀತಿ ಹಾಗೂ ಶ್ರದ್ಧೆಯಿಂದ ಕೈಗೊಂಡಿದ್ದಾರೆ. ಠಾಣೆಗೆ ಹೊಂದಿಕೊಂಡಂತೆ ಸಿಬ್ಬಂದಿ ನಿವಾಸಗಳಿವೆ. ಹೀಗಾಗಿ ಪೊಲೀಸರು ಪಾರ್ಕ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ. 35 ಪೊಲೀಸ್ ಸಿಬ್ಬಂದಿಗೆ ಇಲ್ಲಿ ಕಾರ್ಯ ನಿರ್ವಹಿಸಲು ಸಾಕಷ್ಟು ಜಾಗವಿಲ್ಲ. 10 ಅಡಿ ಉದ್ದ 20 ಅಡಿ ಉದ್ದದ ಎರಡು ಕೊಠಡಿಗಳಲ್ಲಿ ಠಾಣೆ ಕಾರ್ಯ ನಿರ್ವಹಿಸುತ್ತಿದೆ. ಭೌತಿಕ ಕಟ್ಟಡ ಠಾಣೆಗಿಲ್ಲ. ಆದರೆ, ಸುಂದರವಾದ ಹಸಿರು ವಾತಾವರಣದ ಗಿಡ, ಮರಗಳ ನಡುವೆ ಕುಳಿತು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವಾರು ಬಾರಿ ಪಿಎಸ್‌ಐ ತಮ್ಮ ಸಿಬ್ಬಂದಿ ಮೀಟಿಂಗ್‌ಗಳನ್ನು ಹಸಿರು ಲಾನ್ ನಡೆಸುತ್ತಾರೆ. ಜತೆಗೆ ಶಾಂತಿ ಸಭೆಗಳಿಗೂ ಇದೇ ಹಸಿರು ಉದ್ಯಾನವನ ವೇದಿಕೆಯಾಗುತ್ತದೆ. ಠಾಣೆಯ ಆವರಣದಲ್ಲಿ ಉದ್ಯಾನವನ ಜತೆ ತೆಂಗು, ಹುಣಸೆ, ಆಲ, ಅರಳಿ, ಸಂಪಿಗೆ ಸೇರಿದಂತೆ 30ಕ್ಕೂ ಹೆಚ್ಚು ಮರಗಳಿವೆ. ಪ್ರತಿನಿತ್ಯ ಸಾರ್ವಜನಿಕರ ದೂರು ದುಮ್ಮಾನಗಳು, ಹಿರಿಯ ಅಧಿಕಾರಿಗಳ ಒತ್ತಡ, ವೈಯಕ್ತಿಕ ಸಮಸ್ಯೆಗಳ ನಡುವೆ ಪೊಲೀಸ್ ಸಿಬ್ಬಂದಿಯ ಈ ಪರಿಸರ ಕಾಳಜಿ ಮೆಚ್ಚುವಂತದ್ದು.