Advertisement
ಕೃಷಿಯ ಬಗ್ಗೆ ಜನರು ಹೆಚ್ಚು ಆಸಕ್ತಿ ತೋರಿಸಬೇಕು. ಇದಕ್ಕೆ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದಿಂದ ರೈತರಿಗೆ ವಿಶೇಷ ತರಬೇತಿ ನೀಡಿ, ಹಡಿಲು ಭೂಮಿಗಳನ್ನು ಮಾಲಕರ ಅನುಮತಿ ಪಡೆದು ಅದರಲ್ಲಿ ಬೇಸಾಯ ಮಾಡುವ ಮೂಲಕ ಕೃಷಿಯಿಂದ ಮುಕ್ತರಾಗಲು ಹೊರಟ ರೈತರಿಗೆ ಪುನಃ ಕೃಷಿಯತ್ತ ಆಕರ್ಷಿಸಲಾಗುತ್ತಿದೆ. ಆಧುನಿಕ ಕೃಷಿಯೊಂದಿಗೆ ರೈತರೂ ಬೆಳೆಯಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸಾಲ ನೀಡಿ ಯಂತ್ರಶ್ರೀ ನಾಟಿ ಮೂಲಕ ಭತ್ತ ಬೆಳೆಸುವ ಮಹತ್ವದ ಯೋಜನೆಯನ್ನು ತರಲಾಗಿದೆ. ಇದರಿಂದ ಮ್ಯಾಟ್ ನೇಜಿಯನ್ನು ಬೆಳೆಸಿ ಯಂತ್ರದ ಮೂಲಕ ನಾಟಿ ಮಾಡಲಾಗುತ್ತಿದೆ.
ಕೃಷಿಗೆ ಕೂಲಿ ಆಳುಗಳ ಕೊರತೆಯಿದೆ. ಸಿಕ್ಕಿದ ಆಳುಗಳಿಗೆ ಸಂಬಳ ಕೊಟ್ಟು ಕೃಷಿ ಮಾಡಲು ಅಸಾಧ್ಯವಾದ ಈ ಕಾಲಘಟ್ಟದಲ್ಲಿ ಯಂತ್ರಶ್ರೀ ಪದ್ಧತಿಯಲ್ಲಿ 1 ಎಕ್ರೆ ಗದ್ದೆಗೆ 1.50 ಗಂಟೆಯಲ್ಲಿ ನಾಟಿ ಮಾಡಿ ಕೂಲಿ ಆಳುಗಳನ್ನು ಬಳಸಿ ಮಾಡುವ ನಾಟಿಗಿಂತಲೂ ಹೆಚ್ಚುವರಿಇಳುವರಿ ಇದರಲ್ಲಿ ಬರುತ್ತದೆ. ಕೂಲಿಆಳು ಬಳಸಿ 1 ಎಕ್ರೆ ನಾಟಿ ಮಾಡಲು ಸುಮಾರು 15 ಸಾವಿರ ರೂ. ವರೆಗೆ ಖರ್ಚು ಬರುತ್ತದೆ. ಆದರೆ ಯಂತ್ರದ ಮೂಲಕ ನಾಟಿ ಮಾಡಿಸಿದರೆ ಕೇವಲ ನಾಲ್ಕೂವರೆ ಸಾವಿರ ರೂ. ಮಾತ್ರ ಖರ್ಚು ಬರುತ್ತದೆ. ನಾವು ವರ್ಷಕ್ಕೆ ಸುಮಾರು 15 ಸಾವಿರಮ್ಯಾಟ್‌ನಲ್ಲಿ ನೇಜಿ ತಯಾರಿಸಿ ನಮಗೆ ಬಳಸಿಕೊಂಡು ಉಳಿದದನ್ನು ಕೃಷಿಕರಿಗೆ ನೀಡುತ್ತೇವೆ. 1 ಎಕ್ರೆಗೆ ಸುಮಾರು 80 ಮ್ಯಾಟ್ ನೇಜಿ ಬೇಕಾಗುತ್ತದೆ. ನನ್ನಂತಹ ಉಡುಪಿ ತಾಲೂಕಿನಾದ್ಯಂತ ಹಲವರು ಇದೇ ವೃತ್ತಿಯನ್ನು ಮಾಡುತ್ತಿದ್ದಾರೆ. ಕೃಷಿಯೇ ಬೇಡ ಎಂದು ಕೈಕಟ್ಟಿ ಕುಳಿತ ನಮಗೆ ಈ ಯೋಜನೆ ಪುನರ್ಜನ್ಮ ನೀಡಿದಂತಾಗಿದೆ ಎಂದು ಪೆರ್ಡೂರು ಸಮೀಪದ ಕುದುಮುಂಜೆಯ ಜಯಲಕ್ಷ್ಮೀ ಹೆಗ್ಡೆ ತಿಳಿಸಿದರು. ಧರ್ಮಸ್ಥಳದ ಧರ್ಮಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸಾಗಿರುವ ಈ ಕೃಷಿಗೆ ಮತ್ತು ಕೃಷಿಕರಿಗೆ ಅವರೇ ಪ್ರೇರಣೆ. ಕೃಷಿಯಲ್ಲಿ ರೈತರು ತಮ್ಮನ್ನು ಹೆಚ್ಚು ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅನೇಕ ಯೋಜನೆಗಳನ್ನು ರೂಪಿಸಿದೆ. ಬೇಸಾಯದಲ್ಲಿ ನಷ್ಟ ಎನ್ನುವವರು ಗದ್ದೆ ಹಡಿಲು ಬಿಟ್ಟವರು ಬೇಸಾಯ ಮಾಡಲು ಮನಸ್ಸು ಮಾಡಿ ದ್ದಾರೆ ಅಂದರೆ ಇದೊಂದು ಉತ್ತಮ ಬೆಳವಣಿಗೆ. ಈ ವರ್ಷ ಉಡುಪಿ ತಾಲೂಕಿನಲ್ಲಿ 1 ಸಾವಿರ ಎಕ್ರೆ ಭತ್ತದ ಕೃಷಿ ಮಾಡಲಾಗಿದೆ. ಕೃಷಿಕರಿಗೆ ಬೇಕಾಗುವ ಸಕಲ ಸೌಲಭ್ಯ, ವ್ಯವಸ್ಥೆ, ತಾಂತ್ರಿಕತೆ ಅಧುನಿಕತೆಯ ಸಮಗ್ರ ಮಾಹಿತಿ ನೀಡಿ ಯೋಜನೆ ವತಿಯಿಂದ ಸಾಲ ಸೌಲಭ್ಯವನ್ನು ಒದಗಿಸಿ ಶೇ. 1ರಷ್ಟು ಅನು ದಾನವನ್ನು ನೀಡುತ್ತಿದ್ದೇವೆ. ಇದೆಲ್ಲ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿಯವರ ನಿರ್ದೇಶನದಂತೆ ಯೋಜನಾಧಿಕಾರಿ ರಾಮ ಎಂ. ಅವರ ಸಹಕಾರದಿಂದ ನಡೆಯುತ್ತಿದೆ ಎಂದು ತಾಲೂಕು ಕೃಷಿ ಮೇಲ್ವಿಚಾರಕ ಮಂಜುನಾಥ ತಿಳಿಸಿದರು.
Related Articles
ಕೃಷಿ ಕಾಯಕ ಕಷ್ಟ ಎನ್ನುತ್ತಿದ್ದ ನಾವು ಈಗ ಸುಲಭ ಎಂದು ಕೃಷಿ ಕೆಲಸ ಆರಂಭಿಸಿ ಹಡಿಲು ಬಿಟ್ಟ ಗದ್ದೆಗಳನ್ನು ಕೂಡ ಪಡೆದು ಬೇಸಾಯ ಮಾಡಲು ಆರಂಭಿಸಿದ್ದೇವೆ. ಮಾತ್ರವಲ್ಲದೆ ಯಂತ್ರಶ್ರೀ ಗದ್ದೆ ನಾಟಿಗೆ ಹೆಚ್ಚಿನ ಬೇಡಿಕೆ ಬಂದಿದೆ. ತಾಲೂಕಿನಾದ್ಯಂತ ಸುಮಾರು 22 ನಾಟಿಯಂತ್ರ ಇದ್ದು ಬಿಡುವಿಲ್ಲದೆ ಕೆಲಸ ಮಾಡುತ್ತಿದೆ. ಕಾರ್ತಿ ಬೆಳೆ ಮಾತ್ರವಲ್ಲದೆ ಸುಗ್ಗಿ ಬೆಳೆ ಕೂಡ ಮಾಡುತ್ತಿದ್ದೇವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದಕ್ಕಾಗಿ ಬಹಳಷ್ಟು ಸಾಲ ಸೌಲಭ್ಯ ಒದಗಿಸುತ್ತಿದೆ ಎಂದು ಸೇವಾ ಪ್ರತಿನಿಧಿ ಕಲ್ಯಾಣಪುರದ ಪ್ರೀತಿ ಅಭಿಪ್ರಾಯಪಟ್ಟರು.
Advertisement