ದಾಂಡೇಲಿ: ನ್ಯಾಯಾಲಯವು ನೀಡಿದ ನಿರ್ದೇಶನಗಳಲ್ಲಿ ಅನುಮತಿಸಿರುವ ಹಸಿರು ಪಟಾಕಿಗಳನ್ನು ಬಿಟ್ಟು, ಉಳಿದ ಯಾವುದೇ ಪಟಾಕಿಗಳನ್ನು ಮಾರಾಟ ಮಾಡದಂತೆ ಮತ್ತು ಬಳಸದಂತೆ ತಹಶೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತರಾದ ಆರ್.ಎಸ್.ಪವಾರ್ ಹಾಗೂ ಪಿಎಸೈ ಯಲ್ಲಪ್ಪ.ಎಸ್ ಹೇಳಿದ್ದಾರೆ.
ಭಾನುವಾರ ನಗರ ಪೊಲೀಸ್ ಠಾಣೆಯಲ್ಲಿ ಪಟಾಕಿ ಮಾರಾಟಗಾರರ ಜೊತೆ ನಡೆದ ಸಭೆಯಲ್ಲಿ ಮಾತನಾಡುತ್ತಾ, ಸಂಬಂಧಪಟ್ಟ ಇಲಾಖೆ/ ಪ್ರಾಧಿಕಾರಗಳಿಂದ ಅಧಿಕೃತ ಪರವಾನಗಿಯನ್ನು ಪಡೆದ ಮಾರಾಟಗಾರರು ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡಬೇಕು. ಈ ಮಾರಾಟ ಮಳಿಗೆಗಳನ್ನು ಸಂಬಂಧಪಟ್ಟ ಇಲಾಖೆ/ಪ್ರಾಧಿಕಾರದಿಂದ ನೀಡಿರುವ ಪರವಾನಗಿಯಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳದಲ್ಲಿ ಮಾತ್ರ ತಾತ್ಕಾಲಿಕ ‘ಹಸಿರು ಪಟಾಕಿ’ಅಂಗಡಿಗಳನ್ನು ಇಡಬೇಕು. ಬೇರೆ ಸ್ಥಳದಲ್ಲಿ ಮತ್ತು ದಿನಾಂಕಗಳಲ್ಲಿ ಅಂಗಡಿಯನ್ನು ತೆರೆಯಬಾರದು ಎಂದರು.
ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಪಟಾಕಿ ಮಳಿಗೆಗಳನ್ನು ಸ್ಥಾಪಿಸಲು ಸಂಬಂಧಿಸಿದ ಇಲಾಖೆ, ಪ್ರಾಧಿಕಾರಗಳು ಅನುಮತಿಸಬೇಕು. ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು. ಒಂದು ಮಾರಾಟ ಮಳಿಗೆಯಿಂದ ಮತ್ತೊಂದು ಮಾರಾಟ ಮಳಿಗೆಗೆ 6 ಮೀಟಲ್ ಅಂತರವಿರಬೇಕೆಂದು ಸರಕಾರದ ಸ್ಪಷ್ಟ ನಿರ್ದೇಶನವಿದೆ ಎಂದರು.
ಇದನ್ನೂ ಓದಿ: ಜ್ಞಾನ ಮಂದಿರಕ್ಕೆ ಆರ್ಥಿಕ ನೆರವು ನೀಡಿದ್ದ ಅಪ್ಪು
ಈ ನಿಟ್ಟಿನಲ್ಲಿ ಪಟಾಕಿಗಳನ್ನು ಮಾರಾಟ ಮಾಡಲು ನಗರದ ಕನ್ಯಾ ವಿದ್ಯಾಲಯದ ಆಟದ ಮೈದಾನದಲ್ಲಿ ನಗರ ಸಭೆಯ ವತಿಯಿಂದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಹೇಳಿದರು.
ಪಿಎಸೈ ಕಿರಣ್ ಪಾಟೀಲ ಸ್ವಾಗತಿಸಿದರು. ಸಂತೋಷ ಚಿನ್ನಣ್ಣವರ ವಂದಿಸಿದರು. ಆದಪ್ಪ ಧಾರವಾಡಕರ ನಿರೂಪಿಸಿದರು.