ಚಿಕ್ಕಮಗಳೂರು: ಮನೆ ಹಾಗೂ ಜಮೀನು ಬೇರೆ ಬೇರೆ ಕಡೆ ಇರುವ ರೈತರಿಗೆ ಹೊಲಗಳಿಗೆ ತೆರಳಲು ಅನುಕೂಲವಾಗುವಂತೆ ಹಸುರು ಪಾಸ್ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ 19 ವೈರಸ್ ತಡೆಗಟ್ಟಲು ಲಾಕ್‌ಡೌನ್ ವಿಧಿಸಲಾಗಿದೆ. ಆದರೆ ರೈತರು ಕೃಷಿ ಚಟುವಟಿಕೆ ನಡೆಸಲು ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ ಎಂದರು.
ರೈತರು ಬೆಳೆ ಮಾರಾಟ ಮಾಡಲು ಅನುಕೂಲವಾಗುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ತೆರೆಯುವಂತೆ ಸರಕಾರ ಸುತ್ತೋಲೆ ಹೊರಡಿಸಿದೆ. ಕೃಷಿ ಉತ್ಪನ್ನಗಳ ಸಾಗಾಟಕ್ಕಿದ್ದ ನಿರ್ಬಂಧ ವನ್ನೂ ಸಡಿಲಿಸಲಾಗಿದೆ. ರೈತರಿಗೆ ಅವಶ್ಯಕವಾಗಿ ಬೇಕಾಗುವ ಬೋರ್‌ವೆಲ್ ಬಿಡಿಭಾಗಗಳು, ಸ್ಪ್ರಿಂಕ್ಲರ್, ಪೈಪ್ ಅಂಗಡಿ-ಮಳಿಗೆಗಳನ್ನು ತೆರೆಯಲು ಸೂಚನೆ ನೀಡಲಾಗಿದೆ. ರೈತರು ಅವಶ್ಯ ವಸ್ತುಗಳನ್ನು ಖರೀದಿಸುವ ಸಂದರ್ಭ ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು ಎಂದು ತಿಳಿಸಿದರು.
ಹಲವೆಡೆ ರೈತರ ಮನೆ ಬೇರೆ ಕಡೆ ಇದೆ. ಜಮೀನು ಬೇರೆ ಕಡೆ ಇದೆ. ಜಮೀನುಗಳಿಗೆ ಹೋಗಿ ಕೃಷಿ ಚಟುವಟಿಕೆ ನಡೆಸಲು ಅನಾನುಕೂಲವಾಗುತ್ತಿರುವ ಬಗ್ಗೆ ಜನಪ್ರತಿನಿಧಿಗಳು ಗಮನಕ್ಕೆ ತಂದಿದ್ದಾರೆ. ಅಂತಹ ರೈತರಿಗೆ ತಾಲೂಕು ರೈತ ಸಂಪರ್ಕ ಕೇಂದ್ರ ಗಳಲ್ಲಿ ರೈತನ ಮನೆ ಮತ್ತು ಜಮೀನು ಸ್ಥಳವನ್ನು ನಮೂದಿಸಿ ಆ ಪ್ರದೇಶಕ್ಕೆ ಸೀಮಿತವಾಗಿಸಿ ಹಸುರು ಪಾಸ್ ನೀಡಲು ಅಧಿ ಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.