Advertisement

ಹಸಿರು ಕರ್ನಾಟಕ ನಿರ್ಮಿಸಿದ ಬಾಳೇಕುಂದ್ರಿ

02:28 PM May 09, 2022 | Team Udayavani |

ಬೆಳಗಾವಿ: ರಾಜ್ಯದಲ್ಲಿ ಅನೇಕ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಇಡೀ ಕರ್ನಾಟಕವನ್ನೇ ಹಸಿರು ಕರ್ನಾಟಕವನ್ನಾಗಿ ಮಾಡಿರುವ ಶ್ರೇಯಸ್ಸು ಎಸ್‌.ಜಿ. ಬಾಳೇಕುಂದ್ರಿ ಅವರಿಗೆ ಸಲ್ಲುತ್ತದೆ ಎಂದು ಗದಗ-ಡಂಬಳ ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

Advertisement

ನಗರದ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಎಸ್‌ ಜಿಬಿಐಟಿ ಸಭಾಂಗಣದಲ್ಲಿ ರವಿವಾರ ನಡೆದ ಎಸ್‌ .ಜಿ. ಬಾಳೇಕುಂದ್ರಿ ಅವರ ಜನ್ಮ ಶತಮಾನೋತ್ಸವ ವರ್ಷಾಚರಣೆಯ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಖಾನಾಪುರದ ಮಹಾದಾಯಿ ನದಿ ನೀರನ್ನು ಮಲಪ್ರಭಾ ನದಿಗೆ ಹರಿಸಲು ಬಾಳೇಕುಂದ್ರಿ ಅವರು ಆಗಿನ ಕಾಲದಲ್ಲಿಯೇ ಅನೇಕ ಯೋಜನೆ ರೂಪಿಸಿದ್ದರು. ಆದರೆ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಇಂದಿಗೂ ಅದು ಕಾರ್ಯಗತವಾಗಿಲ್ಲ. ಬಾಳೇಕುಂದ್ರಿ ಅವರ ಯೋಜನೆಗಳಿಂದ ಲಕ್ಷಾಂತರ ಹೆಕ್ಟೇರ್‌ ಜಮೀನಿಗೆ ನೀರಾವರಿ ಸೌಲಭ್ಯ ಲಭಿಸಿದೆ. ಕೋಟ್ಯಂತರ ಜನರ ಬದುಕು ಹಸನಾಗಿದೆ. ಬಾಳೇಕುಂದ್ರಿ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದರು. ಇದರಿಂದ ಇಡೀ ಭಾಗ ನೀರಾವರಿ ಪ್ರದೇಶ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.

ನೀರಾವರಿ ತಜ್ಞ ದಿ. ಎಸ್‌.ಜಿ. ಬಾಳೇಕುಂದ್ರಿ ಅವರ ಶ್ರಮದಿಂದ ಸಮೃದ್ಧ ಕರ್ನಾಟಕ ನಿರ್ಮಾಣವಾಗಿದೆ. ಸರ್ಕಾರ ಈ ವರ್ಷದಲ್ಲಿಯೇ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕು. ಉತ್ತರ ಕರ್ನಾಟಕದಲ್ಲಿ ಮೊದಲು ಬೇಸಿಗೆ ಕಾಲ ಮತ್ತು ಬರಗಾಲ ಮಾತ್ರ ಇತ್ತು. ಇಂಥ ಸ್ಥಿತಿಯಲ್ಲಿ ಬಾಳೇಕುಂದ್ರಿ ಅನೇಕ ನೀರಾವರಿ ಯೋಜನೆ ಅನುಷ್ಠಾನಗೊಳಿಸಿ ಸಮೃದ್ಧಗೊಳಿಸಿದರು ಎಂದರು.

ಬಾಳೇಕುಂದ್ರಿ ಜನ್ಮಶತಮಾನೋತ್ಸವ ಅಂಗವಾಗಿ ವರ್ಷವಿಡೀ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸಮಾರೋಪ ಸಮಾರಂಭಕ್ಕೆ ರಾಷ್ಟ್ರಪತಿಗಳನ್ನು ಆಹ್ವಾನಿಸಲು ಚಿಂತನೆ ನಡೆಸಿದ್ದೇವೆ. ಬಾಳೇಕುಂದ್ರಿ ಅನೇಕ ವಿದ್ಯುತ್‌ ಉತ್ಪಾದನೆ ಯೋಜನೆಗಳ ಮೂಲಕ ಕತ್ತಲೆಯಲ್ಲಿದ್ದ ಕರ್ನಾಟಕಕ್ಕೆ ಬೆಳಕು ನೀಡಿದ್ದಾರೆ. ಅವರ ಹೆಸರಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

Advertisement

ನವದೆಹಲಿಯ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಡಾ| ಅನಿಲ್‌ ಸಹಸ್ರಬುದ್ಧೆ ಮಾತನಾಡಿ, ಎಸ್‌.ಜಿ. ಬಾಳೇಕುಂದ್ರಿ ಅವರ ಹೆಸರು ಸಿವಿಲ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ ಅತ್ಯಂತ ಪ್ರಿಯವಾದ ಹೆಸರು. ವಿಶ್ವೇಶ್ವರಯ್ಯ ಅವರ ವ್ಯಾಸಂಗ ಪೂರ್ಣಗೊಳಿಸಿದ 60 ವರ್ಷಗಳ ನಂತರ ಇಂಜಿನಿಯರಿಂಗ್‌ ವ್ಯಾಸಂಗ ಮಾಡಿ ಸುಮಾರು 500 ಡ್ಯಾಂಗಳ ನಿರ್ಮಿಸಿದ ನೀರಾವರಿ ಹರಿಕಾರ ಬಾಳೇಕುಂದ್ರಿಯಾಗಿದ್ದಾರೆ. ಬಾಳೇಕುಂದ್ರಿ ನಮ್ಮನ್ನು ಭೌತಿಕವಾಗಿ ಅಗಲಿರಬಹುದು. ಆದರೆ ಅವರ ಕೆಲಸಗಳು ಇನ್ನೂ ನೂರು ವರ್ಷವಾದರೂ ಅಳಿಯುವುದಿಲ್ಲ ಎಂದರು.

ಅಪರೂಪದ ನೀರಾವರಿ ತಜ್ಞ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅವರು ನಿರ್ಮಿಸಿದ ಜಲಾಶಯಗಳು ಮತ್ತು ನೀರಾವರಿ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ. ಇಂದು ಕರ್ನಾಟಕ ಸುಭದ್ರವಾಗಿದೆ. ಎಸ್‌ಜಿಬಿಐಟಿ ಸ್ವಾಯತ್ತ ಮಹಾವಿದ್ಯಾಲಯ ಹಾಗೂ ಸ್ವತಂತ್ರ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಲಿ. ಇದಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ವಿಟಿಯು ಕುಲಪತಿ ಪ್ರೊ. ಕರಿಸಿದ್ದಪ್ಪ ಅವರು ಎಸ್‌.ಜಿ.ಬಾಳೇಕುಂದ್ರಿ ಅಧ್ಯಯನ ಪೀಠವನ್ನು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸುವ ಭರವಸೆ ನೀಡಿದರು. ಪುಣೆಯ ರಾಜೇಂದ್ರ ಹಿರೇಮಠ ಅವರು ಬಾಳೇಕುಂದ್ರಿ ಕೊಡುಗೆ ಸ್ಮರಿಸಿದರು. ಎಸ್‌.ಜಿ. ಬಾಳೇಕುಂದ್ರಿ ಅವರ ಜನ್ಮಶತಮಾನೋತ್ಸವ ನಿಮಿತ್ತ ಪ್ರಕಟಿಸಿರುವ ಲಿಂಗಾಯತ ದರ್ಶನ ವಿಶೇಷ ಸಂಚಿಕೆಯನ್ನು ಲೋಕಾರ್ಪಣೆ ಮಾಡಲಾಯಿತು.

ಎಸ್‌ಜಿಬಿಐಟಿ ಆಡಳಿತ ಮಂಡಳಿ ಕಾರ್ಯಾದ್ಯಕ್ಷ ಡಾ. ಎಫ್‌.ವಿ. ಮಾನ್ವಿ ಅಧ್ಯಕ್ಷತೆ ವಹಿಸಿದ್ದರು. ನಾಗನೂರು ರುದ್ರಾಕ್ಷಿಮಠದ ಡಾ. ಶ್ರೀ ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ. ರಾಜೇಂದ್ರ ಹಿರೇಮಠ, ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು. ಪ್ರಾಚಾರ್ಯ ಡಾ. ಬಿ.ಆರ್‌. ಪಟಗುಂಡಿ ಸ್ವಾಗತಿಸಿದರು. ಮಂಜುನಾಥ ಮತ್ತು ಅನಿತಾ ನಿರೂಪಿಸಿದರು. ಆರ್‌.ಎಂ. ಗಲಗಲಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next