ಹಾಸನ: ಮಾನವ-ಪ್ರಕೃತಿ ನಡುವಿನ ಸಂಘರ್ಷದಿಂದ ಹಸಿರು ಮಾಯವಾಗುತ್ತಿದೆ. ಈಗಿರುವ ಹಸಿರನ್ನಾದರೂ ಉಳಿಸಿಕೊಳ್ಳದಿದ್ದರೆ ಮರುಭೂಮಿ ಆದೀತು. ರೈತರಲ್ಲಿ ಜಾಗೃತಿ ಮೂಡಿಸಿ ಹಸಿರು ಉಳಿಸಬೇಕು ಬೆಂಗಳೂರು ಕೃಷಿ ವಿಜ್ಞಾನಿ ಬೆಂಗಳೂರಿನ ಡಾ.ಮಳಲೀಗೌಡ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪರಿಸರ, ಸುಸ್ಥಿರ ಕೃಷಿ ಮತ್ತು ಸಂರಕ್ಷಣೆ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಹಳ್ಳಿಗಳನ್ನು ಉದಾಸೀನ ಮಾಡುತ್ತಿದ್ದೇವೆ. ಹಳ್ಳಿಗಳಿಗೆ ಹೋಗಿ ಸಂಶೋಧನೆ ಮಾಡಬೇಕಾದ ತರ್ತು ಅಗತ್ಯವಿದೆ.
ನಾವು ಭರದಿಂದ ಬರವನ್ನು ಸೃಷ್ಟಿಸುತ್ತಿದ್ದೇವೆಯೇ ಹೊರತು ಇರುವ ಬರವನ್ನು ಹೋಗಲಾಡಿಸಲು ಹಸಿರು ಸೃಷ್ಟಿಸುವ ಕೆಲಸ ಮಾಡುತ್ತಿಲ್ಲ. ಕೃಷಿಯೊಂದಿಗೆ ಮರಗಿಡಗಳನ್ನು ಬೆಳೆಸಿ ವೈವಿಧ್ಯಮಯ ಕೃಷಿ ಪದ್ದತಿ ಅನುಸರಿಸುವವಂತೆ ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಪರಿಸರ ನಿರ್ಲಕ್ಷಿಸದಿರಿ: ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ ಕುರಿತು ವಿಷಯ ಮಂಡಿಸಿದ ಹಾಸನದ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ಮಧುವನ ಶಂಕರ್ ಅವರು, ನಮ್ಮ ಸುತ್ತ ಮುತ್ತಲಿನ ಚರಾಚರ ವಸ್ತುಗಳೆಲ್ಲಾ ಪರಿಸರದ ಭಾಗ.
ಪರಿಸರವನ್ನು ಕಡೆಗಣಿಸಿ ಮಾನವ ಬದುಕಲಾರ. ಸಾಹಿತ್ಯದಲ್ಲಿ ಪರಿಸರಕ್ಕೇ ಮಹತ್ವದ ಸ್ಥಾನ. ಪಂಪನ ಬನವಾಸಿ ದೇಶ ಇಂದು ನಿಜವಾಗಿ ಇದೇಯೇ ಎಂಬುದು ಈಗ ಜಿಜ್ಞಾಸೆಯ ವಿಷಯ. ಕನ್ನಡ ನಾಡಿನ ಬಹು ಮುಖ್ಯ ಘಟ್ಟ ಎಂದರೇ ಪಶ್ಚಿಮ ಘಟ್ಟ, ಇನ್ನೋಂದು ಮಲೆನಾಡು. ಇಂದು ಮಲೆನಾಡು ಇಲ್ಲ ಎಂದು ವಿಷಾದಿಸಿದರು.
ಪರಿಸರ ವಾದಿ ಎಚ್.ಎ. ಕಿಶೋರ್ ಕುಮಾರ್ ವಿಷಯ ಮಂಡಿಸಿದರು. ಹಿಂದೂಸ್ತಾನ್ ಪೆಟ್ರೋಲಿಯಂ ನಿರ್ದೇಶಕ ರಾಮದಾಸ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಸಮ್ಮೇಳನಾಧ್ಯಕ್ಷ ಎನ್.ಎಲ್. ಚನ್ನೇಗೌಡ, ಕನ್ನಡ ಉಪನ್ಯಾಸಕ ಸೀ.ಚ. ಯತೀಶ್ವರ್ ಮತ್ತಿತರರು ಪಾಲ್ಗೊಂಡಿದ್ದರು. ಕಸಾಪ ಗೌರವ ಕಾರ್ಯದರ್ಶಿ ಸೋಮನಾಯಕ್ ನಿರೂಪಿಸಿದರು.