Advertisement

ವಿಶೇಷ ಡೆಮು ರೈಲು ಸೇವೆಗೆ ಹಸಿರು ನಿಶಾನೆ

06:35 AM Feb 04, 2019 | Team Udayavani |

ಬೆಂಗಳೂರು: ನಗರದ ವೈಟ್‌ಫೀಲ್ಡ್‌ನಿಂದ ಬಾಣಸವಾಡಿ ನಡುವೆ ವಿಶೇಷ ಡೆಮು ರೈಲು ಸೇವೆಗೆ ಭಾನುವಾರ ಚಾಲನೆ ದೊರೆಯಿತು. ಈ ಮೂಲಕ ಬಹುತೇಕರಿಗೆ ಸಂಚಾರದಟ್ಟಣೆ ಕಿರಿಕಿರಿಯಿಂದ ಕೊಂಚ ಮುಕ್ತಿ ಸಿಗಲಿದೆ. ವಾರದ ಆರು ದಿನ (ಭಾನುವಾರ ಹೊರತುಪಡಿಸಿ) ಜನರಿಗೆ ಈ ಸೇವೆ ಲಭ್ಯವಾಗಲಿದೆ.

Advertisement

ಬೆಳಗ್ಗೆ 7.50ಕ್ಕೆ ವೈಟ್‌ಫೀಲ್ಡ್‌ನಿಂದ ಹಾಗೂ ಸಂಜೆ 6.25ಕ್ಕೆ ಬಾಣಸವಾಡಿಯಿಂದ ಈ ರೈಲು ಹೊರಡಲಿದೆ. ಸೋಮವಾರದಿಂದಲೇ ಈ ಸೇವೆ ಜನರಿಗೆ ಲಭ್ಯವಾಗಲಿದೆ. ಇದರಿಂದ ಆರಂಭದಲ್ಲೇ ಸುಮಾರು ಸಾವಿರ ಜನರಿಗೆ ಅನುಕೂಲ ಆಗುವ ನಿರೀಕ್ಷೆ ಇದೆ. ಹೂಡಿ, ಕೆ.ಆರ್‌.ಪುರ, ಬೈಯಪ್ಪನಹಳ್ಳಿ ಸುತ್ತಮುತ್ತಲಿನ ಜನರಿಗೂ ನೆರವಾಗಲಿದೆ. ಸಂಸದ ಪಿ.ಸಿ.ಮೋಹನ್‌ ಈ ಸೇವೆಗೆ ಹಸಿರು ನಿಶಾನೆ ತೋರಿಸಿದರು.

ಈಗಾಗಲೇ ಉದ್ದೇಶಿತ ಮಾರ್ಗದಲ್ಲಿ ಎರಡು ಡೆಮು ರೈಲುಗಳಿವೆ (ಬೆಳಗ್ಗೆ 9 ಮತ್ತು 10 ಗಂಟೆಗೆ). ಸುಮಾರು ಏಳೆಂಟು ಸಾಮಾನ್ಯ ರೈಲುಗಳೂ ಬಂಗಾರಪೇಟೆಯಿಂದ ಹೊರಟು ವೈಟ್‌ಫೀಲ್ಡ್‌ ಮೂಲಕ ಹಾದುಹೋಗುತ್ತವೆ. ಆದರೆ, ವೈಟ್‌ಫೀಲ್ಡ್‌ನಿಂದ ಬಾಣಸವಾಡಿಗೆ ಬೆಳಗ್ಗೆ 8ರ ಒಳಗೆ ಯಾವುದೇ ರೈಲು ಸೇವೆ ಇರಲಿಲ್ಲ. ಅದೇ ರೀತಿ, 5 ಗಂಟೆಯ ನಂತರ ಬಾಣಸವಾಡಿಯಿಂದ ವೈಟ್‌ಫೀಲ್ಡ್‌ಗೂ ರೈಲುಗಳಿರಲಿಲ್ಲ.

ಈಗ ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ರೈಲು ಕಲ್ಪಿಸಲಾಗಿದೆ. ಇದರಿಂದ ಕೇವಲ 40 ನಿಮಿಷದಲ್ಲಿ ಜನ ಬಾಣಸವಾಡಿ ತಲುಪಲಿದ್ದಾರೆ. ಇದು ಬೈಯಪ್ಪನಹಳ್ಳಿಗೆ ಸಂಪರ್ಕ ಕಲ್ಪಿಸುವುದರಿಂದ ಪ್ರಯಾಣಿಕರು ಅಲ್ಲಿಂದ ಮೆಟ್ರೋ ಮಾರ್ಗವಾಗಿ ನಗರದ ವಿವಿಧ ಭಾಗಗಳಿಗೆ ತೆರಳಬಹುದು. ಈ ವಿಶೇಷ ಡೆಮು ರೈಲಿನ ಪ್ರಯಾಣ ದರ 10 ರೂ. ನಿಗದಿಪಡಿಸಲಾಗಿದೆ.

ಸಂಜೆ 7 ಗಂಟೆ ನಂತರವೂ ಬೆಂಗಳೂರು ನಗರದಿಂದ ವೈಟ್‌ಫೀಲ್ಡ್‌ಗೆ ಇದೇ ಮಾದರಿಯ ಸೇವೆ ಕಲ್ಪಿಸಬೇಕು. ಅಲ್ಲದೆ, ಬಾಣಸವಾಡಿಗೆ ಸೀಮಿತವಾಗಿರುವ ಈ ವಿಶೇಷ ಡೆಮು ರೈಲು ಸೇವೆಯನ್ನು ಯಶವಂತಪುರವರೆಗೆ ವಿಸ್ತರಿಸಬೇಕು ಎಂದೂ ಪ್ರಯಾಣಿಕರು ಒತ್ತಾಯಿಸಿದ್ದಾರೆ. ವಿಶೇಷ ಡೆಮು ಸೇವೆಗೆ ಚಾಲನೆ ನೀಡಿ ಮಾತನಾಡಿದ ಸಂಸದ ಪಿ.ಸಿ. ಮೋಹನ್‌, ಉಪನಗರ ರೈಲು ಯೋಜನೆಯನ್ನು ತ್ವರಿತ ಗತಿಯಲ್ಲಿ ಜಾರಿಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

Advertisement

ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರದ ಸ್ಪಂದನೆ ದೊರೆಯಬೇಕಿದೆ. ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದರೂ, 19 ಷರತ್ತುಗಳನ್ನು ವಿಧಿಸಿದೆ. ಈ ಷರತ್ತುಗಳನ್ನು ಕೈಬಿಟ್ಟು, ಯೋಜನೆ ಅನುಷ್ಠಾನಕ್ಕೆ ಅಗತ್ಯ ಇರುವ ಎಸ್‌ಪಿವಿ (ವಿಶೇಷ ಉದ್ದೇಶ ವಾಹನ) ರಚನೆಗೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಶಾಸಕರಾದ ಎಸ್‌.ರಘು ಹಾಗೂ ಅ.ದೇವೇಗೌಡ ಉಪಸ್ಥಿತರಿದ್ದರು.

ಅಟೋಮ್ಯಾಟಿಕ್‌ ಸಿಗ್ನಲಿಂಗ್‌ ಸೇವೆಗೆ ಮುಹೂರ್ತ ನಿಗದಿ: ಬಹುನಿರೀಕ್ಷಿತ ಕಂಟೋನ್‌ಮೆಂಟ್‌-ವೈಟ್‌ಫೀಲ್ಡ್‌ ನಡುವೆ ಅಟೋಮ್ಯಾಟಿಕ್‌ ಸಿಗ್ನಲಿಂಗ್‌ ಸೇವೆಗೆ ಮುಹೂರ್ತ ನಿಗದಿಯಾಗಿದ್ದು, ಫೆ.9ರಂದು ಮೊದಲ ಹಂತ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ. ಹಂತ-ಹಂತವಾಗಿ ಇದನ್ನು ಜಾರಿಗೊಳಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದ್ದು, ಮೊದಲಿಗೆ ಕಂಟೋನ್‌ಮೆಂಟ್‌, ಕೆಲವು ದಿನಗಳ ಅಂತರದಲ್ಲಿ ಬೈಯಪ್ಪನಹಳ್ಳಿ ಹಾಗೂ ಮತ್ತೆ ಕೆಲವು ದಿನಗಳ ಬಳಿಕ ಕೆ.ಆರ್‌.ಪುರ ಮತ್ತು ವೈಟ್‌ಫೀಲ್ಡ್‌ನಲ್ಲಿ ಜಾರಿಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಶೇಷ ಡೆಮು ರೈಲಿನ ವೇಳಾಪಟ್ಟಿ
-ವೈಟ್‌ಫೀಲ್ಡ್‌ನಿಂದ ಹೊರಡುವ ಸಮಯ    ಬೆಳಗ್ಗೆ 7.50
-ಬಾಣಸವಾಡಿ ತಲುಪುವ ಸಮಯ    ಬೆಳಗ್ಗೆ 8.30
-ಬಾಣಸವಾಡಿಯಿಂದ ಹೊರಡುವ ಸಮಯ    ಸಂಜೆ 6.25 
-ವೈಟ್‌ಫೀಲ್ಡ್‌ ತಲುಪುವ ಸಮಯ    ಸಂಜೆ 7.20

Advertisement

Udayavani is now on Telegram. Click here to join our channel and stay updated with the latest news.

Next