Advertisement

ಸ್ಪಷ್ಟತೆಯಿಲ್ಲದ ಹಸಿರು ಪಟಾಕಿ

02:06 PM Oct 27, 2019 | Suhan S |

ಹಾವೇರಿ: ಪರಿಸರ ಸ್ನೇಹಿ ದೀಪಾವಳಿ ಆಚರಣೆ ಬಗ್ಗೆ ಮಾಧ್ಯಮಗಳ ಮೂಲಕ ಜಿಲ್ಲಾಡಳಿತ ಒಂದಿಷ್ಟು ಜಾಗೃತಿ ಮೂಡಿಸಿದೆಯಾದರೂ “ಹಸಿರು ಪಟಾಕಿ’ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದೇ ಇರುವುದರಿಂದ ಅದರ ಬಳಕೆ ಬಗ್ಗೆ ಯಾವುದೇ ಜಾಗೃತಿ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆದಿಲ್ಲ.

Advertisement

ಹೆಚ್ಚು ಶಬ್ಧ ಹಾಗೂ ಹೊಗೆಯಾಗುವ ಕಾರಣವಾಗುವ ರಾಸಾಯನಿಕಗಳನ್ನು ಹೊರಗಿಟ್ಟು ಪಟಾಕಿ ತಯಾರಿಸುವಂತೆ ಸರ್ವೋಚ್ಚ ನ್ಯಾಯಾಲಯ ನಿರ್ದೇಶನ ನೀಡಿದ್ದು, ಈ ನಿರ್ದೇಶನದಂತೆ ಉತ್ಪಾದಿಸಿದ ಪಟಾಕಿಗಳನ್ನೇ “ಹಸಿರು ಪಟಾಕಿ’ ಎಂದು ಕರೆಯಲಾಗುತ್ತದೆ. ಈ ರೀತಿಯ ಪಟಾಕಿ ತಯಾರಿಸಲು ದೇಶದ 27 ಕಂಪನಿಗಳು ಪರವಾನಗಿ ಪಡೆದಿವೆ. ಆದರೆ,ಅವು ಉತ್ಪಾದಿಸಿದ ಪಟಾಕಿಗಳಲ್ಲಿ “ಹಸಿರು ಪಟಾಕಿ’ ಯಾವುದು ಎಂಬುದನ್ನು ಸಾರ್ವಜನಿಕರು ಸುಲಭವಾಗಿ ಗುರುತಿಸಲು ಈವರೆಗೆ ಯಾವುದೇ ಕ್ರಮ ಆಗಿಲ್ಲ. ಹಸಿರು ಪಟಾಕಿ ಬಗ್ಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರಲ್ಲಿ ಸ್ಪಷ್ಟತೆ ಇಲ್ಲ. ಹೀಗಾಗಿ ದೀಪಾವಳಿಯನ್ನು ಈ ಬಾರಿ ಪರಿಸರ ಸ್ನೇಹಿಯಾಗಿ ಆಚರಿಸಿ ಎಂದಷ್ಟೇ ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ.

ಈ ಸಲ ನಿರಂತರ ಮಳೆ ಇರುವುದರಿಂದ ಪಟಾಕಿ ಸದ್ದು ಸಹಜವಾಗಿಯೇ ಕಡಿಮೆಯಾಗಲಿದ್ದು, ಪಟಾಕಿ ಬಳಕೆ ಇನ್ನೂ ಕ್ಷೀಣವಾಗಬೇಕಿದೆ. ಪಟಾಕಿ ಬಳಸುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಕಣ್ಣು ಕಳೆದುಕೊಂಡು ಇಡೀ ಜೀವನವನ್ನೇ ಕತ್ತಲಲ್ಲಿ ಕಳೆಯಬೇಕಾಗುತ್ತದೆ ಎಂಬ ಮುನ್ನೆಚ್ಚರಿಕೆಯನ್ನು ಜಿಲ್ಲಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಪರಿಸರ ಅಧಿಕಾರಿಗಳು ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಪರಿಸರಸ್ನೇಹಿ ಆಚರಣೆಗೆ ಸಲಹೆ: ಹಬ್ಬದ ಸಮಯದಲ್ಲಿ ಶಬ್ದಮಾಲಿನ್ಯ, ವಾಯುಮಾಲಿನ್ಯ ಮತ್ತು ಘನ ತ್ಯಾಜ್ಯ ಉತ್ಪತ್ತಿಯಾಗುವುದು ಸಾಮಾನ್ಯವಾಗಿರುತ್ತದೆ. ಸಾರ್ವಜನಿಕರು ಪಟಾಕಿಗಳನ್ನು ಸಾಧ್ಯವಿದ್ದಷ್ಟು ಕಡಿಮೆ ಬಳಸಬೇಕು. 125 ಡೆಸಿಬಲ್‌ ಗೂ(ಶಬ್ದದ ಪ್ರಮಾಣ) ಮೇಲ್ಪಟ್ಟ ಪಟಾಕಿಗಳ ಸಿಡಿತ ನಿಷೇಧಿಸಲಾಗಿದೆ. ಸರ್ವೋತ್ಛ ನ್ಯಾಯಾಲಯ ಆದೇಶದನ್ವಯ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಬಹುದಾಗಿದೆ. ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆ ನಡುವೆ ಪಟಾಕಿ ಹಚ್ಚುವುದು ಅಪರಾಧ. ಸಾರ್ವಜನಿಕರು ಪಟಾಕಿ ಖರೀದಿಸುವ ಮುನ್ನ ಗುಣಮಟ್ಟ ಖಾತ್ರಿ ಮಾಡಿಕೊಳ್ಳಬೇಕು ಹಾಗೂ ಹಬ್ಬದ ಆಚರಣೆಯಲ್ಲಿ ಬೆಳಕು ಪ್ರಧಾನವಾಗಿರಲಿ ಎಂದು ಸಲಹೆ ತಿಳಿಸಿದ್ದಾರೆ.

ಆಸ್ಪತ್ರೆ ಹಾಗೂ ವೃದ್ಧಾಶ್ರಮಗಳ ಹತ್ತಿರ ಪಟಾಕಿ ಹಚ್ಚಬಾರದು. ಗಿಡ ಮರಗಳು ಮತ್ತು ಪ್ರಾಣಿ ಪಕ್ಷಿಗಳಿಗೆ ಯಾವುದೇ ಹಾನಿಯಾಗದಂತೆ ಎಚ್ಚರ ವಹಿಸಬೇಕು. ಪಟಾಕಿಗಳು ಹೊರ ಸೂಸುವ ವಿಷಯುಕ್ತ ಅನಿಲ ಆರೋಗ್ಯ ಸಂಬಂಧಿ ತ ಕಾಯಿಲೆಯನ್ನುಂಟು ಮಾಡುತ್ತದೆಯಲ್ಲದೇ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತದೆ. ಪಟಾಕಿ ಸಿಡಿತದ ನಂತರ ಉತ್ಪತ್ತಿಯಾಗುವ ಘನ ತ್ಯಾಜ್ಯಗಳ ಹೆಚ್ಚಳದಿಂದ ನಗರದ ಶುಚಿತ್ವದ ಸಮಸ್ಯೆಯೂ ಉಲ್ಬಣವಾಗುತ್ತದೆ. ಆದ್ದರಿಂದ ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಆದ್ಯತೆ ನೀಡಬೇಕೆಂದು ಜಿಲ್ಲಾ ಧಿಕಾರಿ ಕೃಷ್ಣ ಭಾಜಪೇಯಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಪರಿಸರ ಅಧಿಕಾರಿ ಎಂ.ಎಸ್‌. ಮಹೇಶ್ವರಪ್ಪ ಮನವಿ ಮಾಡಿದ್ದಾರೆ.

Advertisement

 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next