ಬೆಳಗಾವಿ: ಬೆಳಕಿನ ಹಬ್ಬ ದೀಪಾವಳಿಗೆ ಜನರು ಸಿಡಿಮದ್ದು, ಪಟಾಕಿ ಸಿಡಿಸಿ ಹಬ್ಬ ಆಚರಿಸುತ್ತಿರುತ್ತಾರೆ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿರುವುದನ್ನು ಮನಗಂಡ ಸರ್ಕಾರ ಹಸಿರು ಪಟಾಕಿಗಳ ಮಾರಾಟಕ್ಕೆ ಆದೇಶ ಹೊರಡಿಸಿದೆ. ಆದರೆ ಇನ್ನೂವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಹಸಿರು ಪಟಾಕಿ ಸದ್ಯ ಕಾಗದಕ್ಕಷ್ಟೇ ಸೀಮಿತೊಂಡಿದೆ.
ದೀಪಾವಳಿ ಹಬ್ಬ ಬೆಳಕಿನ ಹಬ್ಬ ಆಗಿರಲಿ ಎಂದು ಜನರು ಪಟಾಕಿಗಳನ್ನು ಹೊಡೆದು ಸಂಭ್ರಮಿಸುತ್ತಾರೆ. ಈ ಸಲ ಕೇಂದ್ರ ಸರ್ಕಾರ ಹಸಿರು ಪಟಾಕಿಗಳನ್ನು ಮಾರಾಟಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇದರಿಂದ ಪರಿಸರ ಮಾಲಿನ್ಯ ಆಗುವುದಿಲ್ಲ. ರಾಸಾಯನಿಕ ಪದಾರ್ಥಗಳನ್ನು ಬಳಸದೇ ತಯಾರಿಸಿರುವ ಈ ಪಟಾಕಿಯಿಂದ ವಾಯು ಮಾಲಿನ್ಯ ತಡೆಯಬಹುದು. ಈಗಾಗಲೇ ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದ್ದರೂ ಬೆಳಗಾವಿಯ ಮಾರುಕಟ್ಟೆಗಳಲ್ಲಂತೂ ಇನ್ನೂ ಇವು ಸಿಗುತ್ತಿಲ್ಲ. ಹಸಿರು ಪಟಾಕಿಗಳಲ್ಲಿ ಯಾವುದೇ ರಾಸಾಯನಿಕ ಇರುವುದಿಲ್ಲ. ಬೇರಿಯಮ್ ಸಲ್ಫೆಟ್ ಬಳಕೆ ಮಾಡಿದ್ದರಿಂದ ವಾಯು ಮಾಲಿನ್ಯ ಆಗುವುದಿಲ್ಲ. ಹೀಗಾಗಿ ಸರ್ಕಾರ ಇದನ್ನೇ ಕಟ್ಟುನಿಟ್ಟಾಗಿ ಮಾರಾಟ ಮಾಡುವಂತೆ ಆದೇಶಿಸಿದೆ. ಆದರೆ ಬೆಳಗಾವಿಯಲ್ಲಿರುವ ಸುಮಾರು 30ಕ್ಕೂ ಹೆಚ್ಚು ಲೈಸನ್ಸ್ ಹೊಂದಿರುವ ಅಂಗಡಿಗಳಲ್ಲಿ ಹಸಿರು ಪಟಾಕಿಗಳು ಸಿಗುತ್ತಿಲ್ಲ.
ಹಳೆಯ ಪಟಾಕಿಗಳದ್ದೇ ಸದ್ದು: ಕೆಲವೇ ದಿನಗಳ ಹಿಂದೆಯಷ್ಟೇ ಸರ್ಕಾರದ ಆದೇಶ ಬಂದಿರುವುದರಿಂದ ನಾವು ಹಳೆಯ ಪಟಾಕಿಗಳನ್ನೇ ಖರೀದಿಸಿದ್ದೇವೆ. ಜತೆಗೆ ಕಳೆದ ವರ್ಷದ ಸಂಗ್ರಹ ಕೂಡ ನಮ್ಮ ಬಳಿ ಇದೆ. ಈಗ ದಿಢೀರ್ ಆದೇಶ ಹೊರಡಿಸಿದರೆ ಏನು ಮಾಡುವುದು. ಈ ವರ್ಷ ಮಳೆ ಹಾಗೂ ಪ್ರವಾಹದಿಂದಾಗಿ ಮಾರುಕಟ್ಟೆ ಅಷ್ಟೊಂದು ಜೋರು ಪಡೆದಿಲ್ಲ. ಮುಂದಿನ ಗಣಪತಿ ಹಬ್ಬದಿಂದಲೇ ಈ ಆದೇಶ ಜಾರಿ ಆಗಬಹುದು ಎನ್ನುತ್ತಾರೆ ಪಟಾಕಿ ವ್ಯಾಪಾರಸ್ಥರು.
ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರದವರು ಹಸಿರು ಪಟಾಕಿಯನ್ನು ರೂಪಿಸಿದ್ದಾರೆ. ಪಟಾಕಿ ಸಿಡಿ ಮದ್ದುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ ಬೇರಿಯಮ್ ಸಲ್ಫೆಟ್ ಬಳಕೆ ಮಾಡಿ ಪಟಾಕಿಗಳನ್ನು ತಯಾರಿಸಿದ್ದಾರೆ. ಈಗಾಗಲೇ ದೇಶಾದ್ಯಂತ ಇವು ಕೆಲ ಮಾರುಕಟ್ಟೆಗಳಲ್ಲಿ ಲಭ್ಯ ಇವೆ. ಕರ್ನಾಟಕದಲ್ಲಿ ಈ ಬಗ್ಗೆ ಹೆಚ್ಚು ಜಾಗೃತಿ ಇಲ್ಲದ್ದಕ್ಕೆ ಸಂಗ್ರಹ ಇಲ್ಲದಂತಾಗಿದೆ.
ಅರಿವು ಕಾರ್ಯ: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಪರಿಸರ ಮಾಲಿನ್ಯ ಆಗದಂತೆ ತಡೆಯಲು ಹಸಿರು ಪಟಾಕಿಗಳ ಬಳಕೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಈ ಜಾಗೃತಿ ಕಾರ್ಯಕ್ರಗಳು ನಡೆದರೆ ಸಂಪೂರ್ಣವಾಗಿ ಹಸಿರು ಪಟಾಕಿಗಳೇ ಮಾರುಕಟ್ಟೆಯಲ್ಲಿ ಲಭ್ಯ ಆಗುವುದರ ಜತೆಗೆ ಜನರೂ ಇವುಗಳನ್ನೇ ಖರೀದಿಸಿ ಪರಿಸರ ಸಂರಕ್ಷಣೆಗೆ ಕೈ ಜೋಡಿಸುವುದರಲ್ಲಿ ಸಂದೇಹವಿಲ್ಲ. ನಗರದ ಕಾಲೇಜು ರಸ್ತೆಯ ಸನ್ಮಾನ ಹೊಟೇಲ್ ಹಿಂಬದಿ, ಮಹಾದ್ವಾರ ರೋಡ್‌ನ ಮೈದಾನ, ಟಿಳಕವಾಡಿ, ಶಹಾಪುರ ಭಾಗದಲ್ಲಿ ಪಟಾಕಿ ಮಾರಾಟಗಳ ಅಂಗಡಿಗಳು ಇವೆ.
ಆಸ್ಪತ್ರೆಗಳಲ್ಲಿದೆ ವ್ಯವಸ್ಥೆ: ಪಟಾಕಿ ಸೇರಿದಂತೆ ಇನ್ನಿತರ ದುರಂತ ಸಂಭವಿಸಿದರೆ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ವಿಶೇಷವಾಗಿ ಇದಕ್ಕಾಗಿಯೇ ಯಾವುದೇ ವ್ಯವಸ್ಥೆ ಇಲ್ಲದಿದ್ದರೂ ತುರ್ತು ಪರಿಸ್ಥಿತಿಯಲ್ಲಿ ಅಗತ್ಯ ಇರುವ ವ್ಯವಸ್ಥೆ ಮಾಡಲಾಗಿದೆ. ಪಟಾಕಿಯಿಂದ ಸುಟ್ಟು ಗಾಯಗಳಾಗಿದ್ದರೆ, ಗಂಭೀರ ಗಾಯಕ್ಕೂ ವ್ಯವಸ್ಥೆ ಇದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. ಪ್ರವಾಹದಿಂದ ಗಡಿ ಜಿಲ್ಲೆ ಬೆಳಗಾವಿ ನಲುಗಿದೆ. ಮಾರುಕಟ್ಟೆಯಲ್ಲಿ ಕಳೆದ ಸಲದ ದೀಪಾವಳಿಯಂತೆ ಜನಜಂಗುಳಿ ಇಲ್ಲ. ರೈತರು, ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಹದ ಹೊಡೆತದಿಂದ ಇನ್ನೂ ಮೇಲೆ ಎದ್ದಿಲ್ಲ. ಪಟಾಕಿ ಮಾರುಕಟ್ಟೆಯಂತೂ ಸಂಪೂರ್ಣವಾಗಿಕೆಳಗೆ ಬಿದ್ದಿದ್ದು, ಇನ್ನು ಬೇರೆ ವ್ಯಾಪಾರವೂ ಅಷ್ಟಕ್ಕಷ್ಟೇ ಆಗಿದೆ. ಬಟ್ಟೆ ವ್ಯಾಪಾರ ಬಿಟ್ಟರೆ ಇನ್ನುಳಿದಕ್ಕೆ ಗ್ರಹಣ ಹಿಡಿದಂತಾಗಿದೆ.
-ಭೈರೋಬಾ ಕಾಂಬಳೆ