Advertisement
ಕೃಷಿ ವೀಕ್ಷಣೆಗೆ ಹೋದಾಗ ಬೇಲಿಯ ನಂತರ ಬೆಳೆ ಕಾಣಿಸುತ್ತದೆ. ಕೆಲವು ತೋಟಗಳಲ್ಲಿ ಬೆಳೆಗಿಂತ ಬೇಲಿಯೇ ಹೆಚ್ಚು ಆಕರ್ಷಕವಾಗಿರುತ್ತದೆ. ಭೂುಯ ಗಡಿ ಗುರುತಿಸಲು, ಅತಿಕ್ರಮಣ ತಡೆಯಲು, ದನಕರು ನಿಯಂತ್ರಿಸಲು ಬೇಲಿ ಬೇಕು. ವನ್ಯಜೀವಿಗಳ ಉಪಟಳ ತಡೆಗೂ ಅಗತ್ಯವಿದೆ. ತೋಟದ ಸುತ್ತ ಅಗಳ ತೆಗೆದು ಮಣ್ಣಿನ ಏರಿ ಹಾಕಿಸುವುದು ಎಲ್ಲರಿಗೂ ಗೊತ್ತು. ಏರಿಯಲ್ಲಿ ಮುಳ್ಳುಕಂಟಿ, ಮರ ಗಿಡ ಬೆಳೆಸುತ್ತ ಹಸಿರು ಆವರಣ ನಿರ್ಮಿಸಬಹುದು. ಕಾಫೀ ಸೀಮೆಯ ಚಿಕ್ಕಮಗಳೂರು, ಕೊಡಗಿನಲ್ಲಿ ಸುತ್ತಾಡುವಾಗ ರಸ್ತೆಯಂಚಿನ ಹಸಿರು ಬೇಲಿ ಸೊಗಸಾಗಿ ಕಾಣಿಸುತ್ತದೆ. ಆ ಬೇಲಿ ಸಾಲನ್ನು ಕಲಾತ್ಮಕವಾಗಿ ಕತ್ತರಿಸಿದ ರೀತಿ ಗಮನ ಸೆಳೆಯುತ್ತದೆ. ಬೇಲಿಯಂಚಿನ ಕಾಫಿ ಗಿಡಗಳಿಗೆ ತೊಂದರೆಯಾಗದಂತೆ, ಹೆಚ್ಚು ಎತ್ತರ ಬೆಳೆಯದಂತೆ ಶ್ರದ್ದೆಯ ನಿರಂತರ ನಿರ್ವಹಣೆ ನಡೆಯುತ್ತದೆ. ಬೇಲಿಯಂಚಿನ ಕಿತ್ತಳೆ, ಹಲಸು, ಅತ್ತಿ, ಲಿಂಬು ಮುಂತಾದ ಮರಗಳ ಪಟ್ಟಿ ಮಾಡಿದರೆ ಸಸ್ಯ ವೈವಿಧ್ಯದ ಖಜಾನೆ ಕಾಣಿಸುತ್ತದೆ. ಮುಖ್ಯ ಬೆಳೆ ರಕ್ಷಣೆ ಉದ್ದೇಶದ ಬೇಲಿ ರಚನಾತ್ಮಕ ಮನಸ್ಥಿತಿ ಹಾಗೂ ಸಮರ್ಥ ಭೂ ಬಳಕೆಯ ವಿಧಾನಕ್ಕೆ ಪೂರಕವಾಗಿ ವಿನ್ಯಾಸಗೊಳ್ಳುತ್ತದೆ.
Related Articles
Advertisement
ನೈಸರ್ಗಿಕ ಕೃಷಿ ಸಾಧಕ ಬನ್ನೂರು ಕೃಷ್ಣಪ್ಪನವರು ಅಡಿಕೆ ತೋಟದ ಸುತ್ತ ಮುಳ್ಳುಕಂಟಿ ಕೌಳಿ ಹಿಂಡು ಬೆಳೆಸಿದ್ದಾರೆ. ಉಪ್ಪಿನಕಾಯಿಗೆ ಉಪಯುಕ್ತವಾದ ಕಾಡು ಕೌಳಿ ಇವರ ಬೇಲಿಗೆ ನೆರವಾಗಿದೆ. ರಾಮದುರ್ಗದ ಕೆಲವು ರೈತರು ರಸ್ತೆ ಪಕ್ಕದ ಹೊಲದಂಚಿನಲ್ಲಿ ಗಜ್ಜುಗದ ಬಳ್ಳಿ ನೆಟ್ಟಿದ್ದಾರೆ. ದಟ್ಟ ಪೊದೆಯಾಗಿ ಬೆಳೆಯುವ ಮುಳ್ಳುಕಂಟಿ, ದನಕರು, ಮನುಷ್ಯರ ಪ್ರವೇಶಕ್ಕೆ ತಡೆಯಾಗುತ್ತದೆ. ಬಯಲುಸೀಮೆಯ ತೋಟದಂಚಿನಲ್ಲಿ ಬೆಳೆಯುವ ಹುಲಿಕಂಟಿ, ಜಾಲಿಗಳೂ ಬೇಲಿಗೆ ಒಗ್ಗಿವೆ. ಇವುಗಳ ತಂಪಿನಲ್ಲಿ ಜೇನು, ಪಕ್ಷಿಗಳಿಗೆ ಆವಾಸ ದೊರಕುತ್ತಿದೆ. ತೋಟದ ಪರಾಗಸ್ಪರ್ಶಕ್ಕೆ ಜೇನು ನೆರವಾಗುತ್ತವೆ. ತೋಟದ ಬೇಲಿ ಸುರಯತ ಜೀವದಾರಿಯಾಗಿ ಕೆಂಪಿರುವೆ, ಜೇಡ, ಕಪ್ಪೆ, ಓತಿಕ್ಯಾತ ಮುಂತಾದ ಜೀವಿಗಳನ್ನು ಪೋಷಿಸಿ ತೋಟದ ಜೊತೆಗೆ ಸಂಪರ್ಕ ಕಲ್ಪಿಸುತ್ತದೆ. ಆಹಾರಕ್ಕಾಗಿ ಕೀಟ ಹಿಡಿಯುವ ಇವು ತೋಟಕ್ಕೆ ಅಮೂಲ್ಯ ನೆರವು ನೀಡುತ್ತವೆ. ಇಲಿಗಳ ನಿಯಂತ್ರಣಕ್ಕೆ ನೆರವಾಗುವ ಕೇರೆ ಹಾವುಗಳ ಆವಾಸ, ಯಾವತ್ತೂ ಬೇಲಿಯ ಆಸುಪಾಸಿನಲ್ಲಿಯೋ ಇರುತ್ತದೆ.
“ಮೊಗೆ ಮಳೆಯಲ್ಲಿ ಮುರಿದು ನೆಟ್ಟರೂ ಬದುಕ್ತದೆ’ ಮಾತು ಮಲೆನಾಡಿನಲ್ಲಿದೆ. ಗಿಡದ ಹಸಿರು ಟೊಂಗೆ ಕತ್ತರಿಸಿ ನಾಟಿ ಮಾಡಿದರೆ ಚಿಗುರಿ ಬೆಳೆಯುತ್ತವೆ. ಬೇಲಿಗೆ ಒಗ್ಗುವ ಬಹುತೇಕ ಸಸ್ಯಗಳಲ್ಲಿ ಈ ಗುಣಚ್ಛಿದೆ. ಬೇಲಿ ಸಂಪಿಗೆ( ಬಕುಲ, ಅರ್ಜುನ) ಗೂಟಗಳನ್ನು ನಾಟಿ ಮಾಡಬಹುದು. ಮಂಡ್ಯ, ಮದ್ದೂರು ಪ್ರದೇಶಗಳ ರೈತರು ಹೊಲದಲ್ಲಿ ಬಿಳಿ ಬಸರಿ ಮರದ ಗೂಟ ನಾಟಿ ಮಾಡಿ ಮರ ಬೆಳೆಸುವ ಪರಿಪಾಠವಿದೆ. ಎಕರೆಗೆ ಹತ್ತಾರು ಮರಗಳನ್ನು ಇಲ್ಲಿ ನೋಡಬಹುದು. ಮರದ ಸೊಪ್ಪು ಬೇಸಿಗೆಯಲ್ಲಿ ಜಾನುವಾರು ಮೇವಿಗೆ ಬಳಕೆಯಾಗುತ್ತವೆ. ಕೆ. ಆರ್. ಪೇಟೆ ತಾಲ್ಲೂಕಿನ ಹಲವು ಕಡೆಗಳಲ್ಲಿ ನೀರವಂಜೆ( ಪೌಸೆ)ಮರಗಳನ್ನು ಗೂಟದಿಂದ ಬೆಳೆಸುತ್ತಾರೆ. ನೊಗ ತಯಾರಿಕೆಗೆ ಇದು ಬಳಕೆಯಾಗುತ್ತದೆ. ಬೇಲಿ,ನೆರಳು, ಸೊಪ್ಪು, ಉರುವಲು, ಮೇವು, ನಾಟಾಗಳಿಗೆ ಅನುಕೂಲವಾಗಿವೆ.
ಗೂಟ ನೆಟ್ಟು ಎಲ್ಲ ಸಸ್ಯಗಳನ್ನೂ ಬೆಳೆಸಲಾಗುವದಿಲ್ಲ. ಆದರೆ ಯಾವ ಮಣ್ಣಿಗೆ ಯಾವ ಸಸ್ಯದ ಗೂಟವನ್ನು ಯಾವ ಕಾಲದಲ್ಲಿ ನಾಟಿ ಮಾಡಬೇಕೆಂಬ ನೆಲಮೂಲ ಜಾnನ ರೈತರಿಗಿದೆ. ಚಿಗುರು ಗೂಟ ಕಡಿಯುವದು, ನಾಟಿ ಮಾಡುವಾಗ ತೊಗಟೆ ಸುಲಿಯಬಾರದೆಂಬುದು ಸಾಮಾನ್ಯ ಸೂತ್ರ. ಯಾವುದೇ ಗೂಟ ಊರುವಾಗ ಅದಕ್ಕೆ ಟಿಸಿಲು, ಎಲೆಗಳಿರಬಾರದು. ಆಲದ ಗೂಟಗಳನ್ನು ಗುಡ್ಡದ ಒಣ ನೆಲದಲ್ಲಿÉ ಬೆಳೆಸಬಹುದು. ಮಳೆ ಸುರಿಯುವದಕ್ಕೆ ಮುನ್ನ ಮೇ ತಿಂಗಳಿನಲ್ಲಿ ನಾಲ್ಕಡಿ ಉದ್ದದ ರಟ್ಟೆಗಾತ್ರದ ಗೂಟವನ್ನು ಒಂದೂವರೆ ಅಡಿ ಮಣ್ಣಿನಲ್ಲಿ ಹುಗಿದು ನಿಲ್ಲಿಸಬೇಕು. ಬಿಸಿಲಿಗೆ ಅದು ಬಾಡಬೇಕು, ಆದರೆ ಒಣಗಬಾರದು. ಮಳೆ ಹನಿ ಬಿದ್ದಾಗ ನಿಧಾನಕ್ಕೆ ಚಿಗುರಿ ನೂರಾರು ವರ್ಷ ಬಾಳುವ ಮರವಾಗುತ್ತವೆ. ಸಸ್ಯ ಬೆಳೆಸಲು ದುಬಾರಿ ನರ್ಸರಿ ವೆಚ್ಚದ ಹೊರತಾಗಿ ಕಡಿದು ಊರಿದರೆ ಸುಲಭಕ್ಕೆ ಬೆಳೆಯುವ ನೂರಾರು ಗಿಡ ಜಾತಿಗಳು ನಮ್ಮ ಕಾಡುಗಳಲ್ಲಿವೆ. ಚಿಗುರು ಗೂಟದಲ್ಲಿ ಗಿಡ ಬೆಳೆಸುವ ವಿದ್ಯೆಯಿಂದ ಹಸಿರು ಬೇಲಿಯ ನಿರ್ಮಾಣ ಸುಲಭವಾಗಿದೆ. ದಾಸವಾಳದ ದಂಟುಗಳನ್ನು ಬೇಲಿ ಸಾಲಿನಲ್ಲಿ ನಾಟಿ ಮಾಡಿದರೆ ಚಿಗುರು ಸೊಪ್ಪು ದನಕರುಗಳ ಮೇಗೆ ಅನುಕೂಲವಾಗುತ್ತದೆ. ಬೇಸಿಗೆಯಲ್ಲಿ ಹಸಿದ ಕೋತಿಗಳು ದಾಸವಾಳದ ಬೇಲಿ ಸೊಪ್ಪು ತಿನ್ನುತ್ತ ಕೂಡ್ರುವುದರಿಂದ ತೋಟದ ಹಾನಿಯೂ ಕಡಿಮೆಯಾಗಬಹುದು.
ಚಿತ್ರದುರ್ಗದ ರಾಂಪುರ ಬಾಂಡ್ರಾಯ ಹೊಲ ಸುತ್ತಾಡುವಾಗ ಊರಿಗೆ ಪರಕೀಯವಾದ ಭರ್ಜರಿ ಕಲ್ಲಿನ ಬೇಲಿ ರಚನೆ ಗಮನ ಸೆಳೆಯಿತು. ವಿಚಾರಿಸಿದಾಗ ಹೊಸದಾಗಿ ಭೂಮಿ ಖರೀದಿಸಿದವರು ಮಿಲಿóà ಶಿಸ್ತಿನ ಬೇಲಿಗೆ ಲಕ್ಷಾಂತರ ಹಣ ಚೆಲ್ಲಿದ್ದರು. ಭೂಮಿ ಖರೀದಿಸಿದ ಎಲ್ಲರ ಮನಸ್ಸಿನಲ್ಲಿ ಭದ್ರ ಬೇಲಿ ಹಾಕುವ ಉಮೇದಿ ಸಾಮಾನ್ಯ. ತಂತಿ ಬೇಲಿ, ಕಲ್ಲಿನ ಬೇಲಿ, ವಿದ್ಯುತ್ ಬೇಲಿ, ಕಾಂಕ್ರೀಟ್ ಗೋಡೆ ಕಟ್ಟುವುದನ್ನು ನೋಡುತ್ತೇವೆ. ಬೇಲಿಗಾಗಿ ಭೂಮಿ ಬಳಸುವಾಗ ಅಲ್ಲಿ ಸಸ್ಯ ವೈವಿಧ್ಯ, ಮರ ಆದಾಯ, ಹಣ್ಣು ಹಂಪಲು, ಬಿದಿರು, ಔಷಧ ಸಸ್ಯ, ನಾರು, ಗಾಳಿ ತಡೆ, ಬಿಸಿಲು ತಡೆಯುವ ಹಸಿರು ಬೇಲಿ ಎಬ್ಬಿಸಲು ಮಹತ್ವ ನೀಡಬೇಕು. ಜೀವಂತ ಬೇಲಿಯ ಮುಖೇನ ಭೂಮಿಯ ಮಣ್ಣಿಗೆ ಜೀವ ತುಂಬುವ ಕಾರ್ಯ ಮಾಡಬಹುದು. ಹಸಿರು ಬೇಲಿಯಂಚಿನ ಮಣ್ಣಿನ ಸತ್ವ ತೋಟದ ಮಣ್ಣಿಗಿಂತ ಉತ್ತಮವಾಗಿರುತ್ತದೆ. ಮರ ಬೆಳೆದರೆ ಹೇಗೆ ಮಣ್ಣು ಬದಲಾಗುತ್ತದೆಂಬುದಕ್ಕೆ ಬೇಲಿ ಬುಡದ ನೆಲದಲ್ಲಿ ಸಾಕ್ಷಿ$ ದೊರೆಯುತ್ತದೆ.
ಕರಾವಳಿಯ ಲ್ಯಾಟ್ರೆ„ಟ್ ಗುಡ್ಡದಲ್ಲಿ ಮನೆ ನಿರ್ಮಿಸಿದವರೊಬ್ಬರು ಮನೆಯ ಸುತ್ತ ಕಾಡು ಬಾಳೆಯನ್ನು ಬೇಲಿಯಂತೆ ಬೆಳೆಸಿದ್ದರು. ಕಾಡು ಬಾಳೆಯಾದ್ದರಿಂದ ಬೆಳೆಸಲು ಹೆಚ್ಚಿನ ನೀರು ಅಗತ್ಯರಲಿಲ್ಲ. 15-20 ಅಡಿಯೆತ್ತರ ಬೆಳೆದ ದೈತ್ಯ ಬಾಳೆ ಮರದೆಲೆಗಳು ಚಾಮರ ಬೀಸುತ್ತಿದ್ದವು. ಬೇಸಿಗೆಯ ಉರಿ ಬಿಸಿಲಿನಲ್ಲಿ ಮನೆಯಲ್ಲಿ ತಂಪನೆಯ ಆಹ್ಲಾದಕರ ವಾತಾವರಣವಿತ್ತು. ಉಷ್ಣತೆ ತಗ್ಗಿಸಲು ಮರ ಬೆಳೆಸಲು ಉಪನ್ಯಾಸ ನೀಡುವ ಬದಲು ಇಂಥ ಮನೆಗಳಿಗೆ ಹೋದರೆ ಜಾಗೃತಿ ಮೂಡುತ್ತದೆ. ಇಂದು ಹವಾಮಾನ ಬದಲಾವಣೆಗಳಿಂದ ಕೃಷಿ ಬದುಕು ಕಷ್ಟವಾಗಿದೆ. ನಮ್ಮ ಬೇಲಿಗಳು ಹಸಿರಾದರೆ ಕೃಷಿ ಉಸಿರಾಡುತ್ತದೆ. ಹೀಗಾಗಿ ತೋಟದಲ್ಲಿ ಮರ ಬೆಳೆಸುವುದಕ್ಕಿಂತ ಮುಂಚೆ ಬೇಲಿಯಿಂದ ಸಸ್ಯಾವರಣದ ಶ್ರೀಗಣ ಶುರುವಾಗಬೇಕು.
ಮುಂದಿನ ಭಾಗ – ಹಸಿರು ಕಟ್ಟುವ ವೀರರು ಶೀಘ್ರ ಬೆಳೆಯುವ ಶೂರರು
– ಶಿವಾನಂದ ಕಳವೆ