Advertisement
ನಿಸರ್ಗ ರಮ್ಯ ಶರಾವತಿ ಕಣಿವೆಯಲ್ಲಿ ಗೇರುಸೊಪ್ಪ ಟೇಲರೇಸ್ ಅಣೆಕಟ್ಟೆಗಾಗಿ ಎರಡು ದಶಕಗಳ ಹಿಂದೆ ಕಾಡು ಕಡಿದಿದ್ದರು. ನದಿ ಕಣಿವೆಯ ನಾಟಾಗಳನ್ನು ಮಳೆಗಾಲಕ್ಕೆ ಮುಂಚೆ ಸಾಗಿಸಿ ಅಳಿದುಳಿದ ಸೊಪ್ಪು ಟಿಸಿಲುಗಳಿಗೆ ಬೆಂಕಿ ಹಾಕಿ ಸುಡಲಾಯಿತು. ಮರ ಕಡಿತದ ನೆಲೆ ಸ್ಮಶಾನದಂತೆ ಕಾಣಿಸುತ್ತಿತ್ತು. ನಂತರ, ಅಬ್ಬರದ ಮಳೆ ಶುರುವಾಯ್ತು. ಎರಡು ತಿಂಗಳ ನಂತರ ಮರ ಕಡಿತವಾದ ಜಾಗ ವೀಕ್ಷಿಸಿದರೆ ಅಚ್ಚರಿ. ಚಂದಕಲು (ಮೆಕರಂಗಾ ಪೆಲ್ಟಾಟಾ) ಸಸ್ಯ ಸಮೂಹ ಹತ್ತಾರು ಅಡಿ ಎತ್ತರ ಬೆಳೆದು ದಟ್ಟ ಹಸಿರು ಕವಚ ರೂಪಿಸಿತ್ತು. ಕತ್ತಿ ಕಾಳಗ ನಡೆಯುವಾಗ ರಕ್ಷಣೆಗೆ ಹಿಡಿಯುವ “ಗುರಾಣಿ'(ಪೆಲ್ಟಾಟಾ) ಇದರ ಸಸ್ಯಶಾಸ್ತ್ರೀಯ ಹೆಸರಿನಲ್ಲಿ ಸೇರ್ಪಡೆಯಾಗಿದ್ದಕ್ಕೆ ಪುರಾವೆಯಾಗಿ ಸಸ್ಯ ದೊಡ್ಡೆಲೆಯ ಹಸಿರು ಗುರಾಣಿ ಹಿಡಿದು ಅಬ್ಬರದ ಮಳೆಯಲ್ಲಿ ಭೂಮಿಯ ಮಾನಮುಚ್ಚಲು ಹೋರಾಡಿತು. ಬೆಂಕಿ ಬಿದ್ದಲ್ಲಿ ಬೆಳೆಯುತ್ತದೆ, ಬೆಂಕಿ ಕಡ್ಡಿ ತಯಾರಿಗೆ ಬಳಕೆಯಾಗುತ್ತದೆಂದು ಬ್ರಿಟೀಷ್ ಸಸ್ಯ ಶಾಸ್ತ್ರಜ್ಞರು 18 ನೇ ಶತಮಾನದಲ್ಲಿ ಮರ ಗುರುತಿಸಿದಂತೆ ವರ್ತನೆ ತೋರಿಸಿತು. ಮುಂದಿನ ಐದಾರು ತಿಂಗಳಿನಲ್ಲಿ ಭೂಗತವಾಗಿದ್ದ ಇನ್ನುಳಿದ ವೃಕ್ಷದ ಬೇರುಗಳು ಚಿಗುರಿ ಸಸ್ಯ ವೈಧ್ಯ ಅವತರಿಸಿತು. ಮಾನವ ಆಕ್ರಮಣದ ಮಧ್ಯೆ ಕಾಡು ಕೂಡಿತು.
Related Articles
Advertisement
ಕಾಡಿನ ಕಲ್ಲುಗುಡ್ಡಗಳನ್ನು ಗಮನಿಸಬೇಕು. ಹುಲ್ಲು, ಬಳ್ಳಿ, ಮುಳ್ಳುಕಂಟಿಗಳು ಹತ್ತಾರು ವರ್ಷ ಬೆಳೆದ ಬಳಿಕ ವೃಕ್ಷ ಜಾತಿಗಳು ಬೆಳೆಯುತ್ತವೆ. ಮುಳ್ಳುಕಂಟಿ, ಪೊದೆಗಳಿಂದ ವಾಣಿಜ್ಯ ಲಾಭವಿಲ್ಲ, ಮರಗಳು ಮಾತ್ರ ಇರಬೇಕೆಂದು ಉಳಿದವನ್ನು ಕಡಿದರೆ ಭೂಮಿ ಬರಡಾಗಿ ಏನೂ ಬೆಳೆಯದ ಸ್ಥಿತಿ ತಲುಪುತ್ತದೆ. ಮಣ್ಣಿಗೆ ಮರಗಳನ್ನು ಹೊಂದುವ ಅವಕಾಶ ದೊರೆಯಲು ವಿವಿಧ ಹಂತಗಳಲ್ಲಿ ಸಸ್ಯಗಳ ನೆರವು ಬೇಕಾಗುತ್ತದೆ. ಅರಣ್ಯ ಬೆಳೆಯುವ ಸ್ವರೂಪಗಳನ್ನು ನೋಡುತ್ತ ಹೋದರೆ ತೋಟವನ್ನು ಹೇಗೆ ಬದಲಿಸಬೇಕೆಂದು ಗೊತ್ತಾಗುತ್ತದೆ. ಕಾಡಿನ ಹೊನ್ನೆ ಸಾಮಾನ್ಯವಾಗಿ ಗೊಣಗಲು ಮುಳ್ಳುಕಂಟಿಯ ನಡುವೆ ಜನಿಸಿ ಮರವಾಗುತ್ತದೆ. ಹೊನ್ನೆಯ ಎಳೆ ಚಿಗುರನ್ನು ದನಕರು, ಜಿಂಕೆಗಳು ತಿನ್ನದಂತೆ ಮುಳ್ಳು ಪೊದೆ, ನೈಸರ್ಗಿಕ ಟ್ರೀ ಗಾರ್ಡ್‌ನಂತೆ ರಕ್ಷಣೆ ನೀಡುತ್ತದೆ. ಕಂಟಿಯ ಬುಡದ ಫಲವತ್ತಾದ ಮಣ್ಣು ಆಳಕ್ಕೆ ಬೇರಿಳಿಸುವ ಹೊನ್ನೆಯನ್ನು ಪೋಷಿಸುತ್ತದೆ. ಹೆಮ್ಮರಗಳ ಕಾಡು ಬೆಳೆಯುವ ಪೂರ್ವದಲ್ಲಿ ಶೀಘ್ರವಾಗಿ ಬೆಳೆಯುವ ಸಸ್ಯ ಸಂಕುಲಗಳನ್ನು ನಿಸರ್ಗ ನೇಮಿಸುತ್ತದೆ. ಇವುಗಳ ನಡುವೆ ಕಿಂದಳ, ತಾರೆ, ನೇರಳೆ, ಹೆನ್ನೇರಳೆ, ಮಸೆ, ಬನಾಟೆ, ಹೊಳೆಗೇರು ಮುಂತಾದವು ಬೆಳೆಯುತ್ತವೆ. ಕಾಡು ಗೆಲ್ಲಲ್ಲು ಮುಂಚೂಣಿಯಲ್ಲಿ ನಿಲ್ಲುವ ಸಸ್ಯಗಳು ಮರ ದಟ್ಟಣೆ ಹೆಚ್ಚಿದಂತೆ ನಶಿಸುತ್ತವೆ. ಕೆಲಸ ಪೂರೈಸಿ ಕಾಲೆ¤ಗೆಯುತ್ತವೆ. ವನ ವ್ಯವಸ್ಥೆ, ಮಣ್ಣು ಪರಿವರ್ತನೆಯ ಕ್ರಿಯೆಯನ್ನು ಬೇರೆ ಬೇರೆ ಸಸ್ಯಗಳ ಮೂಲಕ ಸೊಗಸಾಗಿ ನಿರ್ವಹಿಸುತ್ತದೆ.
ಇಂದು ಫಾಸ್ಟ್‌ಪುಡ್ ಯುಗ. ಹಸಿವಾದ ತಕ್ಷಣ ತಿಂಡಿ, ತಟ್ಟೆಯಲ್ಲಿರಬೇಕು. ಹೊಸದಾಗಿ ತೋಟ ಮಾಡುವ ಹೆಚ್ಚಿನವರಲ್ಲಿ ಸಾಮಾನ್ಯವಾಗಿ ಇಂಥ ಮನಃಸ್ಥಿತಿ. “ಸರ್, ಯಾವ ಮರ ಬೇಗ ಬೆಳಿತ್ರಾ?’ ಎಂಬುದರಿಂದ ಪ್ರಶ್ನೆ ಶುರುವಾಗುತ್ತದೆ. ಒಂದು ಊರಲ್ಲಿ ಬಹುಬೇಗ ಬೆಳೆಯುವುದು ಇನ್ನೊಂದು ಊರಲ್ಲಿ ಸೊರಗಬಹುದು. ಇತ್ತೀಚಿನ ದಶಕಗಳಲ್ಲಿ ಮರ ಬೆಳೆಸುವವರೆಲ್ಲ ಹೆಬ್ಬೇವಿನ ಹಿಂದೆ ಬಿದ್ದಿದ್ದಾರೆ. ಹುಣಸೂರಿನಿಂದ ಶುರುವಾಗಿ ರಾಮದುರ್ಗದ ಬೆಟ್ಟದ ಹೊಲದಲ್ಲಿಯೂ ಹಸಿರು ಭೀಮನಿಗೆ ಜೈಕಾರ ನಡೆದಿದೆ. ಹೊಲದ ಬದು, ದಾಳಿಂಬೆ ಹಾಗೂ ಮಾವಿನ ತೋಟಗಳಲ್ಲಿ ಮರ ಬೆಳೆಸಿದ್ದು ನೋಡಬಹುದು. 25 ವರ್ಷಗಳ ಹಿಂದೆ ತಿಪಟೂರು, ಕೊಳ್ಳೆಗಾಲ, ಹುಣಸೂರು, ಹಾಸನದ ಕೆಲವೆಡೆ ಹೊಲದ ಬದಿಯಲ್ಲಿ ಹೇಗೋ ಬೆಳೆಯುತ್ತಿದ್ದ ಮರಕ್ಕೆ ಇಂದು ಶೀಘ್ರ ಬೆಳೆಯುವ ವೃಕ್ಷ ಎಂಬ ಕಾರಣಕ್ಕೆ ಮಾನ್ಯತೆ ದೊರಕಿದೆ. ಭೂಮಿಯಲ್ಲಿ ಫಲ ವೃಕ್ಷಗಳನ್ನು ಬೆಳೆಯುವ ಪೂರ್ವದಲ್ಲಿ ನೆಲದ ಸತ್ವ ಹೆಚ್ಚಳ, ನೆರಳು, ಉಪಉತ್ಪನ್ನದ ಉದ್ದೇಶದಿಂದ ಶೀಘ್ರ ಬೆಳೆಯುವ ಸಂಕುಲ ಹುಡುಕುತ್ತೇವೆ. ಸಿಲ್ವರ್ ಓಕ್, ಗಾಳಿ, ಅಕೇಶಿಯಾ ಅರಿಕ್ಯುಲಿ ಫಾರ್ಮಿಸ್, ಅಕೇಶಿಯಾ ಮ್ಯಾಂಜಿಯಂ, ನೀಲಗಿರಿ, ಸುಬಾಬುಲ್ ಹೀಗೆ ಹೊಲಕ್ಕೆ ಬಂದ ದೇಶಿ ಸಸ್ಯಗಳಿವೆ. ಹೊಂಗೆ, ಬೇವು, ಕರಿಜಾಲಿ, ಹುಣಸೆ, ಬೇಲ ಸಾಮಾನ್ಯವಾಗಿ ಬಯಲು ನಾಡಿನ ಅಕ್ಕರೆಯಾಗಿದೆ. ನಮ್ಮ ಅರಣ್ಯದ ಚಂದಕಲು, ಬನಾಟೆ, ಮಹಾಗನಿ, ಕಾಡುಬೆಂಡೆ ಮುಂತಾದ ನೆಲದ ವೃಕ್ಷಗಳಿವೆ. ಬೀದರ್‌ನಲ್ಲಿ, ಕರ್ನಾಟಕ ಅರಣ್ಯ ಇಲಾಖೆಯು ಮೂರು ವರ್ಷದ ಹಿಂದೆ ವನವೊಂದನ್ನು ಅಭಿವೃದ್ಧಿಪಡಿಸಿದೆ. ರಂಜಲು, ಮಾವು, ಮುರುಗಲು, ಹಲಸು, ಬಿಳಿಮತ್ತಿ ಮುಂತಾದ ಪಶ್ಚಿಮಘಟ್ಟದ ವೃಕ್ಷಗಳು ಇಲ್ಲಿ ಎಷ್ಟು ಚೆನ್ನಾಗಿ ಎತ್ತರ ಬೆಳೆದಿವೆಯೆಂದರೆ ಇಷ್ಟು ವರ್ಷ ಯಾಕೆ ಬಯಲು ನಾಡಿನ ವ್ಯಾಪಕ ಅರಣ್ಯೀಕರಣದಲ್ಲಿ ಇವುಗಳನ್ನು ಬೆಳೆಸಿಲ್ಲವೆಂಬ ನೋವು ಅಲ್ಲಿ ಕೆಲಸ ನಿರ್ವಹಿಸಿದ ಅರಣ್ಯಾಧಿಕಾರಿಗಳನ್ನು ಕಾಡುತ್ತಿದೆ.
ಸಸ್ಯಗಳು ನರ್ಸರಿಯ ಮೂಲಕ ನಮ್ಮ ಹೊಲಕ್ಕೆ ಬರುತ್ತವೆ. ಸಸಿ ಬೆಳೆಸಿದ ನರ್ಸರಿ ಒಂದೇ ಆದರೂ ಬೆಳೆಯುವ ಸ್ವಭಾವ ಬೇರೆಯಾಗಿರುತ್ತದೆ. ಎಲೆಯ ಗಾತ್ರ, ಕಾಂಡದ ಸ್ವರೂಪ, ಮರಟೊಂಗೆ ಬೆಳೆಯುವ ರೀತಿ, ಬೇರಿನ ಬೆಳವಣಿಗೆ ಪ್ರತಿ ಜಾತಿಯಲ್ಲಿ ಭಿನ್ನವಿದೆ. ನೀರು, ನೆರಳು, ಬಿಸಿಲು ಅಗತ್ಯಕ್ಕೆ ತಕ್ಕಷ್ಟು ಸಿಕ್ಕಾಗ ಖುಷಿಯಿಂದ ಪುಟಿದೇಳುತ್ತವೆ. ಮಣ್ಣು, ನೀರು ಪರೀಕ್ಷಿಸಿ ವಿಜಾnನ ಎಷ್ಟೇ ಸಲಹೆ ನೀಡಿದರೂ ಸಸಿ ನೆಟ್ಟ ನೆಲ ನಿತ್ಯವೂ ಹೊಸ ಹೊಸ ಸವಾಲು ಒಡ್ಡುತ್ತದೆ. ನೀರು ಹೆಚ್ಚಾದಾಗ ಕಳೆ ಬೆಳೆದು, ಜೌಗಾಗಿ ಸಸಿ ಮಂಕಾಗಬಹುದು. ಸಸ್ಯದ ಬುಡಭಾಗ ಓಡಾಡಲಾಗದಷ್ಟು ಕೆಸರೆದ್ದ ಎರೆ ಮಣ್ಣಿನಲ್ಲಿ ಎರಡಡಿ ಆಳದ ಮಸಾರಿ ಮಣ್ಣಿಗೆ ಹನಿ ನೀರು ತಲುಪಿರುವುದಿಲ್ಲ. ತಾನು ಸಾಕಷ್ಟು ನೀರು ಕುಡಿದ ಬಳಿಕವೇ ಎರೆ ಮಣ್ಣು ಕೆಳಪದರಕ್ಕೆ ಹರಿಯಲು ಅವಕಾಶ ನೀಡುತ್ತದೆ. ಹೀಗಾಗಿ ತೋಟದ ಮೇಲ್ಮೆ„ಯಲ್ಲಿ ಒದ್ದೆಯಾಗಿದ್ದರೂ ಮರದ ಬೇರಿಗೆ ನೀರಿಲ್ಲದೇ ಸೊರಗುತ್ತವೆ. ಮರ ಅಭಿವೃದ್ಧಿಯಲ್ಲಿ ಸಸ್ಯಗುಣದ ಜೊತೆಗೆ ಮಣ್ಣಿನ ಸ್ವಭಾವವನ್ನೂ ಗಮನಿಸಬೇಕಾಗುತ್ತದೆ.
ಫಾಸ್ಟ್ ಫೂÅಟ್‌ಗಳ ಹಿಂದೆ…30-40 ವರ್ಷಗಳ ಹಿಂದೆ ತೆಂಗು, ಅಡಿಕೆ, ಹಲಸು, ಮಾವು ನೆಡುವಾಗ ಹತ್ತು ವರ್ಷಕ್ಕೆ ಫಲ ದೊರೆಯುತ್ತಿತ್ತು. ಈಗ ನಮಗೆಲ್ಲ ಒಂದೆರಡು ವರ್ಷಕ್ಕೆ ಫಲ ನೀಡುವ ತಳಿಗಳು ಬೇಕು. ನಮ್ಮ ಮನಸ್ಸು ಫಾಸ್ಟ್‌ಪುಡ್‌ನಂತೆ ಫಾಸ್ಟ್‌ಫೂÅಟ್ಸ್‌ಗಳ ಹಿಂದೆ ಓಡುತ್ತಿದೆ. “ನೆಲ ಗುಣ ಬದಲಿಸದೇ ಮರ ಬೆಳೆಸಲಾಗದು, ಮರ ಬೆಳೆಯದೇ ನೆಲದ ಗುಣ ಬದಲಾಗದು’ ನಾವೆಲ್ಲರೂ ಇಂದು ವಿಚಿತ್ರ ಸಂದರ್ಭದಲ್ಲಿ ನಿಂತಿದ್ದೇವೆ. ಮಳೆಕಾಡುಗಳಲ್ಲಿ ನೂರಾರು ವರ್ಷ ಬಾಳುವ ವೃಕ್ಷಗಳು ಕಡಿಮೆ. ಬೇಗ ಬೆಳೆದು ಒಣಗುವ ಇವು ಹ್ಯೂಮಸ್, ಫಲವತ್ತತೆ ಹೆಚ್ಚಿಸುತ್ತವೆ. ಸಸ್ಯ ಬೇರುಗಳು ಒಣಗಿ ಪೊಳ್ಳಾಗಿ ಮಳೆ ನೀರು ಇಂಗಿಸಲು ಸಹಾಯ ಮಾಡುತ್ತವೆ. ತೊರೆಗಳು ವರ್ಷವಿಡೀ ಹರಿಯಲು ಸಾಧ್ಯವಾಗಿದೆ. ನಮ್ಮ ಮಣ್ಣಿನಲ್ಲಿ ಯಾವ ಸಸ್ಯ ಬೆಳೆಯುತ್ತದೆಂದು ಇಷ್ಟವೆಂದು ಗಮನಿಸಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ನೀಲಗಿರಿ, ಅಕೇಶಿಯಾದಂಥ ಆಕ್ರಮಣಕಾರಿ ಶೀಘ್ರ ಬೆಳೆಯುವ ಸಸ್ಯ ಮುಂಚೂಣಿಗೆ ತಂದರೆ ಮಣ್ಣು ಗೆಲ್ಲಲಾಗುವುದಿಲ್ಲ. ಎರೆಹುಳು, ಸೂûಾ¾ಣು ಜೀವಿಗಳ ಮಾತು ಆಲಿಸದಿದ್ದರೆ, ಕಾಡು ತೋಟಕ್ಕೆ ಬಣ್ಣ ತುಂಬುವ ಕೆಲಸ ಯಾವತ್ತೂ ಸಾಧ್ಯವಿಲ್ಲ. ಮುಂದಿನ ಭಾಗ – ಹಣ್ಣೆಲೆ ಬೀಳುವಾಗ ಹಸಿರೆಲೆ ನಗಬೇಕು – ಶಿವಾನಂದ ಕಳವೆ