ಬೆಂಗಳೂರು: ವಾರ್ಷಿಕವಾಗಿ 25 ಮಹನೀಯರ ಜಯಂತಿ ಆಚರಣೆಗಾಗಿಯೇ ಇಲಾಖೆಯ ಸಂಪೂರ್ಣ ಶ್ರಮ ಹೋಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹನೀಯರ ಜಯಂತಿಗಳನ್ನು ಕೆಲವೊಂದು ಇಲಾಖೆಯೇ ಮಾಡುತ್ತಿದೆ. ಮತ್ತೆ ಕೆಲವು ಸಾರ್ವಜನಿಕರು, ಸಂಘ-ಸಂಸ್ಥೆಗಳ ಜತೆಗೂಡಿ ಮಾಡಲಾಗುತ್ತಿದೆ. ಆದರೆ, ಇಲಾಖೆಯ ಶ್ರಮ ಇದಕ್ಕೇ ಹೋಗುತ್ತಿದೆ. ಹೀಗಾಗಿ, ವಿಭಿನ್ನವಾಗಿ ಜಯಂತಿಗಳ ಆಚರಣೆ ಬಗ್ಗೆ ಚಿಂತನೆ ನಡೆಯಬೇಕಿದೆ ಎಂದರು.
ಮಹನೀಯರ ಜಯಂತಿ ಬೇಡ ಎಂದರೆ ಅದಕ್ಕೆ ಜಾತಿ ಅಥವಾ ರಾಜಕೀಯ ಬಣ್ಣ ಕಟ್ಟಲಾಗುತ್ತದೆ. ಆದರೆ, ದಾರ್ಶನಿಕರು ಯಾರೂ ತಮ್ಮ ಜಯಂತಿ ಆಚರಣೆ ಅದ್ಧೂರಿಯಾಗಿ ಮಾಡಬೇಕೆಂದು ಬಯಸಿರಲಿಲ್ಲ. ಈ ನಿಟ್ಟಿನಲ್ಲಿ ಸಮುದಾಯದ ನಾಯಕರು, ರಾಜಕೀಯ ಪಕ್ಷಗಳ ಜತೆ ಚರ್ಚಿಸಿ ಸರ್ವಸಮ್ಮತ ಸೂತ್ರ ಕಂಡುಹಿಡಿಯಲಾಗುವುದು ಎಂದು ಹೇಳಿದರು.
ಮಾಸಾಶನ: ಕಲಾವಿದರಿಗೆ ಮಾಸಾಶನ ಯಾವುದೇ ಕಾರಣಕ್ಕೂ ತಡೆಹಿಡಿಯುವುದಿಲ್ಲ. ಆದರೆ, ಸಂಘ-ಸಂಸ್ಥೆಗಳಿಗೆ ನೀಡುವ ಅನುದಾನದಲ್ಲಿ ತಾರತಮ್ಯದ ಆರೋಪ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿದೆ. ಆ ಬಗ್ಗೆ ಸಮಗ್ರ ವರದಿ ನೀಡುವಂತೆಯೂ ಸೂಚಿಸಲಾಗಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಾರಿಗೊಳಿಸಿದ್ದ ಗೋಲ್ಡನ್ ಚಾರಿಯೇಟ್‌ನಿಂದ ಇಲಾಖೆಗೆ 41 ಕೋಟಿ ರೂ. ನಷ್ಟವಾಗಿದೆ. ಅದಕ್ಕಾಗಿ ಅದನ್ನು ಸ್ಥಗಿತಗೊಳಿಸಲಾಗಿದೆ. ಯಾತ್ರಿ ನಿವಾಸಗಳ ಬಗ್ಗೆಯೂ ಅಧ್ಯಯನ ವರದಿ ಕೇಳಿದ್ದೇನೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.