ಬೆಂಗಳೂರು: ಹಣ ಕೊಟ್ಟು ಖರೀದಿಸುವ ಡಾಕ್ಟರೇಟ್ ಪದವಿಗಿಂತ ಕೃತಿಯೊಂದಕ್ಕೆ ವಿದ್ವತ್ ಮೂಲಕ ದೊರೆಯುವ ಗೌರವವೇ ಶ್ರೇಷ್ಠ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಭಾನುವಾರ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಹಮ್ಮಿಕೊಂಡಿದ್ದ 9ನೇ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಹಣ ನೀಡಿದರೆ, ವಿದೇಶಿ ವಿವಿಗಳು ಯಾರಿಗೆ ಬೇಕಾದರೂ ಡಾಕ್ಟರೇಟ್ ನೀಡುತ್ತವೆ. ದುಡ್ಡು ಕೊಟ್ಟು ಪಡೆಯುವ ಡಾಕ್ಟರೇಟ್ ಪದವಿಗಿಂತ ಒಂದು ಕೃತಿಗೆ ವಿದ್ವತ್ತಿನ ಮೂಲಕ ದೊರೆಯುವ ಡಾಕ್ಟರೇಟ್ ಶ್ರೇಷ್ಠ ಎಂದರು. ಬಹುಭಾಷಿಕರಾಗಿ ಕನ್ನಡ ಸಾಹಿತ್ಯದಲ್ಲಿ ತೊಡಗಿದವರು ಕನ್ನಡವನ್ನು ಸಂವೇದನಾಶೀಲವಾಗಿ ಉಳಿಸಿ ಬೆಳೆಸುತ್ತಾರೆ. ಎಲ್ಲ ಭಾಷೆಯ ಸಾಹಿತ್ಯ ತಿಳಿದು ಸಾಹಿತ್ಯ-ಸಂಸ್ಕೃತಿಯ ವಿನಿಮಯಕ್ಕೆ ಕಾರಣೀಭೂತರಾಗುತ್ತಾರೆ.
ಅಂತವರ ಸಾಲಿಗೆ ಲೇಖಕಿ ವರದಾ ಶ್ರೀನಿವಾಸ್ ಸೇರುತ್ತಾರೆ. ದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಪ್ರಾದೇಶಿಕ ಭಾಷೆಗಳಲ್ಲೇ ನಡೆಯಬೇಕು. ಕೇಂದ್ರ ಸರ್ಕಾರ ನಡೆಸುವ ಹಲವು ಪರೀಕ್ಷೆಗಳು ಹಿಂದಿ, ಇಂಗ್ಲಿಷ್ ಭಾಷೆಯಲ್ಲೇ ನಡೆಯುತ್ತಿರುವುದು ಒಕ್ಕೂಟ ವ್ಯವಸ್ಥೆಗೆ ಕಂಟಕ ಎಂದು ಹೇಳಿದರು.
ಸಮಾವೇಶದ ಅಧ್ಯಕ್ಷೆ ಲೇಖಕಿ ವರದಾ ಶ್ರೀನಿವಾಸ್ ಮಾತನಾಡಿ, ಮಹಿಳೆ, ಪುರುಷನ ಸೊತ್ತು ಎಂದು ಹೇಳುವ ಐಪಿಸಿ ಸೆಕ್ಷನ್ 486ರನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು ಮತ್ತು ಶಬರಿಮಲೆಗೆ ಮಹಿಳೆಯರ ಪ್ರವೇಶ ನಿರ್ಬಂಧ ತೆರವುಗೊಳಿಸುವ ಮೂಲಕ ಸಾಂವಿಧಾನನಿಕ ನೈತಿಕತೆಯನ್ನು ನ್ಯಾಯಾಲಯ ಎತ್ತಿ ಹಿಡಿದಿದೆ ಎಂದರು.
ಪತಿ ಯಜಮಾನನಲ್ಲ. ಪತ್ನಿ ಗುಲಾಮಳಲ್ಲ. ಲೈಂಗಿಕ ವಿಚಾರ ಸಹಿತವಾಗಿ ಎಲ್ಲ ವಿಚಾರಗಳಲ್ಲಿ ಇಬ್ಬರೂ ಸರಿಸಮಾನರು ಎಂಬ ಮೂಲಭೂತ ಮೌಲ್ಯಗಳು ದಂಡ ಸಂಹಿತೆಗೆ ಒಳಪಟ್ಟಿವೆ. ಈ ತೀರ್ಪು ಪುರುಷರಿಗೆ ಅಕ್ರಮ ಸಂಬಂಧ ಹೊಂದಲು ಪರವಾನಗೆ ನೀಡಿದಂತಾಗಿದೆ. ಸಾಮಾನ್ಯವಾಗಿ ಪತ್ನಿ ಅಕ್ರಮ ಸಂಬಂಧ ಹೊಂದುವ ಸಂದರ್ಭ ತೀರಾ ಕಡಿಮೆ. ಇದು ವ್ಯಭಿಚಾರದಲ್ಲಿ ತೊಡಗಲು ಎಲ್ಲರಿಗೂ ನೀಡಿದ ಅನುಮತಿ ಎಂಬತಾಗಿದೆ ಎಂದು ಹೇಳಿದರು.
ಗಂಡಿಗೆ ಗಂಡು, ಹೆಣ್ಣಿಗೆ ಹೆಣ್ಣು ಹಾಗೂ ಅವರಿಬ್ಬರೂ ಪರಸ್ಪರ ಶತ್ರುಗಳಾಗುತ್ತಾರೆ. ಸಾಂಪ್ರದಾಯಿಕ ಮನಸ್ಸಿಗೆ ಇದು ಮುಜುಗರ ನೀಡುತ್ತದೆ. ಇದರಿಂದ ಸಮಾಜದ ಸ್ವಾಸ್ಥ್ಯ ಇನ್ನಷ್ಟು ಕೆಡುತ್ತದೆ. ಅತ್ಯಾಚಾರ, ಲೈಂಗಿಕ ಕಿರುಕುಳ, ಸಂತಾನ ಶಕ್ತಿ ಹಗರಣಕ್ಕೆ ಬಲತ್ಕಾರ, ಗರ್ಭ ನಿರೋಧಕಗಳ ಬಳಕೆ, ಗರ್ಭಕೋಶ ತೆಗೆಯುವಿಕೆ ಇತ್ಯಾದಿ ವಿಚಾರಗಳು ಆಕೆಯನ್ನು ನೋವಿನ ಪಾತಾಳಕ್ಕೆ ತಳ್ಳಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಸಾಹಿತ್ಯ ಕೂಟದ ಅಧ್ಯಕ್ಷ ನಂಜಪ್ಪ ಕಾಳೇಗೌಡ, ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಎಸ್.ರಾಮಲಿಂಗೇಶ್ವರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕೆ.ವಿ.ನಾಗರಾಜಮೂರ್ತಿ ಉಪಸ್ಥಿತರಿದ್ದರು.