Advertisement

ವಿಡಿಯೋಗೆ ಹೆಚ್ಚಿನ ಮಾನ್ಯತೆ ಅನಗತ್ಯ

10:39 PM Nov 02, 2019 | Team Udayavani |

ಹುಬ್ಬಳ್ಳಿ: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಅನರ್ಹ ಶಾಸಕರ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭಾವನಾತ್ಮಕವಾಗಿ ಮಾತನಾಡಿದ್ದಾರೆಂಬುದಕ್ಕೆ ಅದು ಅವರದ್ದೇ ಧ್ವನಿ ಎನ್ನುವುದು ಗೊತ್ತಿಲ್ಲ. ಇದನ್ನು ಯಾರೇ ರೆಕಾರ್ಡ್‌ ಮಾಡಿದ್ದರೂ ತಪ್ಪು. ಇದಕ್ಕೆ ಹೆಚ್ಚಿನ ಮಾನ್ಯತೆ ಕೊಡಬಾರದು ಎಂದು ಉಪಮುಖ್ಯಮಂತ್ರಿ ಡಾ| ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತ ನಾಡಿ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ದುರಾಡಳಿತ ಅಂತ್ಯಗೊಳಿಸಬೇಕೆಂಬ ಅನರ್ಹ ಶಾಸಕರ ನಿಲುವು ಹೊಸ ಸರ್ಕಾರ ಬರಲು ದಿಕ್ಸೂಚಿ ಆಗಿದೆ. ಸಮ್ಮಿಶ್ರ ಸರ್ಕಾರ ಕೆಟ್ಟ ಆಡಳಿತ ನಡೆಸಿದರೂ ಅದನ್ನು ಸಹಿಸಿಕೊಳ್ಳುವಂತಾಗಿತ್ತು. ರಾಜ್ಯದ ಹಿತ ಕಾಯುವ, ಜನರಿಗೆ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಅನರ್ಹ ಶಾಸಕರು ಮಾಡಿದ ಕಾರ್ಯ ಶ್ಲಾಘನೀಯ.

ಅವರಿಗೆ ನಾವು ಎಷ್ಟು ಮಾನ್ಯತೆ, ಗೌರವ ಕೊಟ್ಟರೂ ಸಾಲದು. ಈಗ ಅವರ ಪ್ರಕರಣ ನ್ಯಾಯಾಲಯದಲ್ಲಿದೆ. ಯಡಿಯೂರಪ್ಪ ನಾಯಕತ್ವದ ಬಿಜೆಪಿ ಸರ್ಕಾರ ಹಾಗೂ ಸರ್ಕಾರದಲ್ಲಿನ ಅಭಿವೃದ್ಧಿ ಕಾರ್ಯ ನೋಡಿ ಜೆಡಿಎಸ್‌ ಪಕ್ಷ ಬೆಂಬಲ ವ್ಯಕ್ತಪಡಿಸಿರುವುದು ಬಹಳ ಸಂತಸದ ವಿಚಾರ ಎಂದರು. ಸಿದ್ದರಾಮಯ್ಯ ಅವರಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಹಕ್ಕಿಲ್ಲ. ಅವರಿಂದ ನಾವು ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು.

“ತೀರ್ಪಿನ ಬಳಿಕವೇ ಟಿಕೆಟ್‌ ನಿರ್ಧಾರ’
ಬೆಳಗಾವಿ: ಸುಪ್ರೀಂ ಕೋರ್ಟ್‌ ನೀಡುವ ತೀರ್ಪಿನ ಆಧಾರದ ಮೇಲೆ ಅನರ್ಹರಿಗೆ ಬಿಜೆಪಿ ಟಿಕೆಟ್‌ ನೀಡುವ ವಿಚಾರದ ಕುರಿತು ನಿರ್ಧರಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಮಾತನಾಡಿ, ತೀರ್ಪಿನ ನಂತರವೇ ಎಲ್ಲವೂ ನಿರ್ಧಾರವಾಗಲಿದ್ದು, ಅಲ್ಲಿಯವರೆಗೆ ಏನನ್ನೂ ಹೇಳಲು ಆಗುವುದಿಲ್ಲ. ವರಿಷ್ಠರು ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.

ಪಠ್ಯಪುಸ್ತಕದಿಂದ ಟಿಪ್ಪು ಕುರಿತಾದ ವಿಷಯವನ್ನು ಸಂಪೂರ್ಣ ತೆಗೆಯುವ ಬದಲು ಅವರ ಮತಾಂಧತೆ, ಕ್ರೌರ್ಯ ವಿಚಾರಗಳು ಜನರಿಗೆ ತಿಳಿಯುವಂತಾಗಬೇಕು. ಮಕ್ಕಳು ಅದನ್ನು ಓದಬೇಕು.
-ಡಾ| ಸಿ.ಎನ್‌.ಅಶ್ವತ್ಥನಾರಾಯಣ, ಡಿಸಿಎಂ

Advertisement
Advertisement

Udayavani is now on Telegram. Click here to join our channel and stay updated with the latest news.

Next