Advertisement

ಸಹೋದರರ ಕಮಾಲ್

10:53 AM Aug 30, 2019 | Team Udayavani |

ಚಿಕ್ಕೋಡಿ: ಗ್ರಾಮಕ್ಕೆ ಪ್ರವಾಹ ಒತ್ತರಿಸಿ ಬಂದು ಮನೆಯನ್ನೇ ಬಿಟ್ಟು ಆಶ್ರಯ ಅರಸಿ ಹೊರಟವರಿಗೆ ಆಶ್ರಯ ನೀಡಿದ್ದು ಪಾಟೀಲ ಮನೆತನದ ಇಬ್ಬರು ಸಹೋದರರು.

Advertisement

ಇಪ್ಪತ್ತಲ್ಲ, ಮೂವತ್ತಲ್ಲ ಬರೋಬ್ಬರಿ ನಾಲ್ಕೈದು ನೂರು ನಿರಾಶ್ರಿತರಿಗೆ ತಮ್ಮ ಮನೆಯಲ್ಲೇ ಆಶ್ರಯ ನೀಡಿ, ಎರಡು ಹೊತ್ತಿನ ಊಟ, ಉಪಾಹಾರ ಹಾಗೂ ಚಹಾ ವ್ಯವಸ್ಥೆ ಕಲ್ಪಿಸಿ, ಅವರ ಮೊಬೈಲ್ ಚಾರ್ಜ್‌ ಮಾಡಿಕೊಳ್ಳಲು ಕೂಡ ವ್ಯವಸ್ಥೆ ಮಾಡಿಕೊಟ್ಟಿದ್ದು, ಶ್ಲಾಘನೀಯ ವಿಷಯ.

ಪ್ರವಾಹ ಹಳ್ಳಿಗಳನ್ನು ಆವರಿಸಿ ಸಂತ್ರಸ್ತರು ಗೋಳಾಡುವ ಪರಿಸ್ಥಿತಿ ನಿರ್ಮಾಣವಾದಾಗ ಸುರಕ್ಷಿತ ಸ್ಥಳದಲ್ಲಿದ್ದ ಈ ಇಬ್ಬರು ಸಹೋದರರು ಗ್ರಾಮದ ನಾಲ್ಕೈದು ನೂರು ಸಂತ್ರಸ್ತರಿಗೆ ಆಶ್ರಯ ನೀಡಿ ಊಟ ಉಪಚಾರ ನೀಡುವ ಮೂಲಕ ಜೀವ ರಕ್ಷಕರೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಕಳೆದ 20 ದಿನಗಳ ಹಿಂದೆಯಷ್ಟೇ ಕೃಷ್ಣಾ ಮತ್ತು ಉಪನದಿಗಳಿಗೆ ಅಬ್ಬರದ ಮಹಾಪ್ರವಾಹ ಉಂಟಾಗಿ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮ ಸಂಪೂರ್ಣ ಮುಳುಗಡೆಗೊಂಡಿತ್ತು. ಇಂತಹ ಸಂದರ್ಭದಲ್ಲಿ ಅಪ್ಪಾಸಾಹೇಬ ಶಂಕರ ಪಾಟೀಲ, ಬಾಬು ಶಂಕರ ಪಾಟೀಲ ನಿಸ್ವಾರ್ಥದಿಂದ ಸುಮಾರು ನಾಲ್ಕ್ತ್ರೈದು ನೂರು ಜನರಿಗೆ ಆಶ್ರಯ ನೀಡಿ ಅವರಿಗೆ ಪ್ರತಿದಿನ ಎರಡು ಹೊತ್ತು ಊಟ, ಉಪಹಾರ, ಚಹಾ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಗ್ರಾಮದ ಬದಿಯಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತ್ತಿದೆ. ಮತ್ತೂಂದು ಕಡೆ ಹಿನ್ನೀರಿನಿಂದ ಹಳ್ಳ ಭೋರ್ಗರೆಯುತ್ತಿದೆ. ಇಡೀ ಗ್ರಾಮವನ್ನೇ ಕೃಷ್ಣಾ ನದಿ ಪ್ರವಾಹ ಸುತ್ತುವರಿದಿದೆ. ರಸ್ತೆಗಳ ಮಧ್ಯೆ ಕುತ್ತಿಗೆ ತನಕ ನೀರು ಆವರಿಸಿಕೊಂಡಿದೆ. ನೀರಲ್ಲಿ ಸ್ವಲ್ಪ ಕಾಲು ಇಟ್ಟರೆ ನೀರಿನ ಸೆಳೆತ ಯಾವ ಕಡೆಗೆ ಜನರನ್ನು ಎಳೆದುಕೊಂಡು ಹೋಗುತ್ತದೋ ಗೊತ್ತಿಲ್ಲ. ಇದನ್ನು ನೋಡಿದ ಜನರು ಭಯಭೀತರಾಗಿದ್ದಾರೆ. ಅದೇ ಗ್ರಾಮದ ಸುರಕ್ಷಿತ ಸ್ಥಳದಲ್ಲಿದ್ದ ಪಾಟೀಲ ಮನೆತನವೇ ನಾಲ್ಕ್ತ್ರೈದು ನೂರು ಜನರಿಗೆ ಆಶ್ರಯ ತಾಣವಾಗಿತ್ತು. ಸಂತ್ರಸ್ತರಿಗೆ ಅಷ್ಟೇ ಅಲ್ಲದೇ ನೂರಕ್ಕೂ ಹೆಚ್ಚಿನ ಜಾನುವಾರುಗಳಿಗೂ ಆಶ್ರಯ ನೀಡಿ ಅನುಕೂಲ ಕಲ್ಪಿಸಿರುವ ಪಾಟೀಲ ಕುಟುಂಬಕ್ಕೆ ಆಶ್ರಯ ಪಡೆದುಕೊಂಡಿರುವ ಸಂತ್ರಸ್ತರು ಧನ್ಯವಾದ ಅರ್ಪಿಸುತ್ತಿದ್ದಾರೆ.

Advertisement

ಕೃಷ್ಣಾ ನದಿ ಪ್ರವಾಹ ಕಳೆದ ಐದಾರು ದಿನಗಳಿಂದ ಇತ್ತು. ಪ್ರವಾಹ ಹಿನ್ನೆಲೆಯಲ್ಲಿ ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿ ವಿದ್ಯುತ್‌ ಕಡಿತಗೊಂಡಿದೆ. ಇದರಿಂದ ಆಶ್ರಯ ಪಡೆದುಕೊಂಡಿರುವ ಜನರು ಕತ್ತಲಲ್ಲಿ ಕಾಲ ಕಳೆಯುವುದನ್ನು ಗಮನಿಸಿದ ಪಾಟೀಲ ಸಹೋದರರು ಬೆಳಕಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಕೊಳವೆ ಬಾವಿಯಿಂದ ನೀರಿನ ಸೌಲಭ್ಯವನ್ನು ಕೂಡ ಕಲ್ಪಿಸಿದರು. ಸಂತ್ರಸ್ತರ ಮೊಬೈಲ್ ಚಾರ್ಜ್‌ಗೂ ವಿದ್ಯುತ್‌ ಕಲ್ಪಿಸಿದರು. ಇಂತಹ ದಾನಿಗಳು ಇಂದಿನ ದಿನಮಾನಗಳಲ್ಲಿ ಸಿಗುವುದು ಅಪರೂಪ ಎನ್ನುತ್ತಾರೆ ಸಂತ್ರಸ್ತ ಶಂಕರ ಖಾನಡೆ.

ಸ್ವಾರ್ಥ ದಿಂದ ಕೂಡಿದ ಇಂದಿನ ದಿನಮಾನಗಳಲ್ಲಿ ನಿಸ್ವಾರ್ಥ ದಿಂದ ಸಂಕಷ್ಟದಲ್ಲಿ ಇರುವ ಸಂತ್ರಸ್ತರ ನೆರವಿಗೆ ಧಾವಿಸಿ ನಾಲ್ಕೈದು ದಿನಗಳಿಂದ ಯಡೂರವಾಡಿ, ಚೆಂದೂರ, ಯಡೂರ ತೋಟಪಟ್ಟಿ ಜನವಸತಿ ಪ್ರದೇಶದ ಜನರಿಗೆ ಊಟ, ಉಪಚಾರ ಮತ್ತು ಜಾನುವಾರಗಳಿಗೆ ಮೇವಿನ ಅನುಕೂಲ ಕಲ್ಪಿಸಿರುವ ಅಪ್ಪಾಸಾಹೇಬ ಮತ್ತು ಬಾಬು ಪಾಟೀಲ ಸೇವೆ ಮರೆಯಲು ಸಾಧ್ಯವಿಲ್ಲ.• ಮಹೇಶ ಬೇಡಗೆ, ಯಡೂರವಾಡಿ ಸಂತ್ರಸ್ತ

ಕೃಷ್ಣಾ ನದಿ ಪ್ರವಾಹದಲ್ಲಿ ಕಳೆದ 2005ರಲ್ಲಿ ಯಡೂರವಾಡಿ ಗ್ರಾಮಕ್ಕೆ ನೀರು ಬಂದಿರಲಿಲ್ಲ, ಈ ಪ್ರವಾಹದಲ್ಲಿ ಅರ್ಧಕ್ಕಿಂತ ಹೆಚ್ಚಿಗೆ ಗ್ರಾಮ ಮುಳುಗಡೆಗೊಂಡಿದ್ದ ಕೆಲವು ಜನರು ಬೇರೆ ಕಡೆಗೆ ಹೋಗಿದ್ದು. ಕೆಲವರು ನಮ್ಮ ಮನೆ ಸುತ್ತಮುತ್ತ ಪ್ರದೇಶದಲ್ಲಿ ಉಳಿದುಕೊಂಡಿದ್ದರು. ಅವರಿಗೆ ಆಗಲೂ ಈಗಲೂ ಎಲ್ಲ ರೀತಿಯ ಅನುಕೂಲ ಕಲ್ಪಿಸಿರುವುದು ನನಗೆ ಖುಷಿ ತಂದಿದೆ.• ಅಪ್ಪಾಸಾಹೇಬ ಶಂಕರ ಪಾಟೀಲ, ಯಡೂರವಾಡಿ

 

•ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next