ಕೋಲಾರ: ಕೋವಿಡ್ ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಸೂಚಿಸಿರುವ ಭಾನುವಾರದ ಲಾಕ್‌ಡೌನ್‌ಗೆ ಜಿಲ್ಲೆಯ ಜನ ಸ್ಪಂದಿಸಿದ್ದು, ಆಟೋ, ಬಸ್‌ಗಳ ಸಂಚಾರ, ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ಜನರು ಸಹ ರಸ್ತೆಗಿಳಿಯದೇ ಮನೆಯಲ್ಲೇ ಉಳಿದು ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡಿದರು.
ಕೋಲಾರ ಜಿಲ್ಲೆಯಲ್ಲೂ ಕೋವಿಡ್ ಸೋಂಕಿತರ ಸಂಖ್ಯೆ 900ರ ಗಡಿ ದಾಟಿದೆ. ಎಲ್ಲಿ ನೋಡಿದರೂ ಕೋವಿಡ್ ವೈರಸ್ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಜನತೆಯಲ್ಲೂ ಕೋವಿಡ್ ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಜನರು ಭಾನುವಾರದ ಲಾಕ್‌ಡೌನ್‌ಗೆ ಬೆಂಬಲ ವ್ಯಕ್ತಪಡಿಸಿದರು.
ಕೋವಿಡ್ ಮಾರಕತೆ ಅರಿತಿರುವ ಜನತೆ ಭಾನುವಾರ ಬೆಳಗ್ಗೆ ಮನೆಬಿಟ್ಟು ಹೊರ ಬರಲೇ ಇಲ್ಲ, ನಗರದ ಎಲ್ಲಾ ರಸ್ತೆಗಳು ಬಿಕೋ ಎನ್ನುತ್ತಿದ್ದು, ಅಂಗಡಿ, ಮುಂಗಟ್ಟು ಗಳು, ಹೋಟೆಲ್, ರಸ್ತೆ ಬದಿ ವ್ಯಾಪಾರ, ಚಿತ್ರಮಂದಿರಗಳು ಸಂಪೂರ್ಣ ಬಂದ್ ಆಗಿತ್ತು. ನಗರದ ಸದಾ ಜನನಿಬಿಡ ಎಂ.ಜಿ. ರಸ್ತೆ, ದೊಡ್ಡಪೇಟೆ, ಕಾಳಮ್ಮನ ಗುಡಿ ಬೀದಿ, ಅಮ್ಮವಾರಿಪೇಟೆ, ಬಸ್‌ನಿಲ್ದಾಣ ವೃತ್ತಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಮಾಂಸದಂಗಡಿ ಕೂಡ ಬಂದ್: ಶ್ರಾವಣ ಮಾಸದಲ್ಲಿ ಮಾಂಸದೂಟ ಮಾಡದ ಕಾರಣ ವಹಿವಾಟು ನಡೆಯದ ಹಿನ್ನೆಲೆಯಲ್ಲಿ ಮಾಂಸದ ಅಂಗಡಿಗಳು ವಿರಳವಾಗಿ ತೆರೆದಿದ್ದರೂ ವ್ಯಾಪಾರದ ಜೋರು ಇರಲಿಲ್ಲ. ಹೀಗಾಗಿ ಬಹುತೇಕ ಅಂಗಡಿಗಳು ಬಂದ್ ಆಗಿದ್ದವು. ಹಾಲು, ಔಷಧಿಗಳ ದಿನಸಿ ಅಂಗಡಿ ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬಂದ್ ಆಗಿತ್ತು. ದಿನಸಿ ಅಂಗಡಿಗಳನ್ನು ಸಹಾ ಮಧ್ಯಾಹ್ನ 11 ಗಂಟೆಯ ನಂತರ ಪೊಲೀಸರು ಮುಚ್ಚಿಸಿದರು.
ಬಸ್, ವಾಹನಗಳ ಓಡಾಟ ನಿಷೇಧ: ಸಾರಿಗೆ ಸಂಸ್ಥೆ ಬಸ್‌ಗಳನ್ನು ರಸ್ತೆಗಿಳಿಸದ ಕಾರಣ ನಗರದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಬಸ್‌ಗಳಿಲ್ಲದೇ ಖಾಲಿಯಾಗಿತ್ತು. ಇಡೀ ನಗರದಲ್ಲಿ ಆಟೋ ಸಂಚಾರವೂ ರದ್ದಾಗಿತ್ತು. ಭಾನುವಾರವಾದ್ದರಿಂದ ಸರ್ಕಾರಿ ಕಚೇರಿ ಗಳು ಬಂದ್ ಆಗಿತ್ತು. ದ್ವಿಚಕ್ರ ವಾಹನಗಳು ಅಲ್ಲೊಂದು,ಇಲ್ಲೊಂದು ಓಡಾಡಿದ್ದು ಬಿಟ್ಟರೆ ನಗರದಲ್ಲಿ ಯಾವುದೇ ವಾಹನ ಸಂಚಾರ ಕಂಡು ಬರಲೇ ಇಲ್ಲ. ಅಲ್ಲಲ್ಲಿ ಮೆಡಿಕಲ್ ಸ್ಟೋರ್, ಹಾಲಿನ ಬೂತ್ ತೆರೆದಿದ್ದು ಕಂಡು ಬಂತಾದರೂ ಜನರಿಲ್ಲದೇ 12 ಗಂಟೆ ವೇಳೆಗೆ ಅವೂ ಬಂದ್ ಆದವು. ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆ ಎಂಬ ಖ್ಯಾತಿಗೆ ಕಾರಣವಾಗಿರುವ ಎಪಿಎಂಸಿ ಮಾರುಕಟ್ಟೆ ರೈತರ ಹಿತ ದೃಷ್ಟಿಯಿಂದ ಭಾನು ವಾರ ತನ್ನ ವಹಿವಾಟು ಮುಂದುವೆರಿಸಿತ್ತು. ಆದರೂ ಪ್ರತಿದಿನ ಇರುವ ಜನಸಂದಣಿ ಇಂದು ಕಂಡು ಬರಲಿಲ್ಲ. ಯಾವುದೇ ಬಂದ್, ಪ್ರತಿಭಟನೆಗೆ ಸ್ಪಂದಿಸದೇ ವಹಿ ವಾಟು ನಡೆಸುತ್ತಿದ್ದ ಕ್ಲಾಕ್ ಟವರ್‌ನ ವರ್ತಕರು, ಅಂಗಡಿಗಳವರು ಭಾನುವಾರ ಬಂದ್ ಮಾಡಿದ್ದರು.