ಮೈಸೂರು: ಕೊಡಗು ರೈಲ್ವೆ ಯೋಜನೆ ವಿರೋಧಿಸಿ ಕೊಡಗು ರೈಲ್ವೆ ಮಾರ್ಗ ವಿರೋಧಿ ಹೋರಾಟ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಭಾನುವಾರ ನಗರದಲ್ಲಿ ಬಹೃತ್ ಪ್ರತಿಭಟನಾ ರ್ಯಾಲಿ ಹಾಗೂ ಪ್ರತಿಭಟನಾ ಸಭೆ ನಡೆಸಲಾಯಿತು.
ನಗರದ ಇಟ್ಟಿಗೆಗೂಡಿನ ಡಿ.ದೇವರಾಜು ಅರಸು ಕುಸ್ತಿ ಅಖಾಡದ ಆವರಣದಿಂದ ಆರಂಭಿಸಿ ಪ್ರಮುಖ ರಸ್ತೆಗಳಲ್ಲಿ ಕಪ್ಪು ಬಟ್ಟೆ ಧರಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕೊಡಗು ಜಿಲ್ಲೆ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸಲು ನಿರ್ಮಿಸುತ್ತಿರುವ ರೈಲ್ವೆ ಮಾರ್ಗ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಅಗಲೀಕರಣ ಪ್ರಸ್ತಾಪವನ್ನು ಕೈಬಿಡುವಂತೆ ಆಗ್ರಹಿಸಿ ವಿವಿಧ ಘೋಷಣೆಗಳನ್ನು ಕೂಗಿದರು.
ಕೊಡಗು ಜಿಲ್ಲೆಯಲ್ಲಿ ರೈಲ್ವೆ ಹಳಿ ನಿರ್ಮಿಸಿ ಜೀವನದಿ ಕಾವೇರಿ ನದಿ ಬತ್ತಿ ಹೋಗುವಂತೆ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರಲ್ಲದೆ, ಯಾವುದೆ ಒತ್ತಡಕ್ಕೂ ಜಗ್ಗದೆ, ನಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಪ್ರಾಣ ತ್ಯಾಗಕ್ಕೂ ಸಿದ್ಧ ಎಂಬ ಸಂದೇಶ ಸಾರಿದರು.
ರಾಜಕೀಯೇತರವಾಗಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್, ಬಿಜೆಪಿ ಮುಖಂಡರು, ಹೊಟೇಲ್ ಉದ್ಯಮಿಗಳು, ಟ್ರಾವೆಲ್ಸ್ ಏಜೆಂಟ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಭಾಗವಹಿಸಿ ಬೆಂಬಲ ಸೂಚಿಸಿದರು. ಇವರೊಂದಿಗೆ ಕೊಡಗಿನಲ್ಲಿ ವಾಸಿಸುವ ಮಲೆಯಾಳಿ ಸಂಘದ ಕಾರ್ಯಕರ್ತರು, ಇಸ್ಲಾಂ ಸಂಘಟನೆಯ ಸದಸ್ಯರು, ಕೇರಳದ ಕಣ್ಣೂರಿನ ಪರಿಸರವಾದಿಗಳು ಸೇರಿದಂತೆ ಕೊಡಗಿನ 20ಕ್ಕೂ ಹೆಚ್ಚು ಸಂಘಟನೆಗಳು, ವಿವಿಧ ಸಮುದಾಯಗಳ ಸಂಘಟನೆಗಳು,
ಆದಿವಾಸಿ ಸಂಘಟನೆಗಳು ಸೇರಿದಂತೆ ಸಾವಿರಾರು ಪರಿಸರ ಪ್ರೇಮಿಗಳು, ಹಿರಿಯ ನಾಗರಿಕರು, ಯುವಕರು, ವಿದ್ಯಾರ್ಥಿಗಳು, ಮಕ್ಕಳು, ಮಹಿಳೆಯರು ಸಹ ಬಾಗವಹಿಸಿದ್ದರು. ಇವರೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ 50ಕ್ಕೂ ಹೆಚ್ಚು ಮಂದಿ ಬೈಕ್ ಸವಾರರು, ಕಾವೇರಿ ನದಿಯ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ಮಾಹಿತಿ ನೀಡುವ ಆರೇಳು ಸ್ತಬ್ಧಚಿತ್ರಗಳು, ಆದಿವಾಸಿಗಳ ಸಾಂಸ್ಕೃತಿಕ ತಂಡದ ಸದಸ್ಯರು ಸಾರ್ವಜನಿಕರ ಗಮನ ಸೆಳೆದರು.